Advertisement

ದ್ವಿಪಥ ರೈಲು ಮಾರ್ಗ ಲೋಕಾರ್ಪಣೆ

04:03 PM Dec 17, 2018 | |

ದಾವಣಗೆರೆ: ದಾವಣಗೆರೆ ಮತ್ತು ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯ ದ್ವಿಪಥ ರೈಲು ಮಾರ್ಗದ ಮೊದಲ ಹಂತದ ತೋಳಹುಣಸೆ- ಮಾಯಕೊಂಡ ನಡುವೆ 19 ಕಿಲೋ ಮೀಟರ್‌ ಉದ್ದದ ದ್ವಿಪಥ ರೈಲು
ಮಾರ್ಗ ಭಾನುವಾರ ಲೋಕಾರ್ಪಣೆಗೊಂಡಿತು. 

Advertisement

190 ಕಿಲೋ ಮೀಟರ್‌ ಅಂತರದ ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ 1,141 ಕೋಟಿ ವೆಚ್ಚದ ದ್ವಿಪಥ ರೈಲು ಮಾರ್ಗ ಕಾಮಗಾರಿ 2015-16ನೇ ಸಾಲಿನಲ್ಲಿ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ತೋಳಹುಣಸೆ- ಮಾಯಕೊಂಡ ನಡುವೆ
19 ಕಿಲೋ ಮೀಟರ್‌ ಉದ್ದದ ದ್ವಿಪಥ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ತೋಳಹುಣಸೆ- ಮಾಯಕೊಂಡ ನಡುವೆ ಹನುಮನಹಳ್ಳಿ(ನಿಲುಗಡೆ), ಕೊಡಗನೂರು, ಮಾಯಕೊಂಡ ರೈಲ್ವೆ ನಿಲ್ದಾಣಗಳು ಬರಲಿದೆ. 19 ಕಿಲೋ ಮೀಟರ್‌ ಉದ್ದದ ದ್ವಿಪಥ ಮಾರ್ಗದಲ್ಲಿ 19 ಸಣ್ಣ, 9 ದೊಡ್ಡ ಹಾಗೂ 7 ಕೆಳ ಸೇತುವೆ  ಇವೆ. ಮಾಯಕೊಂಡ ರೈಲ್ವೆ ನಿಲ್ದಾಣ ಹೊಸದಾಗಿ ತಲೆ ಎತ್ತಲಿದೆ.

ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ 1,141 ಕೋಟಿ ವೆಚ್ಚದ ದ್ವಿಪಥ ರೈಲು ಮಾರ್ಗ ಕಾಮಗಾರಿ 2020-21ರ ವೇಳೆಗೆ ಪೂರ್ಣಗೊಳ್ಳಲಿದೆ. ದ್ವಿಪಥ ರೈಲು ಮಾರ್ಗ ಕಾಮಗಾರಿಯಿಂದ ದಾವಣಗೆರೆ ಮತ್ತು ಹುಬ್ಬಳ್ಳಿ ನಡುವೆ ಸಂಚಾರದ ಅವಧಿ ಕಡಿಮೆ ಆಗಲಿದೆ. ವೇಗ ಮತ್ತು ಸುರಕ್ಷಿತ ರೈಲ್ವೆ ಪ್ರಯಾಣ ಸಾರ್ವಜನಿಕರಿಗೆ ಒದಗಲಿದೆ.
 
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೋಳಹುಣಸೆ- ಮಾಯಕೊಂಡ ದ್ವಿಪಥ ರೈಲು ಮಾರ್ಗವನ್ನು ಸಾರ್ವಜನಿಕರಿಗೆ ಸಮರ್ಪಣೆಗೊಳಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ಚಿಕ್ಕಜಾಜೂರು-ಹುಬ್ಬಳ್ಳಿ ನಡುವಿನ 1,141 ಕೋಟಿ ವೆಚ್ಚದ ದ್ವಿಪಥ ರೈಲು ಮಾರ್ಗ ಕಾಮಗಾರಿಯ ಮೊದಲ ಹಂತದ ತೋಳಹುಣಸೆ-ಮಾಯಕೊಂಡ ನಡುವಿನ ಮಾರ್ಗ ಲೋಕಾರ್ಪಣೆಗೊಂಡಿರುವುದು ಸಂತಸದ ವಿಚಾರ. ಹುಬ್ಬಳ್ಳಿ ಮತ್ತು ಚಿಕ್ಕಜಾಜೂರು ನಡುವಿನ ಜೋಡಿ ರೈಲು ಮಾರ್ಗ 2019ರ ಒಳಗೆ ಮುಗಿಯಲಿದೆ. ರೈಲ್ವೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ತಿಳಿಸಿದರು.

ಜೋಡಿ ರೈಲ್ವೆ ಮಾರ್ಗ ಯೋಜನೆಯಲ್ಲೇ ದಾವಣಗೆರೆಯಲ್ಲಿ ಹೊಸ ರೈಲ್ವೆ ನಿಲ್ದಾಣ ಮಾಡಬೇಕು ಎಂಬ ಬೇಡಿಕೆಗೆ ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್‌ ಒಪ್ಪಿದ್ದಲ್ಲದೆ 2019 ರ ಜ. 22 ರಂದು ಶಂಕುಸ್ಥಾಪನೆ ನಿಗದಿಪಡಿಸಿದ್ದಾರೆ. 11 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿಗೆ ತಕ್ಕಂತೆ ಆಧುನಿಕ ಸೌಲಭ್ಯದ ರೈಲ್ವೆ ನಿಲ್ದಾಣ ನಿರ್ಮಾಣ ಆಗಲಿದೆ. ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಕೇಂದ್ರದ ಸಚಿವರನ್ನು ಕರೆ ತರುವ ಪ್ರಯತ್ನ ಮಾಡುವುದಾಗಿ ಎಂದು ತಿಳಿಸಿದರು. 

ದಾವಣಗೆರೆಯಲ್ಲಿ ಕಳೆದ 30 ವರ್ಷದಿಂದ ಬೇಡಿಕೆ ಇರುವ ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಗೇಟ್‌ ಸಮಸ್ಯೆ ನಿವಾರಣೆ ಉದ್ದೇಶದಿಂದ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್‌ ಸ್ಥಳ ಪರಿಶೀಲನೆ ನಡೆಸಿ, ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ… ಹೀಗೆ ಯಾವುದಾದರೂ ಸರಿಯಾಗಿ ಮಾಡಿಕೊಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸಹ ವಿಸ್ತೃತ ಯೋಜನಾ ವರದಿಗೆ ಒಪ್ಪಿದ್ದಾರೆ. ಈ ಎಲ್ಲಾ ಕಾರಣದಿಂದ ದಾವಣಗೆರೆಯಲ್ಲಿನ ಬಹಳ ದಿನಗಳ ಬೇಡಿಕೆ ಈಡೇರಲಿದೆ. ದಾವಣಗೆರೆಯ ಹಳೆಯ ಭಾಗದಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ 4.5 ಕೋಟಿ ವೆಚ್ಚದಲ್ಲಿ 2ನೇ ಪ್ಲಾಟ್‌ಫಾರಂ ಅಭಿವೃದ್ಧಿ, ಟಿಕೆಟ್‌ ಕೌಂಟರ್‌ಗೆ ಒಪ್ಪಿಗೆ ದೊರೆತಿದೆ ಎಂದು ತಿಳಿಸಿದರು.

Advertisement

ಹರಿಹರ ಸಮೀಪದ ಅಮರಾವತಿ ಬಳಿ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆ ಜಾಗದ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳು ಆದಷ್ಟು ಬೇಗ ಆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. 2019ರ ಜೂನ್‌ ವೇಳೆಗೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್‌ ಒಪ್ಪಿದ್ದಾರೆ. ಮಾಯಕೊಂಡ, ಕರೂರು ಬಳಿ 1.4 ಕೋಟಿ ವೆಚ್ಚದ ಸಬ್‌ ವೇ, ಹನುಮನಹಳ್ಳಿ, ಆವರಗೆರೆ, ಕುರ್ಕಿ ಬಳಿ ನೀರು ನಿಲ್ಲದಂತೆ 24 ಕೆಳ ಸೇತುವೆ ನಿರ್ಮಾಣ ಒಳಗೊಂಡಂತೆ ಅನೇಕ ಬೇಡಿಕೆಗಳಿಗೆ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್‌ ಒಪ್ಪಿದ್ದಲ್ಲದೆ ಕೆಲಸ ಮಾಡಿಕೊಡುವ ಭರವಸೆ ನೀಡಿರುವುದು ಸಂತೋಷದ ವಿಚಾರ ಎಂದರು. 

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ತೋಳಹುಣಸೆ- ಮಾಯಕೊಂಡ ನಡುವೆ 19 ಕಿಲೋ ಮೀಟರ್‌ ಉದ್ದದ ಜೋಡಿ ರೈಲು ಮಾರ್ಗ ಪೂರ್ಣಗೊಂಡಿರುವುದು ಸಂತೋಷದ ವಿಚಾರ. ಆದಷ್ಟು ಬೇಗ ಹುಬ್ಬಳ್ಳಿ-ಚಿಕ್ಕಜಾಜೂರು ನಡುವಿನ ಕೆಲಸ ಮಾಡುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
 
ಮಹಾನಗರ ಪಾಲಿಕೆ ಸದಸ್ಯ ಡಿ.ಎನ್‌. ಕುಮಾರ್‌, ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಅಜಯ್‌ ಕುಮಾರ್‌ಸಿಂಗ್‌, ಡಿಜಿಎಂ ಅಪರ್ಣಾ ಗಾರ್ಗ್‌, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಪ್ರಧಾನ ಕಾರ್ಯದರ್ಶಿ ಎನ್‌. ರಾಜಶೇಖರ್‌, ಕಾರ್ಯದರ್ಶಿ ಎಚ್‌.ಎನ್‌. ಶಿವಕುಮಾರ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ರೈಲ್ವೆ ಇಲಾಖೆಯ ಇತರ ಅಧಿಕಾರಿಗಳು ಇದ್ದರು. 

ಹೊಸಪೇಟೆಗೆ ರೈಲು…
ಹರಿಹರ-ಕೊಟ್ಟೂರು ನಡುವಿನ ರೈಲನ್ನು ಹೊಸಪೇಟೆಗೆ ವಿಸ್ತರಣೆ ಮಾಡಬೇಕು ಎಂಬ ಸಾರ್ವಜನಿಕರ ಬಹು ದಿನಗಳ ಬೇಡಿಕೆ ಈಡೇರುವ ಕಾಲ ಸಮೀಪವಾಗಲಿದೆ. 2019ರ ಮಾರ್ಚ್‌ ವೇಳೆಗೆ ಹರಿಹರ- ಹೊಸಪೇಟೆ ರೈಲು ಸಂಚಾರ ಪ್ರಾರಂಭಿಸಲು ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್‌ ಒಪ್ಪಿಗೆ ನೀಡಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಭಾನುವಾರ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದ ತೋಳಹುಣಸೆ-ಮಾಯಕೊಂಡ ಜೋಡಿ
ರೈಲು ಮಾರ್ಗ ಲೋಕಾರ್ಪಣೆ ಸಮಾರಂಭದಲ್ಲಿ ತಿಳಿಸಿದರು.

ನೇರ ರೈಲು ಮಾರ್ಗ…
ದಾವಣಗೆರೆ-ಚಿತ್ರದುರ್ಗ-ತುಮಕೂರು ನಡುವಿನ 191 ಕಿಲೋ ಮೀಟರ್‌ ಉದ್ದದ 1,801 ಕೋಟಿ ವೆಚ್ಚದ ಕಾಮಗಾರಿಗೆ ಒಟ್ಟಾರೆ 2,281 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ 960 ಕೋಟಿ ಭರಿಸಬೇಕಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಿದ್ದಲ್ಲಿ ಭೂ ಸ್ವಾಧೀನಕ್ಕೆ ಅನುಕೂಲ ಆಗಲಿದೆ. ರೈತರಿಗೆ ಹಣ ನೀಡಬಹುದಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 238 ಎಕರೆ ಜಾಗ ಸ್ವಾಧೀನಕ್ಕೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿದ್ದೇಶ್ವರ್‌ ತಿಳಿಸಿದರು.

ವಿದ್ಯುದ್ದೀಕರಣ ಮಾರ್ಗ…
ಬೆಂಗಳೂರು ಸಮೀಪದ ಚಿಕ್ಕಬಾಣಾವರದಿಂದ ಹುಬ್ಬಳ್ಳಿಯವರೆಗೆ ವಿದ್ಯುದ್ದೀಕರಣ ಮಾರ್ಗದ ಕಾಮಗಾರಿಯಲ್ಲಿ  ಚಿಕ್ಕಜಾಜೂರು-ಹರಿಹರದವರೆಗೆ 60 ಕೋಟಿ ವೆಚ್ಚದ ವಿದ್ಯುದ್ದೀಕರಣ ಮಾರ್ಗ ಕಾಮಗಾರಿ
ಶೀಘ್ರವೇ ಪ್ರಾರಂಭವಾಗಲಿದೆ. 1 ರಿಂದ ಒಂದೂವರೆ ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next