Advertisement

ಮಾಸಿಕ ಶುಲ್ಕ ಪಾವತಿಸದ ಹಿನ್ನೆಲೆ: ಖ್ಯಾತನಾಮರ ಬ್ಲೂಟಿಕ್‌ ತೆಗೆದ ಟ್ವಿಟರ್

09:15 AM Apr 21, 2023 | Team Udayavani |

ವಾಷಿಂಗ್ಟನ್/ ನವದೆಹಲಿ: ಮೈಕ್ರೋ ಬ್ಲಾಗಿಂಗ್ ಫ್ಲಾಟ್‌ ಫಾರ್ಮ್‌ ಟ್ವಿಟರ್‌ ತನ್ನ ಪ್ರಿಮಿಯಮ್‌ ಬ್ಲೂಟಿಕ್‌ ಸೇವೆಯ ಅನುಷ್ಠಾನದ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಬ್ಲೂಟಿಕ್‌ ಸೇವೆಯನ್ನು ಪಡೆಯಲು ಶುಲ್ಕ ಪಾವತಿಸದ ವ್ಯಕ್ತಿಗಳ ಖಾತೆಯಿಂದ ಬ್ಲೂಟಿಕ್‌ ತೆಗೆದು ಹಾಕುವ ಪ್ರಕ್ರಿಯೆಗೆ ಟ್ವಿಟರ್‌ ಚಾಲನೆ ನೀಡಿದೆ.

Advertisement

ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಮೇಲೆ ತನ್ನ ಒಡೆತನವನ್ನು ಪಡೆದುಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ. ಅದರಲ್ಲಿ ಒಂದು ಬದಲಾವಣೆ ಎಂದರೆ ಅದು ಬ್ಲೂಟಿಕ್‌ ಸೇವೆಯನ್ನು ಪ್ರಿಮಿಯಮ್‌ ಮಾಡುವುದು. ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಟ್ವಿಟರ್‌ ಖಾತೆಯನ್ನು ವೆರಿಫೈಡ್ ಮಾಡಿ ಬ್ಲೂಟಿಕ್‌ ನೀಡಲಾಗುತ್ತದೆ. ಕಳೆದ ಕೆಲ ಸಮಯದ ಹಿಂದೆ ಇನ್ನು ಮುಂದೆ ಬ್ಯೂಟಿಕ್‌ ಇರುವವರು ತಿಂಗಳಿಗೆ ಇಂತಿಷ್ಟು ಪಾವತಿಸುವ ನಿಯಮವನ್ನು ಟ್ವಿಟರ್‌ ಜಾರಿಗೆ ತಂದಿತ್ತು. ಇದೀಗ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಹೊರಟಿದೆ.

ಟ್ವಿಟರ್‌ ಸುಮಾರು 300,000 ವೆರಿಫೈಡ್ ಬಳಕೆದಾರರನ್ನು ಹೊಂದಿದೆ. ಅವರಲ್ಲಿ ಅನೇಕ ಪತ್ರಕರ್ತರು, ಕ್ರೀಡಾಪಟುಗಳು ಮತ್ತು ಸಾರ್ವಜನಿಕ ವ್ಯಕ್ತಿಗಳು ಇದ್ದಾರೆ.

ಗುರುವಾರ ( ಏ.20 ರಿಂದ) ಮಧ್ಯಾಹ್ನದಿಂದ ಟ್ವಿಟರ್‌ ಬಳಕೆದಾರರಿಗೆ ತನ್ನ ಬ್ಲೂಟಿಕ್‌ ತೆಗೆದಿರುವುದು ಗೊತ್ತಾಗಿದೆ. ಖ್ಯಾತ ಸೆಲೆಬ್ರಿಟಿಗಳಾಗಿರುವ ಓಪ್ರಾ ವಿನ್ಫ್ರೇ, ಜಸ್ಟಿನ್ ಬೈಬರ್, ಕೇಟಿ ಪೆರ್ರಿ ಮತ್ತು ಕಿಮ್ ಕಾರ್ಡಶಿಯಾನ್  ಅವರು ತನ್ನ ಬ್ಲೂಟಿಕ್‌ ನ್ನು ಕಳೆದುಕೊಂಡಿದ್ದಾರೆ. ಇದಲ್ಲದೆ ಭಾರತದಲ್ಲಿ ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟ ಶಾರುಖ್ ಖಾನ್ ಸೇರಿದಂತೆ ಉದ್ಯಮಿಗಳಾದ ರತನ್ ಟಾಟಾ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಗೌತಮ್ ಅದಾನಿ ಅವರ ಬ್ಲೂಟಿಕ್ ನ್ನು ಸಹ ಟ್ವಿಟರ್‌ ತೆಗೆದು ಹಾಕಿದೆ.

ಮಾಸಿಕ ಶುಲ್ಕವನ್ನು ಪಾವತಿಸದ ಕಾರಣಕ್ಕೆ ಈ ನಿರ್ಧಾರವನ್ನು ಟ್ವಿಟರ್‌ ತೆಗೆದುಕೊಂಡಿದ್ದು, ಇಷ್ಟು ದಿನ ಬ್ಲೂಟಿಕ್‌ ಬಳಕೆದಾರರಿಗಿದ್ದ ವಿಶೇಷ ಟ್ವಿಟರ್‌ ಫೀಚರ್ಸ್‌ ಗಳು ಕೂಡ ಅವರಿಗೆ ಇದರಿಂದ ಲಭ್ಯವಾಗುವುದಿಲ್ಲ.

Advertisement

ಟ್ವಿಟರ್‌ ನಲ್ಲಿ ಪ್ರೀಮಿಯಮ್ ಸಬ್‌ಸ್ಕ್ರಿಪ್ಶನ್ ಬ್ಲೂಟಿಕ್‌ ಸೇವೆಯನ್ನು ಹೊಂದಿರುವವರಿಗೆ ಅಕ್ಷರ ಮಿತಿ ಹಾಗೂ 60 ನಿಮಿಷದವರೆಗಿನ ವಿಡಿಯೋ ಆಪ್ಲೋಡ್‌ ಮಾಡುವ ಸೇವೆಯೂ ಲಭ್ಯವಿದೆ.

ಭಾರತದಲ್ಲಿ ಬ್ಲ್ಯೂ ಟಿಕ್‌ ಸೇವೆಗೆ ತಿಂಗಳಿಗೆ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ 900 ರೂ.ವಿದೆ. ಇನ್ನು ವೆಬ್‌ ಬಳಕೆದಾರರಿಗೆ  650 ರೂ. ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next