Advertisement

ಒಂದೇ ಕಲ್ಲಿಗೆ ಎರಡು ಹಕ್ಕಿ: ಮೋದಿ ಸ್ಟ್ರಾಟಜಿ

01:23 AM Jun 08, 2019 | mahesh |

ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಮೊದಲ ವಿದೇಶಿ ಪ್ರವಾಸ ಇದೇ ಶನಿವಾರ ರಾತ್ರಿ ಆರಂಭಗೊಳ್ಳಲಿದೆ. ಪ್ರವಾಸದ ಮೊದಲ ಹೆಜ್ಜೆಯಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಲಿರುವ ಅವರು, ಭಾನುವಾರ ಬೆಳಗ್ಗೆ ಅಲ್ಲಿನ ಕೆಲವು ಕಾರ್ಯಕ್ರಮಗಳು ಹಾಗೂ ರಾಜತಾಂತ್ರಿಕ ಸಭೆಗಳನ್ನು ಮುಗಿಸಿಕೊಂಡು ಸ್ವದೇಶಕ್ಕೆ ಮರಳಲಿದ್ದು, ಮಾರ್ಗ ಮಧ್ಯೆ ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ.

Advertisement

ಅಸಲಿಗೆ, ಈ ಪ್ರವಾಸ ವಿವಿಧೋದ್ದೇಶವುಳ್ಳದ್ದು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ನೆರೆಹೊರೆಯವರಿಗೆ ಮೊದಲ ಆದ್ಯತೆ’ ಎಂಬ ವಿದೇಶಿ ನೀತಿಗೆ ಇಂಬು ನೀಡುವಂಥದ್ದು. ದಕ್ಷಿಣ ಏಷ್ಯಾದಲ್ಲಿ ಪ್ರಾಬಲ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾದ ಪ್ರಾಬಲ್ಯ ಮುರಿಯುವ ಹಾಗೂ ಚೀನಾದ ಬುಡದಲ್ಲಿ ಅವಿತುಕೊಂಡು ಭಾರತದ ವಿರುದ್ಧ ಕ್ಯಾತೆ ತೆಗೆಯುವ ಪಾಕಿಸ್ತಾನವನ್ನು ಮೂಲೆಗುಂಪು ಮಾಡುವ ‘ಒಳ ಉದ್ದೇಶ’ವನ್ನೂ ಈ ಭೇಟಿ ಹೊಂದಿದೆ.

ಭಾರತ- ಮಾಲ್ಡೀವ್ಸ್‌ ನಂಟಿನ ಹೊಸ ಅಧ್ಯಾಯ: ಮಾಲ್ಡೀವ್ಸ್‌ ನಲ್ಲಿ ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಮೋದಿಯವರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಅತಿ ಮಹತ್ವದ ಬೆಳವಣಿಗೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ಮಾಲ್ಡೀವ್ಸ್‌ನ ಹಿಂದಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ಆ ದೇಶದಲ್ಲಿ ಏಕಾಏಕಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಲ್ಲಿ ರಾಜಕೀಯ ಅರಾಜಕತೆಗೆ ಕಾರಣವಾಗಿದ್ದರು. ಆಗ, ಭಾರತ ಆ ದೇಶಕ್ಕೆ ನೈತಿಕ ಬೆಂಬಲ ತೋರಲು ಮುಂದಾದಾಗ, ಚೀನಾ ಪರ ಧೋರಣೆ ಹೊಂದಿರುವ ಯಮೀನ್‌, ಭಾರತದ ಸಲಹೆಗಳನ್ನು ಕಡೆಗಣಿಸುವ ಮೂಲಕ ದಶಕಗಳ ಇತಿಹಾಸ ಇರುವ ಭಾರತ-ಮಾಲ್ಡೀವ್ಸ್‌ ಬಾಂಧವ್ಯಕ್ಕೆ ಕೊಳ್ಳಿಯಿಟ್ಟಿದ್ದರು. ಅದರ ಹಿಂದೆ ಚೀನಾದ ಕುತಂತ್ರವೂ ಇದ್ದದ್ದು ಸುಳ್ಳೇನಲ್ಲ.

ಆದರೆ, ಕಳೆದ ವರ್ಷಾಂತ್ಯಕ್ಕೆ ನಡೆದ ಆ ದೇಶದ ಮಹಾ ಚುನಾವಣೆಯಲ್ಲಿ ಭಾರತ ಪರ ನಿಲುವು ಹೊಂದಿರುವ ಇಬ್ರಾಹೀಂ ಮೊಹಮ್ಮದ್‌ ಸೊಲಿಹ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಮರಿ ಹೋಗಿದ್ದ ಭಾರತ-ಮಾಲ್ಡೀವ್ಸ್‌ ಸಂಬಂಧ ಮತ್ತೆ ಚಿಗುರಿತು. ಇದೇ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡಿದ್ದ ಮೋದಿ ಸರ್ಕಾರ, ಮಾಲ್ಡೀವ್ಸ್‌ನ ಹಲವಾರು ಯೋಜನೆಗಳಿಗೆ ಆರ್ಥಿಕ ಸಹಕಾರ ನೀಡುವ ಮೂಲಕ ಅಲ್ಲಿನ ಸರ್ಕಾರದ ಮೇಲೆ ಭಾರತದ ಪ್ರಭಾವ ಹೆಚ್ಚುವಂತೆ ಮಾಡಿಕೊಂಡಿತು.

Advertisement

ಅದರ ಫ‌ಲವಾಗಿ, ಅಲ್ಲಿ ಕರಾವಳಿ ರೇಡಾರ್‌ ವ್ಯವಸ್ಥೆ, ಯೋಧರ ತರಬೇತಿ ಕೇಂದ್ರಗಳು ಭಾರತದ ಸಹಕಾರದೊಂದಿಗೆ ಸ್ಥಾಪನೆಯಾಗಿವೆ. ಭಾನುವಾರ ಇವನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಮೋದಿ, ಮುಂದೆ ಮಾಲ್ಡೀವ್ಸ್‌ನಲ್ಲಿ ಭಾರತದ ನೆರವಿನೊಂದಿಗೆ ಅನುಷ್ಠಾನಗೊಳ್ಳಲಿರುವ ಜಲ ಸಾರಿಗೆ, ಬಂದರು ಅಭಿವೃದ್ಧಿ ಹಾಗೂ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಯೋಜನೆಗಳ ಬಗ್ಗೆ ಅಧ್ಯಕ್ಷ ಇಬ್ರಾಹೀಂ ಸೋಲಿಹ್‌ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಲಂಕಾಕ್ಕೆ ನೈತಿಕ ಬಲ
ಮಾಲ್ಡೀವ್ಸ್‌ ಭೇಟಿಯ ನಂತರ, ಸ್ವದೇಶಕ್ಕೆ ಮರಳುವಾಗ ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಮೋದಿ, ಅಲ್ಲಿನ ಆಂತರಿಕ ಭದ್ರತೆ ವಿಚಾರದಲ್ಲಿ ಭಾರತ ನೀಡಬೇಕಿರುವ ಸಹಕಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಇತ್ತೀಚೆಗೆ ಆ ದೇಶದಲ್ಲಿ ನಡೆದಿದ್ದ ಈಸ್ಟರ್‌ ಸರಣಿ ಸ್ಫೋಟಗಳ ನಂತರ ಆ ದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ವಿದೇಶಿ ಗಣ್ಯರೆಂದು ಮೋದಿ ಪರಿಗಣಿಸಲ್ಪಟ್ಟಿದ್ದು, ಅವರ ಸ್ವಾಗತಕ್ಕೆ ಲಂಕಾ ಸಹ ಉತ್ಸಾಹಗೊಂಡಿದೆ. ಲಂಕಾ ಭೇಟಿ ಕೂಡ ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯ ಮುರಿಯುವ ಮತ್ತೂಂದು ಹೆಜ್ಜೆಯಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next