ಬೆಂಗಳೂರು: ಐಷಾರಾಮಿ ಜೀವನ ಹಾಗೂ ದುಶ್ಚಟಗಳಿಗಾಗಿ ಮನೆ ಮುಂಭಾಗ, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಗಳು ಹಾಗೂ ಆಟೋ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಲ್ಲಾಳ ಮುಖ್ಯ ರಸ್ತೆಯ ಸೊಣ್ಣೇನಹಳ್ಳಿ ನಿವಾಸಿ ಅಮ್ಜದ್ ಖಾನ್ (19) ಮತ್ತು ಫೈರೋಜ್ ಪಾಷಾ(19) ಬಂಧಿತರು. ಆರೋಪಿಗಳಿಂದ 3.25 ಲಕ್ಷ ರೂ. ಮೌಲ್ಯದ 2 ದ್ವಿಚಕ್ರ ವಾಹನಗಳು ಹಾಗೂ 3 ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ನಾಗರಬಾವಿ ನಿವಾಸಿ ಹರ್ಷ ಎಂಬವರು ತಮ್ಮ ಮನೆ ಮುಂಭಾಗ ನಿಲುಗಡೆ ಮಾಡಿದ್ದ ಆಟೋರಿûಾ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಐಷಾರಾಮಿ ಜೀವನ ಹಾಗೂ ದುಶ್ಚಟಗಳ ದಾಸರಾಗಿರುವ ಆರೋಪಿಗಳು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ವಾಹನ ಕಳ್ಳತನ ಕೃತ್ಯ ಎಸಗುತ್ತಿದ್ದಾರೆ. ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳು ಹಾಗೂ ಆಟೋರಿಕ್ಷಾಗಳನ್ನು ಕಳವು ಮಾಡುತ್ತಿದ್ದರು. ಈ ಇಬ್ಬರ ಬಂಧನದಿಂದ ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಆಟೋ ಕಳವು, ಜ್ಞಾನಭಾರತಿ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಹಾಗೂ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ದಾಖಲಾಗಿದ್ದ ಎರಡು ಆಟೋ ಹಾಗೂ ಒಂದು ದ್ವಿಚಕ್ರ ವಾಹನ ಕಳವು ಸೇರಿ ಒಟ್ಟು 5 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.