Advertisement
ಅವಳಿ ಮಕ್ಕಳಲ್ಲಿ ತದ್ರೂಪ (Monozygotic) ಅವಳಿಗಳು ಹಾಗೂ ಭಿನ್ನ ಅವಳಿ (Dizygotic)ಗಳೆಂದು ಎರಡು ವಿಧಗಳಿವೆ. ಭ್ರೂಣರಚನೆಯಾಗಿ ಮೊದಲ ವಾರದ ಬೆಳವಣಿಗೆಯ ನಂತರ ಅದು ಎರಡು ಭ್ರೂಣವಾಗಿ ಇಬ್ಭಾಗವಾದಾಗ ತದ್ರೂಪು ಅವಳಿಗಳು ಜನಿಸುತ್ತಾರೆ. ಎರಡು ಪ್ರತ್ಯೇಕ ಭ್ರೂಣ ರಚನೆಯಾದಾಗ ಭಿನ್ನ ರೂಪಿನ ಅವಳಿ ಮಕ್ಕಳು ಜನಿಸುತ್ತಾರೆ.
Related Articles
Advertisement
ದ್ವಿತೀಯ ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ನಿಝುಹತುನ್ನೀಶಾ ಮತ್ತು ನಿಯಾಝುನ್ನೀಶಾ ನಾವೂರಿನವರು. ಆಹಾರ ಶೈಲಿ ಹಾಗೂ ಅಭಿರುಚಿಗಳಲ್ಲಿ ಸಾಮ್ಯ ಮಾತ್ರವಲ್ಲ , ಇಬ್ಬರೂ ತಮ್ಮ ಅಂಗೈಗೂ, ಬೇರೆಯವರ ಅಂಗೈಗೂ ಮೆಹಂದಿ ಹಚ್ಚುವುದರಲ್ಲಿ ಭಾರೀ ಹುಶಾರು. ಒಂದೇ ರೀತಿಯ ಉಡುಗೆ-ತೊಡುಗೆಗಳೆಂದರೆ ಬಲು ಇಷ್ಟ . ವೈಮಾನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಕನಸುಕಂಗಳಲ್ಲಿ ಇಬ್ಬರೂ ಓದಿನತ್ತ ಶ್ರಮ ಹಾಕಿದ್ದಾರೆ.
ಅನಿತ್ – ಅಂಕಿತ್ ಬೇಲೂರಿನವರು. ಪ್ರಥಮ ವಿಜ್ಞಾನ ತರಗತಿಯಲ್ಲಿ ಓದುತ್ತಿದ್ದಾರೆ. ಆಹಾರ ಶೈಲಿ ಹಾಗೂ ಅಭಿರುಚಿಗಳಲ್ಲಿ ಬಹಳ ಭಿನ್ನತೆ. ಅನಿತ್‌ಗೆ ದಿನಪತ್ರಿಕೆ ಓದುವುದು ಹವ್ಯಾಸವಾದರೆ, ಅಂಕಿತ್‌ಗೆ ಕಥೆಪುಸ್ತಕ ಓದುವುದು ಹಾಗೂ ಕ್ರಿಕೆಟ್ ಆಡುವುದರಲ್ಲಿ ಆಸಕ್ತಿ. ಒಬ್ಬರು ಕೆಂಪು ಬಣ್ಣದ ಉಡುಪು ಧರಿಸಿದರೆ, ಮತ್ತೂಬ್ಬರು ಜಪ್ಪಯ್ಯ ಅಂದರೂ ಆ ಬಣ್ಣದ ಉಡುಪು ಧರಿಸುವುದಿಲ್ಲ. ಅನಿತ್‌ಗೆ ಇಂಜಿನಿಯರ್ ಆಗಬೇಕೆಂಬ ಆಸೆ ಇದೆ. ಅಂಕಿತ್‌ಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಹಂಬಲ. ಮುಂದೆ ಬರುವ ಪರೀಕ್ಷೆಗಳನ್ನು ಉತ್ತರಿಸಲು ಶ್ರದ್ಧೆಯಿಂದ ಓದುತ್ತಿದ್ದಾರೆ. ಅಂದ ಹಾಗೆ ಇಬ್ಬರೂ ತದ್ರೂಪು ಅವಳಿಗಳು.
ಪ್ರಥಮ ವಿಜ್ಞಾನ ತರಗತಿಯಲ್ಲಿ ಓದುತ್ತಿರುವ ಸಹನಾ ಕೆ. ಆರ್.- ಸಾಧನಾ ಕೆ. ಆರ್. ಕುಶಾಲನಗರದವರು. “ಅವಳಿಗಿಷ್ಟವಾದ ಆಹಾರ ಇವಳಿಗಿಷ್ಟ. ಅವಳಿಗಿಷ್ಟವಾದ ಚೂಡಿದಾರ ಇವಳಿಗಿಷ್ಟ’ ಎಂಬಂತೆ ಇಬ್ಬರೂ ಆಪ್ತರಾಗಿಯೇ ಓಡಾಡುತ್ತಾರೆ. ಇಬ್ಬರೂ ಸೇರಿ ಕಾರ್ಯಕ್ರಮ ನಿರೂಪಣೆ ಮಾಡಿದರೆ ಕೇಳಲು ಚಂದಚಂದ. ನೃತ್ಯವೂ ಅವರ ಹವ್ಯಾಸ. ಸಹನಾ ಮುಂದೆ ಅರಣ್ಯಾಧಿಕಾರಿ ಆಗಲು ಬಯಸಿದರೆ, ಸಾಧನಾಗೆ ಪಶುವೈದ್ಯೆಯಾಗುವ ಆಸೆ.
ಸಂಜನಾ ಡೋಂಗ್ರೆ- ಚಂದನಾ ಡೋಂಗ್ರೆ ಪ್ರಥಮ ವಿಜ್ಞಾನ ತರಗತಿಯಲ್ಲಿ ಕಲಿಯುತ್ತಿರುವರು. ಉಜಿರೆ ಸಮೀಪದ ಲಾಯಿಲ ಗ್ರಾಮದವರು. ಸಂಜನಾಳಿಗೆ ಹಾಡು ಹೇಳುವುದು, ನೃತ್ಯ, ಈಜು ಹಾಗೂ ಯೋಗವು ಹವ್ಯಾಸವಾದರೆ, ಚಂದನಾಳಿಗೆ ಚಿತ್ರಕಲೆ, ಸ್ಟ್ಯಾಂಪ್ ಹಾಗೂ ನಾಣ್ಯ ಸಂಗ್ರಹ, ಹಾಡುಗಾರಿಕೆ, ಈಜು ಹಾಗೂ ನೃತ್ಯಗಳು ಇಷ್ಟದ ಹವ್ಯಾಸಗಳಾಗಿವೆ. ಸಂಜನಾ ಡಯಟಿಷಿಯನ್ ಅಥವಾ ಹೋಮಿಯೋಪತಿ ಕ್ಷೇತ್ರದಲ್ಲೂ , ಚಂದನಾ ಆರ್ಕಿಟೆಕ್ಟ್ ಇಂಜಿನಿಯರಿಂಗ್ ಅಥವಾ ಕಂಪ್ಯೂಟರ್‌ಸೈನ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದಾರೆ.
ಉಜ್ವಲ್- ಪ್ರಜ್ವಲ್ ಪ್ರಥಮ ವಾಣಿಜ್ಯಶಾಸ್ತ್ರ ತರಗತಿಯ ವಿದ್ಯಾರ್ಥಿಗಳು. ಹತ್ತಿರದ ಮುಂಡಾಜೆಯವರು. ಪತ್ರಿಕೆ ಓದುವುದರಲ್ಲಿ ಇಬ್ಬರೂ ನಿಪುಣರು. ಹಾಗಂತ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿಕೊಂಡು ಓಡಾಡುವುದು ಇಷ್ಟವಾಗುವುದಿಲ್ಲ. ಮುಂದಿನ ಗುರಿ ಏನು ಕೇಳಿದರೆ ಇನ್ನೂ ಸ್ಪಷ್ಟವಾಗಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಓದುವುದೇ ಅವರ ಶ್ರದ್ಧೆ.
ಪ್ರಸನ್ನಕುಮಾರ್ ಐತಾಳ್