Advertisement

ಟ್ವೀಟಾಧಿಪತಿ ಮಸ್ಕ್; ಸವಾಲೊಡ್ಡಿದ ಸಂಸ್ಥೆಗೇ ಒಡೆಯನಾದ ಜಾಣ

02:23 AM Apr 27, 2022 | Team Udayavani |

ಟ್ವಿಟರ್‌ಗೂ ಎಲಾನ್‌ ಮಸ್ಕ್ ಗೂ ಅವಿನಾಭಾವ ನಂಟು. ಮಸ್ಕ್ ಅವರ ಪ್ರತೀವಿವಾದಗಳ ಹಿಂದೆಯೂ ಟ್ವಿಟರ್‌ ಇದೆ ಎಂಬುದು ಅಚ್ಚರಿ ಎನ್ನಿಸಿದರೂ ಸತ್ಯ. ವಿಶೇಷವೆಂದರೆ, ಮಸ್ಕ್ 2009ರಿಂದಲೂ ಟ್ವಿಟರ್‌ನಲ್ಲಿದ್ದರೂ, ಟ್ವೀಟ್‌ ಮಾಡಲು ಆರಂಭಿಸಿದ್ದು ಮಾತ್ರ 2017ರಲ್ಲಿ! 2018ರಲ್ಲಿ ಮಸ್ಕ್ ಮಾಡಿದ ಟ್ವೀಟೊಂದು ಅವರ ಟೆಸ್ಲಾ ಕಂಪೆನಿಗೆ 40 ದಶಲಕ್ಷ ಡಾಲರ್‌ ನಷ್ಟ ಮಾಡಿತ್ತು! ಈ ಟ್ವೀಟ್‌ಗೆ ಮಸ್ಕ್ 20 ದಶಲಕ್ಷ ಡಾಲರ್‌ ದಂಡ ಕಟ್ಟಿದ್ದರು. ಇಂಥ ಮಸ್ಕ್ ಈಗ ಟ್ವಿಟರ್‌ನ ಅಧಿಪತಿ…

Advertisement

ಬರೋಬ್ಬರಿ ಡೀಲ್‌
ಕಳೆದ ಜನವರಿಯಿಂದಲೂ ಟ್ವಿಟರ್‌ ಸಂಸ್ಥೆ ಮತ್ತು ಎಲಾನ್‌ ಮಸ್ಕ್ ನಡುವೆ ಒಂದು ತಿಕ್ಕಾಟ ನಡೆಯುತ್ತಲೇ ಇತ್ತು. ಅಂದರೆ ಜನವರಿಯಿಂದಲೇ ಟ್ವಿಟರ್‌ ಮೇಲೆ ಕಣ್ಣಿಟ್ಟಿದ್ದ ಮಸ್ಕ್, ಆ ಸಂಸ್ಥೆಯ ಷೇರು ಖರೀದಿ ಆರಂಭಿಸುತ್ತಾರೆ. ಜನವರಿಯಲ್ಲಿ ಶುರುವಾದ ಈ ಪ್ರಕ್ರಿಯೆ ಮಾರ್ಚ್‌ 24ರ ಹೊತ್ತಿಗೆ ಒಂದು ಹಂತ ತಲುಪುತ್ತದೆ. ಅಂದರೆ ಅಷ್ಟೊತ್ತಿಗೆ ಮಸ್ಕ್ ಶೇ..5ರಷ್ಟು ಷೇರು ಖರೀದಿಸುತ್ತಾರೆ. ಆದರೆ, ಎ.4ರ ಹೊತ್ತಿಗೆ ಟ್ವಿಟರ್‌ನ ಶೇ. 9.2ರಷ್ಟು ಷೇರು ಖರೀದಿಸಿ, ಕಂಪೆನಿಯ ದೊಡ್ಡ ಷೇರುದಾರರಾಗುತ್ತಾರೆ. ಈ ಬಳಿಕವೇ ಅವರು “ನಾನು 43 ಬಿಲಿಯನ್‌ ಡಾಲರ್‌ ಕೊಡುತ್ತೇನೆ, ಟ್ವಿಟರ್‌ ನನಗೆ ಕೊಡಿ’ ಎಂಬ ನೇರ ಆಫ‌ರ್‌ ಕೊಡುತ್ತಾರೆ. ಮೊದಲಿಗೆ ನಿರಾಕರಿಸುವ ಸಂಸ್ಥೆ, ಬಳಿಕ ಷೇರುದಾರರಲ್ಲೇ ಮತಕ್ಕೆ ಹಾಕಿ, ಕಂಪೆನಿಯನ್ನು ಮಾರಲು ನಿರ್ಧರಿಸುತ್ತದೆ. ಸೋಮವಾರ ಅಂತಿಮ ನಿರ್ಧಾರ ತೆಗೆದುಕೊಂಡ ಸಂಸ್ಥೆ, 44 ಬಿಲಿಯನ್‌ ಡಾಲರ್‌ಗೆ ಟ್ವಿಟರನ್ನು ಮಸ್ಕ್ ಗೆ ಮಾರಾಟ ಮಾಡುತ್ತದೆ.

ಮುಕ್ತ ಸ್ವಾತಂತ್ರ್ಯ ಮತ್ತು ಮಸ್ಕ್…
ಈಗಿನ ಲೆಕ್ಕಾಚಾರದ ಬಗ್ಗೆ ನೋಡುವುದಾದರೆ ಎಲಾನ್‌ ಮಸ್ಕ್ ಅವರು ಟ್ವಿಟರ್‌ ಖರೀದಿ ಮಾಡಿದ್ದೇ, ಮುಕ್ತ ಸ್ವಾತಂತ್ರ್ಯ ನೀಡಲು ಎಂಬ ಚರ್ಚೆಗಳಿವೆ. ಇದು ಹೌದು ಕೂಡ. ಏಕೆಂದರೆ ಹಿಂದಿನಿಂದಲೂ ಮಸ್ಕ್ ಅವರು, ಟ್ವಿಟರ್‌ನಿಂದ ಯಾರನ್ನಾದರೂ ನಿಷೇಧಿಸಿದರೆ ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಷ್ಟೇ ಅಲ್ಲ, 2018ರಲ್ಲಿ ತಮ್ಮ ಕಂಪನಿ ಕುರಿತಾದ ಟ್ವೀಟ್‌ ವಿಚಾರದಲ್ಲಿ ಸಾಕಷ್ಟು ಅವಮಾನವನ್ನೂ ಎದುರಿಸಿದ್ದರು. ಟ್ವಿಟರ್‌ ವೇದಿಕೆಯಿಂದ ಯಾರನ್ನೂ ಹೊರಹಾಕಬಾರದು ಎಂಬುದೇ ಇವರ ನಿಲುವು.

ಟ್ವಿಟರ್‌ ಸಂಸ್ಥೆಗೆ ಲಾಭವೇ?
ಮಾರುಕಟ್ಟೆ ತಜ್ಞರ ಪ್ರಕಾರ, ಈ ಡೀಲ್‌ನಿಂದ ಟ್ವಿಟರ್‌ಗೆ ಹೆಚ್ಚೇ ಲಾಭವಾಗಿದೆ. ಈಗಲೂ ಷೇರು ಮಾರುಕಟ್ಟೆಯಲ್ಲಿ ಟ್ವಿಟರ್‌ ಅಂಥಾ ಲಾಭವನ್ನೇನೂ ಮಾಡಿಲ್ಲ. ಈಗಲೂ ಪ್ರತೀ ಷೇರಿಗೆ 54 ಡಾಲರ್‌ ನೀಡುತ್ತಿರುವುದು ತುಸು ಹೆಚ್ಚೇ ಎಂದು ಹೇಳುತ್ತಿದ್ದಾರೆ. ಕಳೆದ ಬಾರಿ ಇದು ಕೇವಲ 5 ಬಿಲಿಯನ್‌ ಡಾಲರ್‌ ಆದಾಯ ತೋರಿಸಿತ್ತು. ಇಂಥ ಕಂಪೆನಿಗೆ 44 ಬಿಲಿಯನ್‌ ಡಾಲರ್‌ ನೀಡುತ್ತಿರುವುದೇ ಅಚ್ಚರಿ ಎನ್ನುತ್ತಿದ್ದಾರೆ.

ಟ್ರಂಪ್‌ ಟ್ವಿಟರ್‌ ವಾಪ್ಸಿ
ಮಸ್ಕ್ ಮತ್ತು ಟ್ವಿಟರ್‌ ಡೀಲ್‌ ನಡುವೆಯೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಾತನಾಡಿದ್ದಾರೆ. “ಮಸ್ಕ್ ಅವರು ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಕೊಡುತ್ತಾರೆ. ಈಗ ನನ್ನನ್ನು ಟ್ವಿಟರ್‌ ಸಂಸ್ಥೆಯೊಳಗೆ ಸೇರಿಸಿಕೊಳ್ಳಬಹುದು. ಆದರೆ ನನಗೇ ಇಷ್ಟವಿಲ್ಲ. ನಾನು ನನ್ನದೇ ಆದ ಟ್ರಾಥ್‌ ಜತೆಗೇ ಇರುತ್ತೇನೆ’ ಎಂದಿದ್ದಾರೆ. ಇತ್ತ ಮಸ್ಕ್ ಕೂಡ, ಟ್ರಂಪ್‌ ಅವರನ್ನು ಸ್ವಾಗತಿಸುವ ಬಗ್ಗೆ ಮಾತನಾಡಿದ್ದಾರೆ.

Advertisement

ಮಸ್ಕ್ ಟ್ವಿಟರ್‌ ಮತ್ತು ಭಾರತ
ಈಗಲೂ ಜಾಗತಿಕವಾಗಿ ಟ್ವಿಟರ್‌ ಮತ್ತು ಫೇಸ್‌ ಬುಕ್‌ ವಿರುದ್ಧ ಚುನಾವಣಾಣ ಸಂದರ್ಭದಲ್ಲಿ ಮತದಾರರ ಮೇಲೆ ಗಣನೀಯ ಪ್ರಭಾವ ಬೀರುತ್ತವೆ ಎಂಬ ಆರೋಪಗಳಿವೆ. ಇದಕ್ಕೆ ಪೂರಕವೆಂಬಂತೆ, ಅಮೆರಿಕ ಅಧ್ಯಕ್ಷೀಯ ಚುನಾ ವಣೆ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್‌ ಅವರು ಟ್ವಿಟರ್‌ ಮೂಲಕ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಕಾರಣದಿಂದಾಗಿ ನಿಷೇಧಿಸಲಾಗಿತ್ತು. ಈಗ ಭಾರತದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ಮಸ್ಕ್ ಫ್ರೀ ಸ್ಪೀಚ್‌ಗೆ ಬೆಲೆ ಕೊಡುತ್ತಾರೆ ಎಂದಾದರೆ ಭಾರತದಲ್ಲಿ ಅದು ಹೇಗೆ ವರ್ಕ್‌ಔಟ್‌ ಆಗುತ್ತದೆ ಎಂಬ ಪ್ರಶ್ನೆಗಳಿವೆ. ಏಕೆಂದರೆ ಸಾಮಾಜಿಕ ಜಾಲತಾಣಗಳಿಂದಲೇ ಭಾರತ ದಲ್ಲಿ ಹೆಚ್ಚು ಸಂಘರ್ಷಗಳು ಉಂಟಾಗುವ ಸಾಧ್ಯತೆಗಳಿವೆ. ಒಂದು ವೇಳೆ ಮುಕ್ತ ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಏನು ಬೇಕಾದರೂ ಟ್ವೀಟ್‌ಮಾಡಬಹುದು ಎಂದಾದರೆ ಒಂದಷ್ಟು ಕಷ್ಟಕರ ಸನ್ನಿವೇಶ ಸೃಷ್ಟಿಯಾಗಬಹುದು. ಅಂದಹಾಗೆ ಟ್ವಿಟರ್‌ನ ಒಟ್ಟು ಬಳಕೆದಾರರ ಪೈಕಿ 23 ಮಿಲಿಯನ್‌ ಬಳಕೆದಾರರು ಭಾರತೀಯರೇ ಇದ್ದಾರೆ.

ಡೀಲ್‌ ಆಯಿತು, ಮುಂದೇನು?
ಈಗ ಟ್ವಿಟರ್‌ ಮತ್ತು ಮಸ್ಕ್ ನಡುವೆ ಡೀಲ್‌ ಏನೋ ಆಗಿದೆ. ಆದರೆ ಟ್ವಿಟರ್‌ ಮತ್ತು ಅದರಲ್ಲಿನ ಉದ್ಯೋಗಿಗಳಿಗೆ ಮಾತ್ರ ಮುಂದೇನು ಎಂಬ ಪ್ರಶ್ನೆ ಎದುರಾಗಿದೆ. ಮೂಲಗಳ ಪ್ರಕಾರ ಟ್ವಿಟರ್‌ ಸಿಇಒ, ಭಾರತೀಯ ಮೂಲದ ಪರಾಗ್‌ ಅಗರ್ವಾಲ್‌ಗೆ 42 ಮಿಲಿಯನ್‌ ಡಾಲರ್‌ ನೀಡಲಾಗುತ್ತದಂತೆ. ಅಂದರೆ ಟ್ವಿಟರ್‌ ಸಂಸ್ಥೆಯಿಂದ ಇವರನ್ನು ತೆಗೆದುಹಾಕಿದರೆ ಮಾತ್ರ ಈ ಪ್ರಮಾಣದ ಹಣ ಪರಾಗ್‌ಗೆ ಸಿಗುತ್ತದೆ.

ಮಸ್ಕ್ Vs ಟ್ವಿಟರ್‌ ಒಂದು ಟೈಮ್‌ಲೈನ್‌
ಜ.31ರಿಂದ ಮಾ.24

ಜ.31
ಮಸ್ಕ್ ರಿಂದ ಟ್ವಿಟರ್‌ ಸಂಸ್ಥೆಯ ಷೇರುಗಳ ಖರೀದಿ ಆರಂಭ. ಮಾ.24ರ ಹೊತ್ತಿಗೆ ಶೇ.5 ಖರೀದಿ.

ಮಾ.24
ಮುಕ್ತ ವಾಕ್‌ ಸ್ವಾತಂತ್ರ್ಯದ ಕುರಿತಾಗಿ ಟ್ವಿಟರ್‌ ವಿರುದ್ಧ ಟ್ವಿಟರ್‌ನಲ್ಲೇ ವಾಗ್ಧಾಳಿ. ಪ್ರಜಾಪ್ರಭುತ್ವದ ಕಾರ್ಯ ನಿರ್ವಹಣೆಗೆ ವಾಕ್‌ ಸ್ವಾತಂತ್ರ್ಯ ಅತ್ಯಂತ ಮುಖ್ಯವಾದದ್ದು ಎಂದು ಟ್ವೀಟ್‌ ಮಾಡುತ್ತಾರೆ.

ಮಾ.26
“ಹೊಸ ವೇದಿಕೆಯೊಂದು ಬೇಕೇ?’ ಎಂದು ಮಸ್ಕ್ ಮತ್ತೆ ಟ್ವೀಟ್‌, ಟ್ವಿಟರ್‌ ಬಗ್ಗೆ ಖಂಡನೆ.

ಎಪ್ರಿಲ್ 4
ಮಸ್ಕ್ ರಿಂದ ಟ್ವಿಟರ್‌ ಸಂಸ್ಥೆಯ ಶೇ.9.2ರಷ್ಟು ಷೇರು ಖರೀದಿ. ಅಂದೇ, ಟ್ವಿಟರ್‌ನಲ್ಲಿ ಎಡಿಟ್‌ ಬಟನ್‌ ಬೇಕೆ ಎಂಬ ಪೋಲಿಂಗ್‌.

ಎಪ್ರಿಲ್ 5
ಎಲಾನ್‌ ಮಸ್ಕ್ ಟ್ವಿಟರ್‌ ಆಡಳಿತ ಮಂಡಳಿಯ ಸದಸ್ಯರಾಗಲಿದ್ದಾರೆ ಎಂದು ಘೋಷಿಸಿದ ಸಿಇಓ ಪರಾಗ್‌ ಅಗರ್ವಾಲ್

ಎಪ್ರಿಲ್ 9
“ಟ್ವಿಟರ್‌ ಸಾಯುತ್ತಿದೆಯೇ?’ ಎಂಬ ಟ್ವೀಟ್‌ ಮಾಡಿ, ಅತ್ಯಂತ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಬರಾಕ್‌ ಒಬಾಮಾ, ಹಾಡುಗಾರ ಜಸ್ಟಿನ್‌ ಬೀಬರ್‌ ಅವರು ಕಡಿಮೆ ಟ್ವೀಟ್‌ ಮಾಡುತ್ತಿರುವ ಬಗ್ಗೆ ಪ್ರಸ್ತಾವ‌.

ಎಪ್ರಿಲ್ 10
ಟ್ವಿಟರ್‌ ಆಡಳಿತ ಮಂಡಳಿ ಸೇರುವುದಿಲ್ಲ ಎಂದು ಘೋಷಿಸಿದ ಮಸ್ಕ್.

ಎಪ್ರಿಲ್ 14
“44 ಬಿಲಿಯನ್‌ ಡಾಲರ್‌ ಕೊಡುತ್ತೇನೆ, ಟ್ವಿಟರ್‌ ಸಂಸ್ಥೆ ಕೊಡಿ’ ಎಂದು ನೇರ ಆಫ‌ರ್‌ ಕೊಟ್ಟ ಮಸ್ಕ್ ಅಂದರೆ, “ಪ್ರತೀ ಷೇರಿಗೆ 54 ಡಾಲರ್‌ ನೀಡುತ್ತೇನೆ, ಶೇ.100 ಷೇರು ನನಗೇ ಕೊಡಿ’ ಎಂದು ಆಫ‌ರ್‌.

ಎಪ್ರಿಲ್ 24
ಎಲಾನ್‌ ಮಸ್ಕ್ ಜತೆಗೆ ಟ್ವಿಟರ್‌ ಆಡಳಿತ ಮಂಡಳಿಯಿಂದ ಮಾತುಕತೆ.

ಎಪ್ರಿಲ್ 25
ಟ್ವಿಟರ್‌ ಸಂಸ್ಥೆಯ ಶೇ.100ರಷ್ಟು ಷೇರು ಖರೀದಿಸಿದ ಮಸ್ಕ್.

Advertisement

Udayavani is now on Telegram. Click here to join our channel and stay updated with the latest news.

Next