ಚೆನ್ನೈ: ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರತಿಷ್ಠಿತ ತಯಾರಕ ಟಿವಿಎಸ್ ಮೋಟಾರ್ ಕಂಪನಿಯು ಇಂದು ನಡೆದ ತನ್ನ ಆಡಳಿತ ಮಂಡಳಿಯ ಸಭೆಯಲ್ಲಿ ಸುದರ್ಶನ್ ವೇಣು ಅವರನ್ನು ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ (ಎಂ.ಡಿ) ನೇಮಕ ಮಾಡಿದೆ.
ಸುದರ್ಶನ್ ಅವರು ಟಿವಿಎಸ್ ಅನ್ನು, ಭಾರತದ ಮುಂಚೂಣಿಯಲ್ಲಿರುವ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾಗಿ, ಹೆಚ್ಚು ಪ್ರಶಸ್ತಿ ಪಡೆದ ದ್ವಿಚಕ್ರ ವಾಹನ ಕಂಪನಿಯನ್ನಾಗಿ ರೂಪಿಸಿದ್ದಾರೆ. ಅವರು ಭಾರತದಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮಾತ್ರವಲ್ಲದೇ ಏಷ್ಯಾ, ಆಫ್ರಿಕಾ ಯೂರೋಪಿನಲ್ಲೂ ಕಂಪೆನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ಪ್ರೊ.ಸರ್ ರಾಲ್ಫ್ ಡೈಟರ್ ಸ್ಪೆತ್, ಮಾತನಾಡಿ, ಸುದರ್ಶನ್ ಅವರು ಸುಧಾರಿತ ತಂತ್ರಜ್ಞಾನಗಳು ಮತ್ತು ಸುಸ್ಥಿರ ಬೆಳವಣಿಗೆಯ ಬಗ್ಗೆ ಅಪಾರವಾದ ಉತ್ಸಾಹವನ್ನು ಹೊಂದಿದ್ದಾರೆ. ಅವರು ಟಿವಿಎಸ್ ಮೋಟಾರ್‌ನ ಅಂತರರಾಷ್ಟ್ರೀಯ ಬೆಳವಣಿಗೆಯನ್ನು ಮುನ್ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪೆನಿಯನ್ನು ಉತ್ತಮವಾಗಿ ಮುನ್ನಡೆಸುವ ಸಾಮರ್ಥ್ಯ ಅವರಲ್ಲಿದೆ ಅವರ ನಾಯಕತ್ವದೊಂದಿಗೆ, ಕಂಪನಿಯು ಬಲವಾಗಿ ಬೆಳೆಯುತ್ತದೆ ಎಂದು ನನಗೆ ಖಾತ್ರಿಯಿದೆ ಎಂದರು.
ಟಿವಿಎಸ್ ಮೋಟಾರ್ ಕಂಪನಿಯ ವಿಶ್ರಾಂತ ಅಧ್ಯಕ್ಷ ವೇಣು ಶ್ರೀನಿವಾಸನ್ ಮಾತನಾಡಿ, ಸುದರ್ಶನ್ ಅವರು ಕೆಲವು ಪ್ರಮುಖ ಸ್ವಾಧೀನಗಳು ಮತ್ತು ಸಮೂಹ ಕಂಪನಿಗಳ ವಿಸ್ತರಣೆಗೆ ನೇತೃತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ಟಿವಿಎಸ್ ಮೋಟಾರ್ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮೊಬಿಲಿಟಿ ಪ್ಲೇಯರ್ ಆಗಿ ಬದಲಾಗಲಿದೆ ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ : 532 ಕೋಟಿ ರೂ.ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ
ಟಿವಿಎಸ್ ಮೋಟಾರ್ ಕಂಪನಿಯ ನೂತನ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಪ್ರತಿಕ್ರಿಯಿಸಿ ಈ ವಿಶೇಷ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ನನ್ನ ತಂದೆ ವೇಣು ಶ್ರೀನಿವಾಸನ್ ಮತ್ತು ಸರ್ ರಾಲ್ಫ್ ಅವರ ನಿರಂತರ ಮಾರ್ಗದರ್ಶನ ಮತ್ತು ಮಂಡಳಿ ಮತ್ತು ತಂಡದ ಬೆಂಬಲದೊಂದಿಗೆ, ಕಂಪೆನಿಯನ್ನು ಮತ್ತಷ್ಟು ಮುಂಚೂಣಿಗೆ ತರಲು ಶ್ರಮಿಸುತ್ತೇನೆ ಎಂದರು.