ವಾಷಿಂಗ್ಟನ್: ಟ್ವಿಟರ್‌ನ ಅಸ್ಮಿತೆಯಾಗಿದ್ದ “ನೀಲಿ ಹಕ್ಕಿ’ಯನ್ನು ಕಿತ್ತುಹಾಕಿ, ಚಿಹ್ನೆಯನ್ನು “ಎಕ್ಸ್’ ಎಂದು ಮರುನಾಮಕರಣ ಮಾಡಿರುವುದಕ್ಕೆ ಸಂಸ್ಥೆಯ ಮಾಲಕ ಎಲಾನ್ ಮಸ್ಕ್ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಮಸ್ಕ್ ಅವರ ಈ ನಿರ್ಧಾರದಿಂದ ಟ್ವಿಟರ್ ಸಂಸ್ಥೆಯ ಬ್ರ್ಯಾಂಡ್ ಮೌಲ್ಯವು ರಾತ್ರಿ ಕಳೆಯುವುದರೊಳಗಾಗಿ 32,700 ಕೋಟಿ ರೂ.ಗಳಿಂದ 1.63 ಲಕ್ಷ ಕೋಟಿ ರೂ.ವರೆಗೆ ಕುಸಿತ ಕಂಡಿದೆ. ಮಾರುಕಟ್ಟೆ ವಿಶ್ಲೇಷಕರು ಹಾಗೂ ಬ್ರ್ಯಾಂಡ್ ಏಜೆನ್ಸಿಗಳೇ ಈ ಮಾಹಿತಿ ನೀಡಿವೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಸಂಸ್ಥೆಗೆ ಇದು ಮತ್ತೂಂದು ಆಘಾತ ನೀಡಿದೆ.
ಜಗತ್ತಿನಾದ್ಯಂತ ಇಷ್ಟೊಂದು ಷೇರು ಮೌಲ್ಯವನ್ನು ಗಳಿಸಲು ಟ್ವಿಟರ್ ಸಂಸ್ಥೆಗೆ ಬರೋಬ್ಬರಿ 15ಕ್ಕೂ ಹೆಚ್ಚು ವರ್ಷಗಳು ಬೇಕಾಗಿದ್ದವು. ಈಗ ಟ್ವಿಟರ್ ಎಂಬ ಬ್ರ್ಯಾಂಡ್ ಹೆಸರನ್ನು ಕಳೆದುಕೊಂಡಿರುವುದು ಸಂಸ್ಥೆಗೆ ಅತಿದೊಡ್ಡ ಆರ್ಥಿಕ ಹೊಡೆತ ನೀಡಿದೆ ಎಂದು ಸೀಗಲ್ ಆ್ಯಂಡ್ ಗೇಲ್ ಸಂಸ್ಥೆಯ ಬ್ರ್ಯಾಂಡ್ ಸಂವಹನ ನಿರ್ದೇಶಕ ಸ್ಟೀವ್ ಸುಸಿ ಅಭಿಪ್ರಾಯಪಟ್ಟಿದ್ದಾರೆ.
ತಪ್ಪು ಮಾಡಿದ್ರಾ ಮಸ್ಕ್?: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮಸ್ಕ್ ಅವರು 44 ಶತಕೋಟಿ ಡಾಲರ್ ನೀಡಿ ಟ್ವಿಟರ್ ಅನ್ನು ಖರೀದಿಸಿದ್ದರು. ಅಂದಿನಿಂದಲೂ ಕಂಪೆನಿ ಬೇರೆ ಬೇರೆ ಕಾರಣಗಳಿಂದಾಗಿ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿತ್ತು. ಈಗ ಬ್ರ್ಯಾಂಡ್ ಹೆಸರನ್ನು ಬದಲಿಸುವ ಮೂಲಕ ಮಸ್ಕ್ ತಪ್ಪು ಮಾಡಿದರು ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಟ್ವಿಟರ್ ಎನ್ನುವುದು ವಿಶ್ವದ ಮೂಲೆ ಮೂಲೆಯಲ್ಲೂ ಗುರುತಿಸಲ್ಪಟ್ಟಿದ್ದ ಸಾಮಾಜಿಕ ಜಾಲತಾಣ ಬ್ರ್ಯಾಂಡ್ ಆಗಿತ್ತು. “ಟ್ವೀಟ್’ ಮತ್ತು “ರೀಟ್ವೀಟ್’ ಎಂಬ ಪದಗಳು ಆಧುನಿಕ ಸಂಸ್ಕೃತಿಯ ಭಾಗವಾಗಿದ್ದವು. ಇಂಥದ್ದೊಂದು ಜನಪ್ರಿಯತೆಯನ್ನು ಮರಳಿ ಗಳಿಸಬೇಕೆಂದರೆ “ಎಕ್ಸ್’ ಮತ್ತೆ ಶುರುವಿನಿಂದಲೇ ಪ್ರಯತ್ನ ಆರಂಭಿಸಬೇಕಾಗುತ್ತದೆ ಎಂದೂ ಹಲವು ಅಭಿಪ್ರಾಯಪಟ್ಟಿದ್ದಾರೆ.