ಹುಣಸೂರು: ಮುಡಿಕೊಡಲು ಹೋಗಿದ್ದ ವೇಳೆ ಸ್ನಾನ ಮಾಡಲು ನೀರಿಗಿಳಿದ ಹುಣಸೂರು ತಾಲೂಕಿನ ಮಲ್ಲಿನಾಥಪುರದ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ವಿಶ್ವೇಶ್ವರಯ್ಯ ನಾಲೆಯಲ್ಲಿ ಜರುಗಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಮಲ್ಲಿನಾಥಪುರದ ಕೆ.ಬಸವರಾಜ್ (26 ವ) ಹಾಗೂ ಜವರೇಗೌಡ (36 ವ) ಮೃತಪಟ್ಟವರು.
ಬಸವರಾಜ್ ಅವರು ಕುಟುಂಬ ಸಮೇತರಾಗಿ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಹಿನ್ನೀರಿನ ಕನ್ನಂಬಾಡಮ್ಮ ದೇವರಿಗೆ ಮಗುವಿನ ಮುಡಿ ಕೊಡಲು ತೆರಳಿದ್ದರು. ಕನ್ನಂಬಾಡಮ್ಮ ದೇವರ ಉತ್ಸವದ ಹಿನ್ನೆಲೆಯಲ್ಲಿ ನಾಲೆಯಲ್ಲಿ ನೀರಿನ ಹರಿವು ಹೆಚ್ಚಿಸಲಾಗಿತ್ತು. ಇದನ್ನರಿಯದ ಬಸವ ಮಗುವಿನ ಮುಡಿಗೂ ಮುನ್ನ ಸ್ನಾನ ಮಾಡಲು ನಾಲೆಯಲ್ಲಿ ಬಿಂದಿಗೆಯಲ್ಲಿ ನೀರು ತೆಗೆದುಕೊಳ್ಳಲು ತೆರಳಿದ್ದ ವೇಳೆ ಕಾಲುಜಾರಿ ಬಿದ್ದಿದ್ದಾರೆ, ಇವರನ್ನು ಕಾಪಾಡಲು ಹೋದ ಸಂಬಂಧಿ ಜವರೇಗೌಡರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ದೇವರ ದರ್ಶನ, ಮಗುವಿನ ಮುಡಿ ಸಂಭ್ರಮದಲ್ಲಿದ್ದ ಕುಟುಂಬ ಇಬ್ಬರು ಕೊಚ್ಚಿ ಹೋಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿ ಕೂಗಿಕೊಂಡಿದ್ದಾರೆ, ಅಕ್ಕಪಕ್ಕದಲ್ಲಿದ್ದವರು ಬಂದರಾದರೂ ಅದಾಗಲೇ ಇಬ್ಬರೂ ಆಳದ ನಾಲೆಯ ನೀರಿನಲ್ಲಿ ಮುಳುಗಿದ್ದರು. ಪೊಲೀಸರು ಸ್ಥಳೀಯರ ನೆರವಿನಿಂದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಿದ್ದಾರೆ.
ಸ್ವಗ್ರಾಮಕ್ಕೆ ಶವಗಳನ್ನು ತಂದ ವೇಳೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ವಿಷಯ ತಿಳಿದ ಶಾಸಕ ಮಂಜುನಾಥ್ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.