Advertisement

ಟೈಮ್ಸ್‌ ಸ್ಕ್ವೇರ್‌ನಲ್ಲಿ ನನಗಾಗಿ ಎರಡು ದಿನ ಕಾದ!

11:26 AM Sep 05, 2017 | |

ನನ್ನ ಬದುಕಿನ ಅತ್ಯಂತ ಸಾರ್ಥಕ ಕ್ಷಣಗಳೆಂದರೆ ಎತ್ತರಕ್ಕೇರಿದ ಶಿಷ್ಯರನ್ನು ಕತ್ತೆತ್ತಿ ನೋಡುವುದು. ಅದನ್ನು ನಿಜಗೊಳಿಸಿದ ಅನೇಕ ಶಿಷ್ಯರಿದ್ದಾರೆ. ಲಡಾಖ್‌ನ ತುದೀಲಿ ಸೈನಿಕನಾಗಿಯೋ, ಫ್ರ್ಯಾಂಕ್‌ಫ‌ರ್ಟ್‌ ಏರ್‌ಪೋರ್ಟಿನ ಲೌಂಜ್‌ನಲ್ಲಿ ಸಹ ಪ್ರಯಾಣಿಕನಾಗಿಯೋ, ಮುಂಬೈ ನಗರದ ಇರುಳ ರೈಲಿನಲ್ಲಿ ಸಿಗುವ ಗೃಹಿಣಿಯಾಗಿಯೋ, ಬೆರಳ ತುಂಬಾ ತೊನೆಯುವ ಚಿನ್ನ ಧರಿಸಿದ ರಿಯಲ್‌ ಎಸ್ಟೇಟ್‌ ಧನಿಕನಾಗಿಯೋ ನಾನಾ ಅವತಾರದಲ್ಲಿ ಶಿಷ್ಯಕೋಟಿ ಕಾಣಿಸಿಕೊಂಡು ಕಣ್ಣರಳಿಸಿ, ನೆನಪಿಸಿ ಧನ್ಯತೆಯ ಮಿಂಚು ಮಿನುಗಿಸುತ್ತಾರೆ.

Advertisement

“ಅಮೆರಿಕಾ! ಅಮೆರಿಕಾ!!’ ಚಿತ್ರವನ್ನು ನ್ಯೂಯಾರ್ಕ್‌ನಲ್ಲಿ ಚಿತ್ರೀಕರಿಸುತ್ತಿದ್ದೆ. 12 ಜನರ ಪುಟ್ಟ ತಂಡ. ಆದರೆ, ಅಗಾಧ ಕೆಲಸ. ಬೆಳಗ್ಗಿನಿಂದ ಭಾರತೀಯನೊಬ್ಬ ಚಿತ್ರೀಕರಣ  ನೋಡುತ್ತಾ ನಿಂತಿದ್ದ. ಒಂದೆರಡು ಸಲ ನನ್ನ ಗಮನ  ಸೆಳೆಯಲು ಯತ್ನಿಸಿದ. ವಿಪರೀತ ಒತ್ತಡದಲ್ಲಿದ್ದ ನಾನು ಆತನನ್ನು ಮಾತಾಡಿಸುವ ಸ್ಥಿತಿಯಲ್ಲಿರಲಿಲ್ಲ. ಎರಡನೇ ದಿನವೂ ಅವನು ಕಾಯುತ್ತಾ ನಿಂತಿದ್ದ. ಟೈಮ್ಸ್‌ ಸ್ಕ್ವೇರ್‌ನಲ್ಲಿ ಪ್ಯಾಕಪ್‌ ಆದಾಗ ರಾತ್ರಿ ಹತ್ತು ಗಂಟೆ. ಆಗಲೂ ಅಲ್ಲೇ ನಿಂತಿದ್ದ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಹತ್ತಿರ ಬಂದು ಮಾತನಾಡಿಸಿದ. 86ನೇ ಇಸವಿಯಲ್ಲಿ ನಾನೊಂದು ಸಂಜೆ ಕಾಲೇಜಿನಲ್ಲಿ ಬೋಧಿಸುತ್ತಿದ್ದೆ.  ಅವನು ಅಲ್ಲಿ ಬಿ.ಕಾಂ. ಕಲಿತಿದ್ದ. ನನಗೆ ದುಡಿದು ಓದುವ ಶಿಷ್ಯರನ್ನು ಕಂಡರೆ ಮಹಾಪ್ರೀತಿ. ಅವನ ಹೆಸರು ಶ್ರೀಧರ. ಬೆಂಗಳೂರಿನ ಹುಡುಗ. ಅವನ ತಾಯಿ ಮನೆಗೆಲಸ ಮಾಡ್ಕೊಂಡು ಓದಿಸುತ್ತಿದ್ದರು. ತರಗತಿಯಲ್ಲಿ ನಾನು ಮಹತ್ವಾಕಾಂಕ್ಷೆಯ ಬಗ್ಗೆ ಬಹಳ ಹೇಳಿದ್ದೆನಂತೆ. ಕೆಲವು ಪುಸ್ತಕ ಕೊಡಿಸಿದ್ದೆನಂತೆ. ಕಾಲೇಜು ಮ್ಯಾಗಝಿನ್‌ಗೆ ಅವನಿಂದ ಪ್ರಬಂಧ ಬರೆಸಿದ್ದೆನಂತೆ. ಫಿಸಿಗೆ ಹಣ ಸಾಲದಿದ್ದಾಗ ಕೊಟ್ಟಿದ್ದೆನಂತೆ.

ಇದಾವುದೂ ನನಗೆ  ನೆನಪಿನಲ್ಲೇ ಇರಲಿಲ್ಲ. ಇದನ್ನೆಲ್ಲ ನಾನು ಪ್ರಜ್ಞಾಪೂರ್ವಕವಾಗಿಯೇ ನೆನಪಿಟ್ಟುಕೊಳ್ಳುವುದಿಲ್ಲ. ಆದರೆ, ಮನಸ್ಸು ಮತ್ತು ಕಣ್ಣು ಒದ್ದೆಯಾಗಿದ್ದು, ಅವನ ಕೈಯಲ್ಲಿ ಸುರುಳಿ ಸುತ್ತಿ ಇಟ್ಟುಕೊಂಡು ಬಂದಿದ್ದ ನನ್ನ ಹಸ್ತಾಕ್ಷರವಿದ್ದ, ನನ್ನದೊಂದು ಪುಸ್ತಕ ನೋಡಿ. ಎರಡು ದಿನ ಕಾಯಿಸಿದ ನನಗೆ ಒಂಥರಾ ಆಯಿತು. “ಈಗ ಇಲ್ಲೇ ಫೈನಾನ್ಷಿಯಲ್‌ ಸಂಸ್ಥೆಯೊಂದರಲ್ಲಿ ಒಳ್ಳೆಯ ಜಾಬ್‌ನಲ್ಲಿದ್ದೇನೆ. ನಿಮ್ಮ ಇಡೀ ಚಿತ್ರತಂಡ ಒಮ್ಮೆ ಬಂದು ಕಾಫಿ ಕುಡಿದು ಹೋಗಬೇಕು’ ಎಂದು ಆಹ್ವಾನಿಸಿದ ಶ್ರೀಧರ.

ಆದರೆ ನಮ್ಮ ಮುಂದಿನ ಪ್ರಯಾಣ ಸಿದ್ಧವಾಗಿತ್ತು. “ಇನ್ನೊಂದ್ಸಲ’ ಅನ್ನುತ್ತಾ ಬೆನ್ನು ತಟ್ಟಿ ಬೀಳ್ಕೊಟ್ಟೆ. ಧಾವಂತದ ಬದುಕಿನಲ್ಲಿ ಆ “ಇನ್ನೊಂದ್ಸಲ’ ಇನ್ನೂ ಬಂದಿಲ್ಲ. ನನ್ನ ಅಲೆಮಾರಿ ಬದುಕಿನಲ್ಲಿ ಶ್ರೀಧರನಂಥ ಶಿಷೊತ್ತಮರು ಹೀಗೆ ಪ್ರತ್ಯಕ್ಷವಾಗಿ ಎದೆ ಬೆಚ್ಚಗಾಗಿಸುತ್ತಾರೆ. ಇದು ಯಾವ ತಾರೆಗೂ ಲಭಿಸದ ಸುಖ.

ಡಾ. ನಾಗತಿಹಳ್ಳಿ ಚಂದ್ರಶೇಖರ ಪ್ರಸಿದ್ಧ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next