Advertisement

ರಾಜಧಾನಿಯಲ್ಲಿ ಅವಳಿ ಗೋಪುರ

09:41 AM Mar 07, 2020 | Lakshmi GovindaRaj |

ರಾಜಧಾನಿಯ ಹೃದಯ ಭಾಗದಲ್ಲಿ ಸರ್ಕಾರಿ ಕಚೇರಿಗಳೆಲ್ಲ ಒಂದೇ ಕಡೆ ಇರುವಂತೆ 400 ಕೋಟಿ ರೂ. ವೆಚ್ಚದಲ್ಲಿ ಅವಳಿ ಗೋಪುರ ನಿರ್ಮಾಣ ಯೋಜನೆ ಘೋಷಿಸಲಾಗಿದೆ. ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿ ಸರ್ಕಾರಿ ಕಚೇರಿಗಳನ್ನು ಒಂದೇ ಕಟ್ಟಡದಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಿದೆ. ಅದರಂತೆ 25 ಅಂತಸ್ತಿನ ಬಹುಮಹಡಿ ಅವಳಿ ಗೋಪುರ ನಿರ್ಮಾಣಕ್ಕೆ ಆಯವ್ಯಯದಲ್ಲಿ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಾಗಿ ಪ್ರಕಟಿಸಿದೆ.

Advertisement

ರಾಜ್ಯದ ನಾನಾ ಇಲಾಖೆಗಳು ಆಯಾ ಇಲಾಖೆಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಅನುಸೂಚಿ ದರಗಳನ್ನು (ಶೆಡ್ನೂಲ್‌ ರೇಟ್‌) ಸಿದ್ಧಪಡಿಸಲಾಗುತ್ತಿದೆ. ಇದರಿಂದ ಒಂದೇ ಪ್ರದೇಶದಲ್ಲಿ ಒಂದೇ ಕಾಮಗಾರಿಗೆ ಪ್ರತ್ಯೇಕ ಅನುಸೂಚಿ ದರಗಳನ್ನು ಪರಿಗಣಿಸಲಾಗುತ್ತಿದೆ. ಎಲ್ಲ ಇಲಾಖೆಗಳು ಹಾಗೂ ನಿಗಮ- ಮಂಡಳಿಗಳಿಗೆ ಏಕರೂಪದ ಅನುಸೂಚಿ ದರಗಳನ್ನು ರೂಪಿಸಿ ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಧಾರವಾಡ- ಬೆಳಗಾವಿ ನಡುವೆ ಕಿತ್ತೂರಿನ ಮೂಲಕ ನೂತನ ರೈಲು ಮಾರ್ಗ ನಿರ್ಮಾಣದಿಂದ ಧಾರವಾಡ- ಬೆಳಗಾವಿ ನಡುವಿನ ಅಂತರ 121 ಕಿ.ಮೀ.ನಿಂದ 73 ಕಿ.ಮೀ.ಗೆ ಇಳಿಕೆಯಾಗುತ್ತದೆ. ಜತೆಗೆ ಪ್ರಯಾಣ ಅವಧಿಯಲ್ಲಿ ಕನಿಷ್ಠ ಒಂದು ಗಂಟೆ ಉಳಿತಾಯವಾಗುತ್ತದೆ. ಆದ್ದರಿಂದ ಈ ನೂತನ ರೈಲು ಮಾರ್ಗ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಹಾಗೂ ಶೇ. 50ರಷ್ಟು ಕಾಮಗಾರಿ ವೆಚ್ಚವನ್ನು ಭರಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಆಯವ್ಯಯದಲ್ಲಿ ದಾಖಲಿಸಲಾಗಿದೆ.

ಹಾಗೆಯೇ ಹಾಸನ- ಮಂಗಳೂರು ರೈಲು ಅಭಿವೃದ್ಧಿ ನಿಗಮವು ಸಕಲೇಶಪುರ, ಸುಬ್ರಹ್ಮಣ್ಯ ನಿಲ್ದಾಣಗಳ ನಡುವಿನ ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆ (ವೇಗ) ಹೆಚ್ಚಿಸುವ ಕಾಮಗಾರಿ ನಡೆಸಲು ಉದ್ದೇಶಿಸಿದೆ. ಇದರಿಂದ ಬೆಂಗಳೂರು- ಮಂಗಳೂರಿನ ನಡುವಿನ ರೈಲುಗಳ ವೇಗ ಹೆಚ್ಚುವುದಲ್ಲದೇ ಹೆಚ್ಚುವರಿ ರೈಲು ಸೇವೆ ಆರಂಭಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಲೋಕೋಪಯೋಗಿ ಇಲಾಖೆಗೆ ಆಯವ್ಯಯದಲ್ಲಿ 11,463 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ಚಾಲ್ತಿ ಕಾಮಗಾರಿಗಳಿಗೆ ಹೆಚ್ಚಿನ ಹಣ ವಿನಿಯೋಗವಾಗುವ ಸಾಧ್ಯತೆ ಇದೆ.

ಪ್ರಾದೇಶಿಕ ಸಮತೋಲನ ಕಸರತ್ತು: ಪ್ರಾದೇಶಿಕ ಅಸಮಾನತೆ ನಿವಾರಿಸಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬರೋಬ್ಬರಿ 5,060 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ರಾಜ್ಯದ ಪ್ರಾದೇಶಿಕ ಅಸಮಾನತೆ ನಿವಾರಣೆ ಸರ್ಕಾರದ ಪ್ರಮುಖ ಆದ್ಯತೆ ಎಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಯೋಜನೆಗೆ 2020-21ನೇ ಸಾಲಿನಲ್ಲಿ 3060 ಕೋಟಿ ರೂ. ಅನುದಾನ ಘೋಷಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದ್ದ ಯಡಿಯೂರಪ್ಪ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1,500 ಕೋಟಿ ರೂ. ಕಾಯ್ದಿರಿಸಿದ್ದಾರೆ.

Advertisement

ಮಾನವ ಸಂಪನ್ಮೂಲಕ್ಕೆ 500 ಕೋಟಿ: ಕಲ್ಯಾಣ ಕರ್ನಾಟಕ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಹೊಸದಾಗಿ ರಚನೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ಯುವ ಸಬಲೀಕರಣ ಇತರೆ ವಲಯಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 500 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next