ಒಂದು ಕಾಲವಿತ್ತು. ಯಾವುದೇ ಸಿನಿಮಾ ಮಾಡಿದರೂ, ಆ ಚಿತ್ರ ಟಿವಿಗೆ ಮಾರಾಟವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮವಾಗಿ ಗಮನಿಸುತ್ತ ಬಂದರೆ, ಬಹುತೇಕ ತೆರೆಕಂಡ ಚಿತ್ರಗಳಿಗೆ ಟಿವಿ ರೈಟ್ಸ್ ಸಿಕ್ಕೇ ಇಲ್ಲ. ಈ ಆರು ವರ್ಷದಲ್ಲಿ ಸ್ಯಾಟಲೆಟ್ ಇರದಿದ್ದರೂ, ಸಿನಿಮಾಗಳ ಸಂಖ್ಯೆ ಮಾತ್ರ ನಿಂತಿಲ್ಲ. ಇಲ್ಲಿ ಟಿವಿ ರೈಟ್ಸ್ ಇಲ್ಲ ಅಂತ ಹೇಳುತ್ತಿಲ್ಲ. ಇದ್ದರೂ ಅದು ಬೆರಳೆಣಿಕೆ ನಟರಿಗೆ ಮಾತ್ರ ಎಂಬಂತಾಗಿದೆ. ಟಿವಿ ರೈಟ್ಸ್ ಖರೀದಿಸುವ ಮಂದಿ, ಎರಡು ಕೆಟಗರಿಯಲ್ಲಿ ಮಾತ್ರ ಸಿನಿಮಾ ಹಕ್ಕು ಖರೀದಿಸುತ್ತಿದ್ದಾರೆ. ಒಂದು ಸ್ಟಾರ್, ಇನ್ನೊಂದು ಸ್ಟಾರ್ ವ್ಯಾಲ್ಯು ಇರುವ ತಂತ್ರಜ್ಞರು ಮತ್ತು ಕಥೆ. ಮುಂಚೂಣಿ ಸ್ಟಾರ್ ನಟರ ಚಿತ್ರಗಳು ಟಿವಿ ರೈಟ್ಸ್ ಹೋಗುತ್ತವೆ. ಆದರೆ, ಬಿ ಮತ್ತು ಸಿ ಕೆಟಗರಿಯ ಕೆಲ ಹೀರೋಗಳ ಚಿತ್ರಗಳಲ್ಲಿ ಕಥೆ, ತಂತ್ರಜ್ಞರು ಮತ್ತು ಸಿನಿಮಾ ಮೇಕಿಂಗ್ ಗಮನಿಸಿ ಇಂತಿಷ್ಟು ಹಣ ಕೊಡ್ತೀವಿ ಅಂತ ಹಕ್ಕು ಖರೀದಿಸಲಾಗುತ್ತಿದೆ. ಉಳಿದಂತೆ ಬರುವ ಕೆಲ ಹಳೆಯ ಮತ್ತು ಹೊಸ ನಟರ ಚಿತ್ರಗಳಿಗೆ ಟಿವಿ ರೈಟ್ಸ್ ಇಲ್ಲ.
Advertisement
ಇದರಿಂದ ಚಿತ್ರರಂಗದಲ್ಲಿ ಏನೋ ಸಾಧನೆ ಮಾಡಬೇಕು ಅಂತ ಬಂದು, ಹೆಸರಿಗೊಂದು ಸಿನಿಮಾ ಮಾಡಿದವರ ಪಾಡಂತೂ ಹೇಳುವಂತಿಲ್ಲ. ಆರಂಭದಲ್ಲಿ ಇಷ್ಟು ಲಕ್ಷಕ್ಕೆ ಸಿನಿಮಾ ಮಾಡಬಹುದು ಅಂತ ಅಂದಾಜಿಸಿ ಬಂದವರಿಗೆ, ಮುಗಿಯುವ ಹೊತ್ತಿಗೆ ಅದು ಕೋಟಿ ತಲುಪಿರುತ್ತೆ. ಅಂತಹವರಿಗೆ ಚಿತ್ರಮಂದಿರದಲ್ಲಿ ಪ್ರೇಕ್ಷಕನ ಮೆಚ್ಚುಗೆ ಇರಲ್ಲ. ಟಿವಿ ರೈಟ್ಸ್ ಹೋಗುತ್ತೆ ಅಂದರೆ, ಹೊಸಬರೆಂಬ ಕಾರಣಕ್ಕೆ ಅದೂ ಸಿಗಲ್ಲ. ಅಂತಹವರಿಗೆ ಒಂದು ವರ್ಗ ಇಲ್ಲಿ ಮಧ್ಯ ವರ್ತಿ ಯಂತೆ ಕೆಲಸ ಮಾಡುತ್ತಿದೆ. ಪರವಾಗಿಲ್ಲ ಅನ್ನುವ ಒಂದಷ್ಟು ಚಿತ್ರಗಳನ್ನು ಗುಡ್ಡೆ ಹಾಕಿ, ತಲಾ ಮೂರು, ಐದು ಲಕ್ಷ ಕೊಡುವುದಾಗಿ ಹೇಳಿ, ಒಂದು ರೇಂಜ್‌ಗೆ ಸ್ಯಾಟಲೆಟ್ ಫಿಕ್ಸ್ ಮಾಡಿಕೊಳ್ಳುವ ವರ್ಗವೂ ಇದೆ. ಕೆಲ ನಿರ್ಮಾಪಕ ಹೋದಷ್ಟಕ್ಕೆ ಹೋಗಲಿ ಅನ್ನುವ ಕಾರಣಕ್ಕೆ ಬಂದಷ್ಟು ಕಿಸೆಗೆ ಹಾಕಿಕೊಂಡು ತಾನು ಕಷ್ಟಪಟ್ಟು ಮಾಡಿದ ಸಿನಿಮಾವನ್ನು ಮಾರಿಬಿಡುತ್ತಾನೆ. ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದವನಿಗೆ ಇದು ಯಾವ ಲೆಕ್ಕವೂ ಅಲ್ಲ. ಆದರೂ, ಕೊನೇ ಘಳಿಗೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ನಿರ್ಮಾಪಕನಿಗೆ ಸಿಕ್ಕಷ್ಟೇ ಸೀರುಂಡೆ. ಇಲ್ಲಿ
Related Articles
Advertisement
ಟಿವಿ ರೈಟ್ಸ್ ಎಂಬ ಬೋನಸ್: ಹಿಂದೆಲ್ಲಾ ಕೆಲ ಚಿತ್ರಗಳ ಮುಹೂರ್ತ ಆಗುತ್ತಿದ್ದಂತೆಯೇ, ಕೆಲ ವಾಹಿನಿಗಳು ಮುಂಗಡ ಹಣ ಕೊಟ್ಟು, ಆ ಚಿತ್ರದ ಹಕ್ಕು ಫಿಕ್ಸ್ ಮಾಡುತ್ತಿದ್ದವು. ಅದು ಯಾವಾಗ ಹೆಚ್ಚಾಗುತ್ತಾ ಬಂತೋ, ಕೆಲವರಂತೂ, ಟಿವಿ ರೈಟ್ಸ್‌ಗಾಗಿಯೇ ಚಿತ್ರ ಮಾಡಲು ಸಾಲುಗಟ್ಟಿದರು. ಒಂದು ವಾಹಿನಿಯಿಂದ ಟಿವಿ ರೈಟ್ಸ್ ಸುಮಾರು 80 ಲಕ್ಷ ಸಿಗುತ್ತೆ ಅಂದರೆ, 50, 60 ಲಕ್ಷಕ್ಕೇ ಚಿತ್ರೀಕರಣ ಮಾಡುತ್ತಿದ್ದ ಕಾಲವೂ ಇತ್ತು. ಅಂತಹ ಚಿತ್ರಗಳೂ ಬಂದವು. ಆದರೆ, ಅದು ಹೆಚ್ಚಾಗುತ್ತಿದ್ದಂತೆಯೇ ಕೆಲವರು ವಾಹಿನಿಗಳನ್ನು ದುರುಪಯೋಗಪಡಿಸಿಕೊಂಡಿದ್ದೂ ಉಂಟು. ವಾಹಿನಿಗಳಿಂದ ಮುಂಗಡ ಹಣ ಪಡೆದ ಎಷ್ಟೋ ಚಿತ್ರಗಳು ಮುಹೂರ್ತ ಹೊರತುಪಡಿಸಿದರೆ, ಚಿತ್ರೀಕರಣವಾಗದೆ ಉಳಿದ ಉದಾಹರಣೆಗಳಿವೆ. ಟಿವಿ ರೈಟ್ಸ್ ನಂಬಿ ಸಿನಿಮಾ ಮಾಡುವ ಕಾಲ ಯಾವತ್ತೋ ಮುಗಿದು ಹೋಗಿದೆ. ಅದೇನಿದ್ದರೂ, ಒಂದು ರೀತಿಯ “ಬೋನಸ್’ ಇದ್ದಂತೆ. ಪ್ಯಾಷನ್ ಇದ್ದವರು ಟಿವಿ ರೈಟ್ಸ್ ಬಗ್ಗೆ ತಲೆಕೆಡಿಸಿಕೊಳ್ಳದೆ ಚಿತ್ರ ಮಾಡುತ್ತಿದ್ದಾರೆ. ಒಂದಂತೂ ನಿಜ, ಇಲ್ಲಿ ಗುಣಮಟ್ಟಕ್ಕೆ ಮತ್ತು ಸ್ಟಾರ್‌ಗಷ್ಟೇ ವ್ಯಾಲ್ಯು. ಎಷ್ಟೇ ಒಳ್ಳೇ ಚಿತ್ರ ಎನಿಸಿಕೊಂಡರೂ, ಹೊಸಬರೆಷ್ಟೇ ಸುದ್ದಿ ಮಾಡಿದರೂ ಪ್ರಯೋಜನ ಇಲ್ಲ. ಇದಷ್ಟೇ ಅಲ್ಲ, ರಾಜ್ಯ, ರಾಷ್ಟ್ರಪ್ರಶಸ್ತಿ ಪಡೆದ ಅದೆಷ್ಟೋ ಚಿತ್ರಗಳು ಕೂಡ ಟಿವಿ ರೈಟ್ಸ್ ಹೋಗಿಲ್ಲ ಎಂಬುದೂ ನೆನಪಿರಲಿ. ಹೊಸಬರ ಚಿತ್ರಗಳ ಟಿವಿ ರೈಟ್ಸ್‌ಗೆ ಮಾನದಂಡವೆಂದರೆ, ಅದು ಭರ್ಜರಿ ಸುದ್ದಿಯಾಗಬೇಕು, ಚಿತ್ರಮಂದಿರದಲ್ಲೂ ಪ್ರೇಕ್ಷಕರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಪಡೆಯಬೇಕು, ತಾಂತ್ರಿಕತೆ, ಗುಣಮಟ್ಟದಲ್ಲೂ ಸೈ ಎನಿಸಿಕೊಂಡಿದ್ದರೆ ಮಾತ್ರ ಅದಕ್ಕೊಂದಷ್ಟು ಬೆಲೆ ಮತ್ತು ನೆಲೆ.
ವಿಜಯ್ ಭರಮಸಾಗರ