ವಾಷಿಂಗ್ಟನ್: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮತ್ತು ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ನಡುವಿನ ವೈಯಕ್ತಿಕ ಮನಸ್ತಾಪಗಳ ಬಗೆಗಿನ ವಿಚಾರಗಳು ಟೆಕ್ ಪ್ರಿಯರಿಗೆ ಹೊಸ ಸಂಗತಿಯೇನಲ್ಲ. ಈರ್ವರು ಘಟಾನುಘಟಿ ಉದ್ಯಮಿಗಳ ನಡುವಿನ ವೈಮನಸ್ಯಕ್ಕೆ ಮಸ್ಕ್ ಒಡೆತನದ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಜುಕರ್‌ಬರ್ಗ್`ಥ್ರೆಡ್ಸ್’ ಬಿಡುಗಡೆ ಮಾಡುತ್ತಿರುವುದೇ ಮುಖ್ಯ ಕಾರಣ ಎಂದು ಹೇಳಲಾಗಿತ್ತು.
ಜು. 6 ರಂದು ಜುಕರ್‌ಬರ್ಗ್ ತಮ್ಮ `ಥ್ರೆಡ್ಸ್’ ಆಪ್ ಅನ್ನು ಬಿಡುಗಡೆ ಮಾಡಿದ್ಧಾರೆ. ವಿಶೇಷವೆಂದರೆ ಥ್ರೆಡ್ಸ್‌ನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಬಳಿಕ ಜುಕರ್‌ಬರ್ಗ್ ಟ್ವೀಟ್‌ವೊಂದನ್ನು ಮಾಡಿದ್ದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಏಕೆಂದರೆ ಬರೋಬ್ಬರಿ 11 ವರ್ಷಗಳ ಬಳಿಕ ಜುಕರ್‌ಬರ್ಗ್ ಮಾಡಿದ ಟ್ವೀಟ್ ಇದಾಗಿದ್ದು ಮಸ್ಕ್ ಜೊತೆಗಿನ ತಮ್ಮ ಗುದ್ದಾಟಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಿದೆ.
2012 ರ ಜ.18 ರಂದು ತಮ್ಮ ಕೊನೆಯ ಟ್ವೀಟ್ ಮಾಡಿದ್ದ ಜುಕರ್‌ಬರ್ಗ್,ಇಂದು ತಮ್ಮ ಥ್ರೆಡ್ಸ್ ಬಿಡುಗಡೆಯಾದ ಬಳಿಕ ಟ್ವೀಟ್ ಮಾಡಿದ್ಧಾರೆ.
ಇಂದು ಜುಕರ್‌ಬರ್ಗ್ ಮಾಡಿದ್ದ ಟ್ವೀಟ್‌ನಲ್ಲಿ ಇಬ್ಬರು ಸ್ಪೈಡರ್‌ಮ್ಯಾನ್‌ಗಳನ್ನು ತೋರಿಸಿದ್ದು, ಇಬ್ಬರೂ ಒಬ್ಬರನ್ನೊಬ್ಬರು ಆಶ್ಚರ್ಯದಿಂದ ನೋಡುವಂತಿದೆ. ನೆಟ್ಟಿಗರು ಇದನ್ನು ಜುಕರ್‌ಬರ್ಗ್‌ನ ಥ್ರೆಡ್ಸ್ ಮತ್ತು ಮಸ್ಕ್‌ನ ಟ್ವಿಟ್ಟರ್ ತಾವಿಬ್ಬರು ಒಂದೇ ರೀತಿ ಇರುವುದರಿಂದ ಪರಸ್ಪರ ಆಶ್ಚರ್ಯದಿಂದ ನೋಡುತ್ತಿರುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಮಸ್ಕ್ ಮತ್ತು ಜುಕರ್‌ಬರ್ಗ್ ಈ ರೀತಿ ಸೋಷಿಯಲ್‌ಮೀಡಿಯಾಗಳ ಮೂಲಕ ಕಾಲೆಳೆದುಕೊಂಡಿರುವುದು ಇದೇ ಮೊದಲಲ್ಲ. ಕಳೆದ ಕೆಲ ದಿನಗಳ ಹಿಂದೆ ಮಸ್ಕ್ ಅವರು ಪರೋಕ್ಷವಾಗಿ ಜುಕರ್‌ಬರ್ಗ್ ಅವರನ್ನು ಗುರಿಯಾಗಿಸಿ ʻಪಂಜರದೊಳಗಿನ ಪಂದ್ಯಕ್ಕಾಗಿʼ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜುಕರ್‌ಬರ್ಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ʻವಿಳಾಸ ಕಳುಹಿಸಿʼ ಎಂದು ಕುಟುಕಿದ್ದು ವೈರಲ್ ಆಗಿತ್ತು.
ಇದನ್ನೂ ಓದಿ: Twitter v/s Threads: ನೂತನ ಥ್ರೆಡ್ಸ್ ಬಿಡುಗಡೆಯಾದ 4ಗಂಟೆಯಲ್ಲೇ 5 ಲಕ್ಷ App ಡೌನ್ ಲೋಡ್