ಬೆಂಗಳೂರು: ವಾಯು ವಿಹಾರ ಮತ್ತು ಒಂಟಿಯಾಗಿ ನಡೆದುಕೊಂಡು ಹೋಗುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೊಬೈಲ್ ಸುಲಿಗೆ ಮತ್ತು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳು ಜೆ.ಸಿ.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಶಿವಾಜಿನಗರ ನಿವಾಸಿ ಸೈಯದ್ ನಾಜಿಮ್ ಅಲಿಯಾಸ್ ದನಿ (23) ಹಾಗೂ ಸೈಯದ್ ಅಲಿ (26) ಬಂಧಿತರು. ಅವರಿಂದ 5.95 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನಗಳು, 5 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮೇ 23ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಬೆನ್ಸನ್ ಕ್ರಾಸ್ ರಸ್ತೆಯ ಮಾಂಗಲ್ಯ ಅಪಾರ್ಟ್‌ಮೆಂಟ್ ಬಳಿ ವಾಯು ವಿಹಾರಕ್ಕೆ ಹೋಗುವಾಗ ಆರೋಪಿಗಳು ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ಬಂದು ಏಕಾಏಕಿ ಮೊಬೈಲ್ ಕಸಿದುಕೊಂಡು ಪರಾರಿಯಾ ಗಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಸೈಯದ್ ನಾಜಿಮ್ ವಿರುದ್ಧ ಶಿವಾಜಿನಗರ, ಕಮಿರ್ಷಿಯಲ್ ಸ್ಟ್ರೀಟ್, ಉಪ್ಪಾರಪೇಟೆ, ಬಾಣಸವಾಡಿ ಪೊಲೀಸ್ ಠಾಣೆ ಗಳಲ್ಲಿ ಸುಲಿಗೆ, ದ್ವಿಚಕ್ರ ವಾಹನ ಕಳವು ಪ್ರಕರಣ ಗಳು ದಾಖಲಾಗಿವೆ. ಇತ್ತೀಚೆಗೆ ಸಂಪಿಗೆಹಳ್ಳಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಮೇ 14ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದು, ಬಳಿಕವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಮತ್ತೂಬ್ಬ ಆರೋಪಿ ಸೈಯದ್ ಅಲಿ ವಿರುದ್ಧ ಕೂಡ ಶಿವಾಜಿನಗರ, ಕಮರ್ಷಿಲ್ ಸ್ಟ್ರೀಟ್, ಹೆಣ್ಣೂರು, ಕಬ್ಬನ್ ಪಾರ್ಕ್, ಜ್ಞಾನಭಾರತಿ, ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆ, ಸುಲಿಗೆ, ಗಾಂಜಾ ಸೇವನೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಸುಲಿಗೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ 2021ರ ಡಿಸೆಂಬರ್ 24ರಂದು ಜಾಮೀನು ಪಡೆದು ಹೊರಬಂದು ಬಳಿಕ ತನ್ನ ಹಳೇ ಚಾಳಿ ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಒಂಟಿ ಮಹಿಳೆಯರ ಟಾರ್ಗೆಟ್: ಆರೋಪಿ ಗಳು ಮುಂಜಾನೆ ಹಾಗೂ ಸಂಜೆ ವೇಳೆ ವಾಯು ವಿವಾಹರಕ್ಕೆ ಬರುವ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮೊಬೈಲ್ ಸುಲಿಗೆ ಮಾಡುತ್ತಿ ದ್ದರು. ಅಲ್ಲದೆ, ಮನೆ ಮುಂದೆ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ, ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿ ದ್ದರು. ಆರೋಪಿಗಳ ಬಂಧನದಿಂದ ಜೆ.ಸಿ.ನಗರ ಸೇರಿ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.