ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸೆ.26 ಹಾಗೂ 27ಕ್ಕೆ ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸೆ.26ಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತದಿಂದಾಗಿ ಒಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿತ್ತು. ಮಳೆ ಪ್ರಮಾಣ ಈಗ ಕಡಿಮೆಯಾಗಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೀದರ್, ಧಾರವಾಡ, ಗದಗ,ಕಲಬುರಗಿ,ರಾಯಚೂರು,ವಿಜಯಪುರ ಹಾಗೂ ಯಾದಗಿರಿಯಲ್ಲೂ ಸೆ.26ಕ್ಕೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ಶುಕ್ರವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಅಂಕಿ- ಅಂಶದ ಪ್ರಕಾರ, ನೈರುತ್ಯ ಮುಂಗಾರು ಕರಾವಳಿ ಭಾಗದಲ್ಲಿ ಚುರುಕಾಗಿದ್ದು, ಒಳನಾಡಿನಲ್ಲಿ ದುರ್ಬಲವಾಗಿದೆ. ಕಾರವಾರ ಹಾಗೂ ಕದ್ರಾದಲ್ಲಿ ಅನುಕ್ರಮವಾಗಿ 11.7 ಸೆಂ. ಮೀ. ಭಾರೀ ಮಳೆಯಾಗಿದೆ. ಉಳಿದಂತೆ ಗೋಕರ್ಣ 5 ಸೆಂ.ಮೀ., ಭಟ್ಕಳ 3, ಕೊಲ್ಲೂರು, ಮಂಕಿಯಲ್ಲಿ ತಲಾ 3, ಕ್ಯಾಸಲ್‌ರಾಕ್, ಬೀದರ್ ಹಾಗೂ ಆಗುಂಬೆಯಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತುಂತುರು ಮಳೆ : ನಗರದಲ್ಲಿ ಶುಕ್ರವಾರ ತುಂತುರು ಮಳೆಯಾಗಿದೆ. ನಗರದ ಉತ್ತರ ಭಾಗದ ಅರಕೆರೆಯಲ್ಲಿ ಅತೀ ಹೆಚ್ಚು ಮಳೆಯಾಗಿರುವುದು ವರದಿಯಾಗಿದೆ. ಆದರೆ, ಮಳೆಯಿಂದಾಗಿ ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಸಿಬ್ಬಂದಿ ತಿಳಿಸಿದ್ದಾರೆ. ನಗರದಲ್ಲಿ ಮುಂದಿನ ಎರಡು ದಿನಗಳಕಾಲ ತುಂತುರು ಮಳೆಯಾಗುವ ಸಾಧ್ಯತೆ ಇದೆ. ತಾಪಮಾನ ಕನಿಷ್ಟ 26.70 ಹಾಗೂ ಗರಿಷ್ಟ 29.70 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದುಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ ? : ಅರಕೆರೆ21.5 ಮಿ.ಮೀ, ವಿಶ್ವನಾಥಪುರ18 ಮಿ.ಮೀ, ರಾಜಾನುಕುಂಟೆ13.5ಮಿ.ಮೀ, ಗೊಲ್ಲಹಳ್ಳಿ13 ಮಿ.ಮೀ, ಗಂಟಗಾನಹಳ್ಳಿ12 ಮಿ.ಮೀ, ಹೊನ್ನೇಶ್ವರ ಗೇಟ್8.5ಮಿ.ಮೀ, ಚೆನ್ನಹಳ್ಳಿ7ಮಿ.ಮೀ, ಹೊನ್ನೇಶ್ವರ6.5 ಮಿ.ಮೀ ಹಾಗೂ ದೇವನಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಮಳೆಯಾಗಿರುವುದು ವರದಿಯಾಗಿದೆ.