ವಾಷಿಂಗ್ಟನ್;ಸಾಮಾಜಿಕ ಜಾಲತಾಣ ಟ್ವೀಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂಪಾಯಿಗಳಿಗೆ ವಿಶ್ವದ ನಂಬರ್ ವನ್ ಶ್ರೀಮಂತ ಎಲಾನ್ ಮಸ್ಕ್ ಅವರು ಖರೀದಿ ಮಾಡಿರುವ ಬೆನ್ನಲ್ಲೇ ಒಂದು ವೇಳೆ ಮಾಲೀಕತ್ವ ಬದಲಾವಣೆಯಾದ ಹಿನ್ನೆಲೆಯಲ್ಲಿ ಟ್ವೀಟರ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪರಾಗ್ ಅಗರ್ವಾಲ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿದರೆ ಅವರಿಗೆ ಕಂಪನಿ ಕೊಡಬೇಕಾದ ಪರಿಹಾರ ಎಷ್ಟು ಎಂಬ ಬಗ್ಗೆ ಚರ್ಚೆ ನಡೆಯತೊಡಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಾಡಿದ ಕೆಲಸಗಳೇ ಈಗಿನ ಕೋಮು ಗಲಭೆಗೆ ಕಾರಣ: ನಳಿನ್ ಕಟೀಲ್
ಟ್ವೀಟರ್ ಮಾಲೀಕತ್ವ ಬದಲಾವಣೆಯಾಗಿದ್ದು, 12 ತಿಂಗಳೊಳಗೆ ಪರಾಗ್ ಅಗರ್ವಾಲ್ ಅವರನ್ನು ಸಿಇಒ ಸ್ಥಾನದಿಂದ ಪದಚ್ಯುತಗೊಳಿಸಿದರೆ ಕಂಪನಿ ಅವರಿಗೆ ಅಂದಾಜು 42 ದಶಲಕ್ಷ(ಅಂದರೆ 321ಕೋಟಿ) ಮೊತ್ತ ಪರಿಹಾರ ಕೊಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲರ್ ವಿವರಿಸಿದೆ.
ಅಗರ್ವಾಲ್ ಈ ಹಿಂದೆ ಟ್ವೀಟರ್ ನ ಚೀಫ್ ಟೆಕ್ನಾಲಜಿ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದು, ಕಳೆದ ವರ್ಷ ನವೆಂಬರ್ ನಲ್ಲಿ ಸಿಇಒ ಆಗಿ ನೇಮಕ ಮಾಡಲಾಗಿತ್ತು. ಇದೀಗ ಒಂದು ವೇಳೆ ಪರಾಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದರೆ ಅವರ ಮೂಲವೇತನ, ಈಕ್ವಿಟಿ, ಷೇರುಬಂಡವಾಳ ಸೇರಿದಂತೆ ಒಟ್ಟು 321 ಕೋಟಿ ರೂಪಾಯಿಯಷ್ಟು ಪರಿಹಾರ ನೀಡಬೇಕಾಗಲಿದೆ ಎಂದು ವರದಿ ತಿಳಿಸಿದೆ.
2013ರಿಂದ ಸಾರ್ವಜನಿಕ ಕಂಪನಿಯಾಗಿದ್ದ ಟ್ವೀಟರ್ ಅನ್ನು ವಿಶ್ವದ ನಂಬರ್ ವನ್ ಶ್ರೀಮಂತ ಎಲಾನ್ ಮಸ್ಕ್ 3 ಲಕ್ಷ ಕೋಟಿ ರೂಪಾಯಿಗೆ ಖರೀದಿಸುವ ಮೂಲಕ ಖಾಸಗಿ ಒಡೆತನಕ್ಕೆ ಸೇರಿದಂತಾಗಿದೆ.
ಟ್ವೀಟರ್ ಸಂಸ್ಥೆಯನ್ನು ಎಲಾನ್ ಮಸ್ಕ್ ಖರೀದಿಸುವುದಕ್ಕೆ ಸಿಇಒ ಪರಾಗ್ ಸೇರಿದಂತೆ ಸಿಬ್ಬಂದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಟ್ವೀಟರ್ ಸಂಸ್ಥೆ ಎಲಾನ್ ಮಸ್ಕ್ ಗೆ ಮಣೆ ಹಾಕುವ ಮೂಲಕ ಟ್ವೀಟರ್ ಸಂಸ್ಥೆಯಲ್ಲಿನ ಉದ್ಯೋಗಿಗಳ ಆತಂಕ ಇನ್ನಷ್ಟು ದುಪ್ಪಟ್ಟಾಗಿದೆ ಎಂದು ವರದಿ ಹೇಳಿದೆ.