ತಿರುವನಂತಪುರ : ಕೇರಳದ ಶೋರನೂರು ಸಮೀಪ ಇಂದು ನಸುಕಿನ ವೇಳೆ ಚೆನ್ನೈ – ಮಂಗಳೂರು ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಎರಡು ಕೋಚ್‌ಗಳು ಹಳಿ ತಪ್ಪಿದ್ದು ರೈಲು ಸಂಚಾರ ಬಾಧಿತವಾಗಿರುವುದು ವರದಿಗಳು ತಿಳಿಸಿವೆ.
ಶೋರನೂರು ರೈಲು ನಿಲ್ದಾಣಕ್ಕೆ ಸಮೀಪ ಹಳಿ ತಪ್ಪಿದ ಈ ದುರಂತದಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಹಳಿ ತಪ್ಪಿದ ಎರಡು ಕೋಚ್ ಗಳೆಂದರೆ – 1. ಲಗ್ಗೇಜ್ ಕಮ್ ಬ್ರೇಕ್ ವ್ಯಾನ್, 2. ಪಾರ್ಸೆಲ್ ವ್ಯಾನ್. ಇವೆರಡೂ ಬೋಗಿಗಳು ಇಂಜಿನ್ ಹಿಂದಿದ್ದವು. ಹಳಿ ತಪ್ಪಿದ ಬೋಗಿಗಳ ಪೈಕಿ ಒಂದು ಟ್ರ್ಯಾಕ್ ಗೆ ಸಮೀಪವಿದ್ದ ಇಲೆಕ್ಟ್ರಿಕ್ ಕಂಬಕ್ಕೆ ಢಿಕ್ಕಿ ಹೊಡೆಯಿತು; ಪರಿಣಾವಾಗಿ ಕಂಬಕ್ಕೆ ಹಾನಿ ಉಂಟಾಯಿತು.
ದುರ್ಘಟನೆಯ ಪರಿಣಾಮವಾಗಿ ತಿರುವನಂತಪುರ, ಮಂಗಳೂರು ಮತು ಪಾಲಕ್ಕಾಡ್ ಮಾರ್ಗಗಳಲ್ಲಿನ ರೈಲು ಸಂಚಾರ ತೀವ್ರವಾಗಿ ಬಾಧಿತವಾಯಿತು. ಹಾಗಿದ್ದರೂ ತೃಶ್ಶೂರು – ಪಾಲಕ್ಕಾಡ್ ನಡುವಿನ ಬೈಪಾಸ್ ಮಾರ್ಗದಲ್ಲಿನ ರೈಲು ಸಂಚಾರಕ್ಕೆ ಯಾವುದೇ ಬಾಧೆ ಉಂಟಾಗಿಲ್ಲ.
ಆದಷ್ಟು ಬೇಗನೆ ರೈಲು ಸಂಚಾರವನ್ನು ಮಾಮೂಲಿ ಸ್ಥಿತಿಗೆ ತಲುಪಿಸುವ ಪ್ರಯತ್ನಗಳು ತುರುಸಿನಿಂದ ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.