ಸೂರತ್ : ಸೂರತ್ ನ ಪತಿದಾರ್ ಬಾಹುಳ್ಯದ ಕಪೋದ್ರಾ ಪ್ರದೇಶದಲ್ಲಿ ಅಪರಿಚಿತ ಪ್ರತಿಭಟನಕಾರರು ಎರಡು ಪೌರ ಸಾರಿಗೆ ಬಸ್ಸುಗಳಿಗೆ ಬೆಂಕಿ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹಾರ್ದಿಕ್ ಪಟೇಲ್ ನೇತೃತ್ವದ ಪಟೇಲ್ ಮೀಸಲಾತಿ ಆಂದೋಲನದ ಪತಿದಾರ್ ಅನಾಮತ್ ಆಂದೋಲನ್ ಸಮಿತಿಗೆ ಸೇರಿದ ಕೆಲವರನ್ನು ನಗರ ಪೊಲೀಸರು ಬಂಧಿಸಿದುದನ್ನು ಅನುಸರಿಸಿ ಪೌರ ಸಾರಿಗೆಯ ಎರಡು ಬಸ್ಸುಗಳಿಗೆ ಉದ್ರಿಕ್ತ ಗುಂಪೊಂದು ಬೆಂಕಿ ಹಚ್ಚಿದರು.
ಬಿಜೆಪಿ ನಾಯಕ ಋತ್ವಿಜ್ ಪಟೇಲ್ ಅವರ ಕಾರ್ಯಕ್ರಮವನ್ನು ವಿರೋಧಿಸಿ ಸೌರಾಷ್ಟ್ರ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಉದ್ರಿಕ್ತರು ಸಜ್ಜಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಕಾರರಲ್ಲಿ ಕೆಲವರನ್ನು ಬಂಧಿಸಿದ್ದರು.
ಪ್ರತಿಭಟನಕಾರರು ತಮ್ಮ ನಿಯಂತ್ರಿಸಲು ಬಂದಿದ್ದ ಪೊಲೀಸರ ಮೇಲೆ ಕಲ್ಲೆಸೆದರು ಎಂದು ಸೂರತ್ ಪೊಲೀಸ್ ಕಮಿಶನರ್ ಸತೀಶ್ ಶರ್ಮಾ ತಿಳಿಸಿದ್ದಾರೆ.
ಸುಮಾರು ಆರರಿಂದ ಏಳು ಮಂದಿ ಉದ್ರಿಕ್ತರು ಗಲಭೆಗೆ ಮುಂದಾಗಿ ಬಸ್ಸಿಗೆ ಬೆಂಕಿ ಹಚ್ಚಿದರು; ನಿಜಕ್ಕಾದರೆ ಇಡಿಯ ಪಟೇಲ್ ಸಮುದಾಯವೇ ನಮ್ಮೊಂದಿಗೆ ಇದೆ ಎಂದು ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಋತ್ವಿಜ್ ಪಟೇಲ್ ಹೇಳಿದರು.