ನವದೆಹಲಿ:ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ನೌಕರರ ಒಕ್ಕೂಟ ಸೋಮವಾರ(ಮಾರ್ಚ್ 15) ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಚೆಕ್ ಕ್ಲಿಯರೆನ್ಸ್ ಸೇರಿದಂತೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಸಿ.ಡಿ ಪ್ರಕರಣದ ಪ್ರೊಡ್ಯೂಸರ್, ಡೈರಕ್ಟರ್, ಆ್ಯಕ್ಟರ್ ಯಾರೆಂದು ಗೊತ್ತಾಗಲಿದೆ: ಸಿ.ಟಿ ರವಿ
ಏತನ್ಮಧ್ಯೆ ಖಾಸಗಿ ಕ್ಷೇತ್ರದ ಬ್ಯಾಂಕ್ ಗಳಾದ ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಗಳು ಇಂದು ಮತ್ತು ನಾಳೆ ನಡೆಯಲಿರುವ ಮುಷ್ಕರದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದೆ.
ಮಾರ್ಚ್ 15 ಮತ್ತು 16ರಂದು ನಡೆಯುವ ಎರಡು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಎರಡು ದಿನ ಬಂದ್ ನಲ್ಲಿ ಭಾಗಿಯಾಗಲಿದ್ದು, ಶನಿವಾರ(ಮಾರ್ಚ್ 13) ಮತ್ತು ಭಾನುವಾರ(ಮಾ.14) ರಜೆ ಇದ್ದ ಪರಿಣಾಮ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಕೃತ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಎರಡು ದಿನಗಳ ಕಾಲ ರಾಷ್ಟ್ರೀಯ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಯೂನಿಯನ್ ಗಳ ಒಕ್ಕೂಟ ಕರೆ ಕೊಟ್ಟಿದ್ದು, ಈ ಮಷ್ಕರದಲ್ಲಿ ಹತ್ತು ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಯುಎಫ್ ಬಿಯು ತಿಳಿಸಿದೆ.