Advertisement
ಈ ಬಾರಿಯ ಪರೀಕ್ಷೆಯಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಜಿಲ್ಲೆಯ ಅಥರ್ಗಾ ಮೂಲದ ಸವಿತಾ ಗೋಟ್ಯಾಳ ಹಾಗೂ ನಿಖಿಲ್ ಪಾಟೀಲ್ ಇಬ್ಬರು ಆಯ್ಕೆಯಾಗಿದ್ದಾರೆ. ಸವಿತಾ ಗೋಟ್ಯಾಳ ಅವರು ಎರಡನೇ ಬಾರಿಗೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದಾರೆ. ತಾಳಿಕೋಟೆಯ ನಿಖಿಲ್ 139ನೇ ರ‍್ಯಾಂಕ್ ಮೂಲಕ ಉತ್ತಮ ಸಾಧನೆ ಮೆರೆದಿದ್ದಾರೆ.
ಕಳೆದ ಬಾರಿಯ ಫಲಿತಾಂಶದಲ್ಲಿ 626ನೇ ರ‍್ಯಾಂಕ್ ಮೂಲಕ ಕೇಂದ್ರದ ಐಪಿ-ಟಿಎಎಫ್‍ಎಸ್ ಸೇವೆಯಲ್ಲಿರುವ ಸವಿತಾ ಗೋಟ್ಯಾಳ, ಈ ಬಾರಿ ಮತ್ತೆ ಪರೀಕ್ಷೆ ಎದುರಿಸಿ 479ನೇ ಸ್ಥಾನ ಪಡೆಯವ ಮೂಲಕ 143 ಸ್ಥಾನ ಮೇಲಕ್ಕೇರಿ ತಮ್ಮ ಸಾಧನೆಯನ್ನು ಉತ್ತಮವಾಗಿ ಮೇಲಿದ್ದಿದ್ದಾರೆ. ಬಿಎಸ್‍ಎನ್‍ಎಲ್ ನಿವೃತ್ತ ನೌಕರ ಎಸ್.ಎಚ್.ಗೋಟ್ಯಾಳ ಹಾಗೂ ಜಯಶ್ರೀ ಅವರ ಪುತ್ರಿಯಾಗಿರುವ ಸವಿತಾ, ಎಂಜಿನಿಯರ್ ಪದವೀಧರೆ. ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಕನ್ನಡ ಶಾಲೆಯಲ್ಲಿ ಓದಿದ್ದು, ಬಳಿಕ ವಿಜಯಪುರ ನಗರದ ಪಿಡಿಜೆ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದಾಳೆ. ನಂತರ ಬೆಂಗಳೂರಿನ ಪಿಇಎಸ್ಐಟಿ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದಾರೆ.
Related Articles
Advertisement
ಹಿಂದಿನ ಆಯ್ಕೆಯಂತೆ ಸದ್ಯ ತರಬೇತಿಯಲ್ಲಿ ಇರುವ ಕಾರಣ ಯಪಿಎಸ್‍ಸಿ ಪರೀಕ್ಷೆಯಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಹೆಚ್ಚಿನ ಸಮಯ ಸಿಗಲಿಲ್ಲ ಎಂಬ ಕೊರಗು ಸವಿತಾ ಅವರನ್ನು ಕಾಡುತ್ತಿದೆ. ಸಿಕ್ಕ ಸಮಯವಲ್ಲದೇ ವಾರದ ರಜೆಯನ್ನು ಸಂಪೂರ್ಣ ಅಧ್ಯಯನಕ್ಕೆ ಮೀಸಲಿಟ್ಟಿದ್ದೆ ಎಂದು ಸವಿತಾ ವಿವರಿಸಿದ್ದಾರೆ.
ಎಂಜಿಯರ್ ಪದವೀಧರೆಯಾದರೂ ಶೈಕ್ಷಣಿಕ ಹಂತದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ನನಗೆ ವಿಶೇಷ ಆಸಕ್ತಿ ಇತ್ತು. ಹೀಗಾಗಿ ಕನ್ನಡ ಸಾಹಿತ್ಯವನ್ನೇ ಪ್ರಧಾನ ವಿಷವಾಗಿ ಆಯ್ಕೆ ಮಾಡಿಕೊಂಡಿದ್ದೆ. ಈ ಬಾರಿಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಸೆಳೆತದಿಂದಾಗಿ ಅಧ್ಯಯನ ಸುಲಭವಾಯಿತು ಎಂದು ಗೋಟ್ಯಾಳ ವಿವರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಹಂತದಲ್ಲಿ ಅಗಧವಾಗಿರುವ ಜ್ಞಾನಮೂಲಗಳನ್ನು ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಸಂಪಾದನೆಗೆ ಮುಂಧಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗುರಿ ಸಾಧನೆಗಾಗಿ ಶ್ರದ್ಧೆಯ ಅಧ್ಯಯನ ಮಾಡಿದರೆ ಯುಪಿಎಸ್‍ಸಿ ಪರೀಕ್ಷೆ ಎದುರಿಸುವುದು ಕಬ್ಬಿಣದ ಕಡಲೆಯಲ್ಲ ಎಂದು ಸವಿತಾ ಅನುಭವ ಹಂಚಿಕೊಳ್ಳುತ್ತಾರೆ.
ಯುಪಿಎಸ್‍ಸಿ ಪರೀಕ್ಷೆಯಲ್ಲಿ ನಿಖಿಲ ಕಿಲಕಿಲ
ಪ್ರಸಕ್ತ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷಾ ಫಲಿತಾಂಶದಲ್ಲಿ 139ನೇ ರ‍್ಯಾಂಕಿಂಗ್ ಸಾಧನೆ ಮಾಡಿರುವ ನಿಖಿಲ್ ಪಾಟೀಲ್ ಕೂಡ ಎಂಜಿನಿಯರ್ ಪದವೀಧರ. ಜಿಲ್ಲೆಯ ತಾಳಿಕೋಟೆ ಮೂಲದ ನಿಖಿಲ್ ಅವರ ತಂದೆ ಗೋಕಾಕ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೇವೆಯಲ್ಲಿದ್ದಾರೆ. ಕಾರಣ ಗೋಕಾಕನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಬಳಿಕ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ವಸತಿ ಶಾಲೆಯಲ್ಲಿ ಮುಗಿಸಿದ್ದಾರೆ. ಪಿ.ಇ.ಎಸ್.ಐ.ಟಿ. ಇಂಜನಿಯರಿಂಗ್ ಕಾಲೇಜಿನಲ್ಲಿ ಬಿಇ. ಪದವಿ ಪೂರೈಸಿದ್ದಾರೆ.
ನಿಖಿಲ್ ಅವರ ತಾಯಿಯ ತಂದೆ ಶಂಕ್ರಪ್ಪ ಪಾಟೀಲ ತಹಶೀಲ್ದಾರ ಆಗಿದ್ದರು. ಅಜ್ಜನಂತೆ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವ ಮಹದಾಸೆಯೊಂದಿಗೆ ಬಾಳ್ಯದಿಂದಲೇ ಐಎಎಸ್ ಕನಸು ಕಟ್ಟಿಕೊಂಡಿದ್ದರು.
ಮೆಕಾನಿಕಲ್ ಎಂಜಿಯರ್ ಆಗಿರುವ ನಿಖಿಲ್ ಯುಪಿಎಸ್‍ಸಿ ಪರೀಕ್ಷೆ ಬರೆದು ಐಎಎಸ್ ಆಗುವ ಕನಸು ಕಂಡವರು. ಇದಕ್ಕಾಗಿ 4 ಬಾರಿಯ ಪ್ರಯತ್ನದ ಬಳಿಕ ಉತ್ತಮ ಫಲಿತಾಂಶದೊಂದಿಗೆ ವಿಜಯವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಉನ್ನತ ಅಧಿಕಾರಿ ಆಗುವ ನನ್ನ ಕನಸಿಗೆ ಅಳಿಕೆ ಶ್ರೀಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲೂ ಉತ್ತಮ ಮಾರ್ಗದರ್ಶನದ ಶಿಕ್ಷಣ ನೀಡಲಾಯಿತು. ಜೀವನದಲ್ಲಿ ಸಾಧನೆಗಾಗಿ ಸಾಮಾಜಿಕ ಸೇವೆ, ತ್ಯಾಗ, ಸಹಾಯ, ಮಾನವೀಯತೆಯಂಥ ಅಗತ್ಯ ಸಂಸ್ಕಾರದ ಮೌಲ್ಯಗಳ ಬೋಧಿಸಿದರು. ಇದು ನನ್ನಲ್ಲಿ ಮನೆ ಮಾಡಿದ್ದ ಉನ್ನತ ಹುದ್ದೆಗೇರಿ ಸೇವೆ ಮಾಡುವ ಛಲಕ್ಕೆ ಸ್ಫೂರ್ಥಿಯಾಯ್ತು ಎನ್ನುತ್ತಾರೆ ನಿಖಿಲ್.
ಪರಿಣಾಮ ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತು ನವದೆಹಲಿಯ ವಾಜಿರಾಮ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ನಿಖಿಲ್ ಕೇಂದ್ರ ಸೇವೆ ಮಾಡುವ ಕನಸು ನನಸಾಗಿದೆ. ಪರೀಕ್ಷಾ ತರಬೇತಿ ಹಂತದಲ್ಲಿ ಶ್ರದ್ದೆಯಿಂದ ಆಲಿಸಿದೆ, ಕನ್ನಡ ಸಾಹಿತ್ಯವನ್ನು ಪ್ರಧಾನ ವಿಷಯವಾಗಿ ಆಯ್ಕೆಮಾಡಿಕೊಂಡು ಬದ್ಧತೆಯಿಂದ ಓದಿದೆ. ನವದೆಹಲಿಯ ತರಬೇತಿ ಬಳಿಕ ಬೆಂಗಳೂರಿನಲಿಕಿದ್ದುಕೊಂಡು ಓದಿಗೆ ವಿಶೇಷ ಆದ್ಯತೆ ನೀಡಿದೆ ಎಂದು ತಮ್ಮ ಪರಿಶ್ರಮದ ಸಾಧನೆಯ ಹಾದಿಯನ್ನು ವಿವರಿಸುತ್ತಾರೆ ನಿಖಿಲ್ .
ಯುಪಿಎಸ್‍ಸಿ ಪರೀಕ್ಷೆ ಎದುರಿಸುವುದಕ್ಕಾಗಿ ಸಾಮಾನ್ಯ ದಿನಗಳಲ್ಲಿ 8 ಗಂಟೆ ಓದುತ್ತಿದ್ದ ನಾನು, ಪರೀಕ್ಷೆ ಸಮೀಪದ ತಿಂಗಳಲ್ಲಿ ಓದಿನ ಸಮಯವನ್ನು 12 ತಾಸಿಗೆ ಹೆಚ್ಚಿಸಿಕೊಂಡು ಪರಿಶ್ರಮದಿಂದ ಓದಿದೆ. ಗುರಿ ಸಾಧಿಸುವ ಛಲದೊಂದಿಗೆ ಬದ್ಧತೆ ಹಾಗೂ ಪರಿಶ್ರಮ ಓದು ಇಂದು ನನ್ನನ್ನು ಗೆಲ್ಲಿಸಿದೆ ಎನ್ನುವುದು ಸಾಧನೆಗಾಗಿ ಮೊಗದಲ್ಲಿ ಕಿಲಕಿಲ ನಡೆ ಮೂಡಿಸಿಕೊಂಡಿರುವ ನಿಖಿಲ್ ಮನದಾಳದ ಮಾತು.