ಬೆಂಗಳೂರು: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಸಹೋದರರು ನಿರ್ಮಾಣ ಹಂತದ ನೀರಿನ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತಿಲಕನಗರ ನಿವಾಸಿ ಅಜ್ಗರ್ ಖಾನ್ ಅವರ ಪುತ್ರರಾದ ಅಮೀನ್‌ಖಾನ್(7) ಮತ್ತು ನಸರುಲ್ಲಾ ಖಾನ್(9) ಮೃತರು.
ಅ.27ರಂದು ಇಬ್ಬರು ಸಹೋದರರು ನಾಪತ್ತೆಯಾಗಿದ್ದರು. ಈ ಸಂಬಂಧ ತಿಲಕನಗರ ಠಾಣೆಯಲ್ಲಿ ಅಜ್ಗರ್‌ಖಾನ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಶೋಧ ಕಾರ್ಯ ನಡೆಸುವಾಗ ಪೊಲೀಸರಿಗೆ ನಿರ್ಮಾಣ ಹಂತದ ನೀರಿನ ಸಂಪ್ ನಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಆಟೋ ಚಾಲಕರಾಗಿರುವ ಅಜ್ಗರ್ ಖಾನ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ, ಇಬ್ಬರು ಮಕ್ಕಳ ಜತೆ ತಿಲಕನಗರದಲ್ಲಿ ವಾಸವಾಗಿದ್ದಾರೆ. ಅಮೀನ್ ಖಾನ್ ಮತ್ತು ನಸರುಲ್ಲಾ ಖಾನ್ ಸ್ನೇಹಿತರ ಜತೆ ನಿಂತಿರುವ ನೀರಿನಲ್ಲಿ ಉತ್ಪತ್ತಿ ಆಗುವ ಸಣ್ಣ ಮೀನುಗಳನ್ನು ಬಾಟಲಿಗಳಲ್ಲಿ ಶೇಖರಿಸುತ್ತಿದ್ದರು. ಅದೇ ರೀತಿ ಅ.27ರಂದು ಮನೆ ಸಮೀಪದಲ್ಲೇ ಮೀನುಗಳನ್ನು ಹಿಡಿಯಲು ಹೋಗಿದ್ದು, ಬನ್ನೇರುಘಟ್ಟ ರಸ್ತೆಯ ಸ್ವಾಗತ್ ಜಂಕ್ಷನ್‌ನ ಬಿ.ಜಿ.ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡದ ನೆಲಮಹಡಿಗೆ ಇಬ್ಬರೇ ಬಂದಿದ್ದಾರೆ. ಸಂಪ್‌ನಲ್ಲಿ ನೀರು ತುಂಬಿ ಮೇಲ್ಭಾಗದಲ್ಲಿ ನಿಂತಿದ್ದ ನೀರಿನಲ್ಲಿ ಮೀನು ಹಿಡಿಯುತ್ತಿದ್ದರು. ಈ ವೇಳೆ ಪಾಚಿ ಮೇಲೆ ಕಾಲಿಟ್ಟು ಆಯಾ ತಪ್ಪಿ ಇಬ್ಬರು ಸಂಪ್‌ನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಮತ್ತೂಂದೆಡೆ ಸಂಜೆಯಾದರೂ ಮಕ್ಕಳು ಮನೆಗೆ ಬಾರದರಿಂದ ಆತಂಕಗೊಂಡ ಅಜ್ಗರ್ ಖಾನ್ ದಂಪತಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಮಕ್ಕಳ ಸ್ನೇಹಿತರ ಬಳಿಯೂ ವಿಚಾರಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಬಳಿಕ ತಿಲಕನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ತೆಲುತ್ತಿದ್ದ ಮೃತದೇಹಗಳು: ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಕ್ಕ-ಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿ ಪತ್ತೆ ಕಾರ್ಯಕ್ಕೆ ಸಹಕಾರ ಕೋರಿದ್ದರು. ಅಲ್ಲದೆ, ಮಕ್ಕಳ ಹವ್ಯಾಸದ ಬಗ್ಗೆ ತಿಳಿದ ಪೊಲೀಸರು ನಿರ್ಮಾಣ ಹಂತದ ಕಟ್ಟಡದ ಕಡೆ ಬಂದು ಶೋಧಿಸಿದ್ದಾರೆ. ಈ ವೇಳೆ ನೀರಿನಲ್ಲಿ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಕೂಡಲೇ ಅಜ್ಗರ್ ಖಾನ್ ದಂಪತಿ ಕರೆಸಿ ಮಕ್ಕಳ ಗುರುತು ಪತ್ತೆ ಹಚ್ಚಲಾಗಿದೆ. ಅ.27ರಂದು ನೀರಿನ ಸಂಪ್‌ನಲ್ಲಿ ಮುಳುಗಿದ ಮಕ್ಕಳ ಮೃತದೇಹಗಳು ಭಾನುವಾರ ಮೇಲೆ ಬಂದಿವೆ. ನೀರಿನ ಸಂಪ್‌ಗೆ ಮುಚ್ಚುಳ ಇಲ್ಲ. ಹೀಗಾಗಿ ದುರ್ಘಟನೆ ನಡೆದಿದೆ. ಕಟ್ಟಡದ ಮಾಲಿಕ ನಾರಾಯಣಸ್ವಾಮಿ ಎಂಬವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು .