Advertisement
ರಾಜನು ಮಕ್ಕಳನ್ನು ಮುದ್ದಾಗಿ ಸಲಹಿದ. ವಿದ್ಯೆಗಳನ್ನು ಕಲಿಸಿದ. ಸುಂದರಿಯರಾಗಿದ್ದ ಅವರಿಗೆ ಮದುವೆ ಮಾಡಬೇಕೆಂದು ನಿರ್ಧರಿಸಿದಾಗ ಅವರು, “”ಅಪ್ಪಾ$, ನಮಗೆ ಮದುವೆ ಬೇಡ. ಅದಕ್ಕಾಗಿ ಪ್ರಯತ್ನಿಸಬೇಡಿ” ಎಂದು ಸ್ಪಷ್ಟವಾಗಿ ಹೇಳಿದರು. ಈ ನಿರ್ಧಾರಕ್ಕೆ ಕಾರಣವೇನೆಂಬುದು ರಾಜನಿಗೆ ತಿಳಿಯಲಿಲ್ಲ. ಅವನು ಇನ್ನೊಂದು ಕುತೂಹಲದ ವಿಷಯವನ್ನೂ ಗಮನಿಸಿದ. ರಾತ್ರೆ ಕುಮಾರಿಯರು ತಮ್ಮ ಕೋಣೆಯಲ್ಲಿ ಮಲಗಿದ ಬಳಿಕ ಕೋಣೆಯೊಳಗೆ ತುಂಬ ಮಂದಿ ಗೆಜ್ಜೆ ಕಟ್ಟಿ ನೃತ್ಯ ಮಾಡಿದ ಸದ್ದು ಕೇಳಿ ಬರುತ್ತ ಇತ್ತು. ಇದರ ಬಗೆಗೆ ಕೇಳಿದರೆ ತಮಗೇನೂ ತಿಳಿದಿಲ್ಲವೆಂದೇ ಹೇಳಿದರು.
Related Articles
Advertisement
ಒಂದು ಹಳ್ಳಿಯಲ್ಲಿ ಒಬ್ಬ ಸೈನಿಕನಿದ್ದ. ಅವನಿಗೆ ಈ ವಿಷಯ ಗೊತ್ತಾಯಿತು. ತಾನೂ ಯಾಕೆ ಬುದ್ಧಿ ಖರ್ಚು ಮಾಡಬಾರದು ಎಂದು ಅವನಿಗೆ ಯೋಚನೆ ಬಂದಿತು. ಒಂದು ಬುತ್ತಿ ಕಟ್ಟಿಕೊಂಡು ರಾಜಧಾನಿಯೆಡೆಗೆ ಹೊರಟ. ನಗರವನ್ನು ತಲುಪುವಾಗ ಒಬ್ಬಳು ಮುದುಕಿ ಒಂದು ಹೊರೆ ಕಟ್ಟಿಗೆ ಕಟ್ಟಿ ತಲೆಯ ಮೇಲೆ ಏರಿಸಲಾಗದೆ ಕಷ್ಟಪಡುವುದನ್ನು ಕಂಡು, “”ಅಜ್ಜಿ, ಇದನ್ನು ನಿನ್ನ ಮನೆಯ ತನಕ ಹೊತ್ತು ತಂದು ಹಾಕುತ್ತೇನೆ, ನೀನು ನನಗೆ ದಾರಿ ತೋರಿಸಿದರೆ ಸಾಕು” ಎಂದು ಹೇಳಿ ಹೊರೆಯನ್ನು ಹೊತ್ತುಕೊಂಡು ಮುಂದೆ ಸಾಗಿದ.
ದಾರಿಯಲ್ಲಿ ಸೈನಿಕನೊಂದಿಗೆ ಅಜ್ಜಿ, ತನಗೆ ಯಾರೂ ದಿಕ್ಕಿಲ್ಲ. ದಾರಿಹೋಕರಿಗೆ ಅಡುಗೆ ಮಾಡಿ ಹಾಕಿ ದಿನಯಾಪನೆ ಮಾಡುತ್ತಿರುವುದಾಗಿ ಹೇಳಿದಳು. ಸೈನಿಕ ಅವಳ ಮನೆಗೆ ಬಂದು ಊಟ ಮಾಡಿದ. ತನ್ನಲ್ಲಿರುವ ಒಂದು ಚಿನ್ನದ ನಾಣ್ಯವನ್ನು ತೆಗೆದು ಅವಳಿಗೆ ಕೊಟ್ಟ. ಅಜ್ಜಿಗೆ ಖುಷಿಯಾಯಿತು. ಈ ಖುಷಿಯನ್ನು ಕಂಡು ಅವನು, “”ಅಜ್ಜಿ, ಈ ನಗರದಲ್ಲಿರುವ ರಾಜಕುಮಾರಿಯರು ಮಲಗುವ ಕೋಣೆಯಿಂದ ರಾತ್ರೆ ನೃತ್ಯ ಮಾಡಿದಂತೆ ಕೇಳಿಸುತ್ತದೆಯಂತಲ್ಲ? ನಾನು ಈ ಗುಟ್ಟನ್ನು ಕಂಡುಹಿಡಿದು ಅವರನ್ನು ಮದುವೆಯಾಗಬೇಕು ಅಂತ ಇದ್ದೇನೆ” ಎಂದು ಹೇಳಿದ.
ಅದಕ್ಕೆ ಅಜ್ಜಿ, “”ಇದನ್ನು ಕಂಡು ಹಿಡಿಯುವುದಕ್ಕೆ ಅಂತ ಬಂದವರಿಗೆ ಲೆಕ್ಕವಿಲ್ಲ. ಆದರೆ ಅವರೆಲ್ಲರೂ ರಾಜಕುಮಾರಿಯರ ಚಂದಕ್ಕೆ ಮರುಳಾಗಿ ಅವರು ಪ್ರೀತಿಯಿಂದ ಕೊಡುವ ದ್ರಾûಾರಸವನ್ನು ಕುಡಿದು ಮೈಮರೆತು ನಿದ್ರಿಸುತ್ತಾರೆ. ಈ ಗುಟ್ಟು ಗೊತ್ತಾಗಬೇಕಿದ್ದರೆ ಅವರು ಏನು ಕೊಟ್ಟರೂ ಕುಡಿಯಬಾರದು. ಇನ್ನು ನನ್ನ ಬಳಿ ಒಂದು ಹಳೆಯ ಗಡಿಯಾರವಿದೆ. ಇದನ್ನು ಕೊರಳಿಗೆ ಕಟ್ಟಿಕೊಂಡರೆ ಯಾರ ಕಣ್ಣಿಗೂ ಅವರು ಗೋಚರಿಸುವುದಿಲ್ಲ. ಇದರ ಸಹಾಯದಿಂದ ಅವರ ಗುಟ್ಟು ಬಯಲು ಮಾಡಬಹುದು. ನೀನು ಈ ಕೆಲಸ ಮಾಡುವುದಾದರೆ ಗಡಿಯಾರವನ್ನು ನಿನಗೇ ಕೊಟ್ಟುಬಿಡುತ್ತೇನೆ” ಎಂದು ಹೇಳಿದಳು.
ಸೈನಿಕ ಅವಳ ಕೈಯಿಂದ ಗಡಿಯಾರವನ್ನು ತೆಗೆದುಕೊಂಡ. ನೆಟ್ಟಗೆ ರಾಜನ ಬಳಿಗೆ ಹೋಗಿ ತಾನು ರಾಜಕುಮಾರಿಯರ ರಹಸ್ಯ ಬಿಡಿಸಲು ಬಂದಿರುವುದಾಗಿ ಹೇಳಿದ. ರಾಜನು ಸಂತೋಷದಿಂದ ತನ್ನ ಪುತ್ರಿಯರು ಮಲಗುವ ಕೋಣೆಯ ಬಳಿ ಅವನಿಗೆ ಮಲಗಲು ಹಾಸಿಗೆ ಹಾಕಿಸಿದ.
ರಾಜಕುಮಾರಿಯರು ಸೈನಿಕನ ಬಳಿಗೆ ಪ್ರೀತಿಯನ್ನು ನಟಿಸುತ್ತ ಬಂದರು. ಕುಡಿಯಲು ದ್ರಾûಾರಸವನ್ನು ಕೊಟ್ಟರು. ಅದನ್ನು ಅವನು ಕುಡಿದ ಹಾಗೆ ನಟಿಸಿ ದೂರ ಚೆಲ್ಲಿ ಬಂದು ಮಲಗಿ ಗಾಢ ನಿದ್ರೆ ಬಂದವರಂತೆ ಗೊರಕೆ ಹೊಡೆಯತೊಡಗಿದ. ಮಧ್ಯರಾತ್ರೆ ಒಳಗಿನ ಕೋಣೆಯಿಂದ ಗೆಜ್ಜೆ ಕಟ್ಟಿ ನೃತ್ಯ ಮಾಡುವ ದನಿ ಕೇಳಿಸಿತು. ಅವನು ಮೆಲ್ಲಗೆ ಎದ್ದ. ತನ್ನ ಗಡಿಯಾರವನ್ನು ಹಿಡಿದುಕೊಂಡ. ರಾಜಕುಮಾರಿಯರ ಕೋಣೆಯೊಳಗೆ ಹೋದ. ಅವರು ಅವನನ್ನು ಗಮನಿಸಲಿಲ್ಲ. ಅವರೆಲ್ಲರೂ ಅಲಂಕೃತರಾಗಿ ಗೆಜ್ಜೆ ಕಟ್ಟಿಕೊಂಡು ಒಂದು ನೆಲಮಾಳಿಗೆಯೊಳಗೆ ಇಳಿಯುವುದು ಕಾಣಿಸಿತು. ಅವನು ಅವರನ್ನು ಹಿಂಬಾಲಿಸಿದ. ಕೆಳಗೆ ಒಂದು ಅದ್ಭುತವಾದ ಲೋಕ ಇತ್ತು. ಅಲ್ಲಿರುವ ಮರಗಳ ಕೊಂಬೆಗಳಲ್ಲಿ ಬಂಗಾರದ ನಾಣ್ಯಗಳು, ರತ್ನಗಳು, ವಜ್ರಗಳು ಕಾಯಿಗಳಂತೆ ತೂಗಾಡುತ್ತಿದ್ದವು. ಆಗ ಹನ್ನೆರಡು ಮಂದಿ ರಾಜಕುಮಾರರು ಪ್ರತ್ಯಕ್ಷರಾಗಿ ಜೊತೆಗೂಡಿ ನೃತ್ಯ ಮಾಡತೊಡಗಿದರು.
ಇದನ್ನು ನೋಡುತ್ತಿದ್ದ ಸೈನಿಕನು ಒಂದು ಮರದ ಕೊಂಬೆಯನ್ನು ಮುರಿದ. ತಕ್ಷಣವೇ ನೃತ್ಯ ಮಾಡುತಿದ್ದ ಒಬ್ಬ ರಾಜಕುಮಾರನು ಕೆಳಗೆ ಬಿದ್ದು ಸತ್ತುಹೋದ. ಅವನ ಜೊತೆ ನರ್ತಿಸುತ್ತಿದ್ದ ರಾಜಕುಮಾರಿ ಅಳತೊಡಗಿದಳು. ಸೈನಿಕನು ಮರಳಿ ಅರಮನೆಗೆ ಬಂದ. ರಾಜಕುಮಾರಿಯರೂ ಬಂದು ಮಲಗಿಕೊಂಡರು. ಸೈನಿಕನು ಬೆಳಗಾದ ಮೇಲೆ ರಾಜನ ಮುಂದೆ ಅವನ ಕುಮಾರಿಯರನ್ನು ಕರೆಸಿ ಅವರು ನೃತ್ಯ ಮಾಡುತ್ತಿದ್ದ ಸ್ಥಳ, ರಾಜಕುಮಾರರು, ವಜ್ರಗಳ ಮರ ಎಲ್ಲದರ ಬಗೆಗೂ ವಿವರಿಸಿ ತಾನು ತಂದಿದ್ದ ಕೊಂಬೆಯನ್ನು ತೋರಿಸಿದ.
ರಾಜಕುಮಾರಿಯರು, “”ಹೌದು, ನಾವು ಶಾಪಗ್ರಸ್ಥರಾಗಿದ್ದ ಯಕ್ಷಿಣಿಯರು. ದಿನವೂ ರಾತ್ರೆ ನಮ್ಮಂತೆಯೇ ಶಾಪ ಪಡೆದಿದ್ದ ಜೊತೆಗಾರರೊಂದಿಗೆ ನರ್ತಿಸುತ್ತಿದ್ದೆವು. ನಮ್ಮ ಜೊತೆಗಾರರ ಜೀವ ಅಲ್ಲಿರುವ ಮರದ ಕೊಂಬೆಗಳಲ್ಲಿತ್ತು. ಅದರಲ್ಲಿ ಒಂದು ಕೊಂಬೆಯನ್ನು ಇವನು ಮುರಿದ ಕಾರಣ ಅವರಲ್ಲಿ ಒಬ್ಬನು ಸತ್ತುಹೋದ. ನಾವು ಹನ್ನೊಂದು ಮಂದಿ ನಮ್ಮ ರಹಸ್ಯ ಬಯಲಾದ ಕಾರಣ ಶಾಪ ವಿಮುಕ್ತರಾಗಿ ಸಂಗಾತಿಯೊಡನೆ ಮೇಲಿನ ಲೋಕಕ್ಕೆ ಹೋಗುತ್ತೇವೆ. ಜೊತೆಗಾರನಿಲ್ಲದ ಹನ್ನೆರಡನೆಯವಳು ಈ ಸೈನಿಕನ ಹೆಂಡತಿಯಾಗುತ್ತಾಳೆ” ಎಂದು ಹೇಳಿದರು. ಸೈನಿಕನು ಅವಳ ಕೈ ಹಿಡಿದ. ಮುಂದೆ ಆ ರಾಜ್ಯದ ಅರಸನಾದ.
– ಪ. ರಾಮಕೃಷ್ಣ ಶಾಸ್ತ್ರಿ