ಮುಂಬೈ:ಇಂತಹ ಪರಿಸ್ಥಿತಿಯನ್ನು ಯಾವತ್ತೂ ಎದುರಿಸಿಲ್ಲ. ನಮಗೆ ಸಂಬಳವೂ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕಾರು ಮಾರಾಟ ಮಾಡುವುದು ಅನಿವಾರ್ಯವಾಗಿದೆ…ಇದು ಟಿವಿ ಧಾರಾವಾಹಿ ನಟ ಮಾನಸ್ ಶಾ ನುಡಿ.
“ಹಮಾರಿ ಬಹು ಸಿಲ್ಕ್” ಧಾರಾವಾಹಿ ಶೋನ ಸಂಬಳ ಇನ್ನೂ ಕೊಟ್ಟಿಲ್ಲ. ನಾನು ನನ್ನ ಜೀವನದಲ್ಲಿ ಇಂತಹ ಸವಾಲಿನ ಪರಿಸ್ಥಿತಿಯನ್ನು ಎದುರಿಸಿಲ್ಲ. ಇದೀಗ ದೊಡ್ಡ ಮಟ್ಟದ ಆರ್ಥಿಕ ತೊಂದರೆ ಎದುರಿಸುತ್ತಿದ್ದೇನೆ. ಬದುಕಲು ನಾನು ನನ್ನ ಕಾರನ್ನು ಮಾರಾಟ ಮಾಡಬೇಕಾಗಿದೆ. ಅಷ್ಟೇ ಅಲ್ಲ ಬಾಡಿಗೆ ಮನೆಯನ್ನೂ ಬಿಟ್ಟು ನಾನು ನನ್ನ ಸಂಬಂಧಿ ಉಳಿದುಕೊಂಡಿದ್ದ ಲೋಖಂಡವಾಲಾಗೆ ಸ್ಥಳಾಂತರಗೊಂಡಿರುವುದಾಗಿ ಶಾ ತಿಳಿಸಿದ್ದಾರೆ.
2019ರ ಮೇ ತಿಂಗಳಿನಲ್ಲಿ ಧಾರಾವಾಹಿ ಚಿತ್ರೀಕರಣ ಆರಂಭವಾಗಿತ್ತು. 2019ರ ನವೆಂಬರ್ 5ರಂದು ಕೊನೆಯ ಶೂಟಿಂಗ್ ನಡೆದಿತ್ತು. ನಮೆಗೆಲ್ಲರಿಗೂ ಪೇಮೆಂಟ್ ಸಿಕ್ಕಿದ್ದು 2019ರ ಮೇ ತಿಂಗಳಿನಲ್ಲಿ. ಸೆಪ್ಟೆಂಬರ್ ಸಂಬಳ ಸಿಕ್ಕಿದ್ದು 2019ರ ಅಕ್ಟೋಬರ್ ನಲ್ಲಿ. ಆ ಬಳಿಕ ಒಬ್ಬರೇ ಒಬ್ಬ ಕಲಾವಿದರಿಗೆ ಬಿಡಿಗಾಸು ಸಿಕ್ಕಿಲ್ಲ ಎಂದು ಮಾನಸ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾನಸ್ ಶಾ ಹಿಂದಿಯ ಹಮಾರಿ ದೇವ್ ರಾಣಿ, ಸಂಕಟ್ ಮೋಚನ್ ಮಹಾಬಲಿ ಹನುಮಾನ್ ಧಾರವಾಹಿಯಲ್ಲಿ ನಟಿಸಿದ್ದು, ಇಂತಹ ಪರಿಸ್ಥಿತಿ ಯಾವತ್ತೂ ಬಂದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಅಹಮದಾಬಾದ್ ನಲ್ಲಿರುವ ನನ್ನ ಪೋಷಕರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ಬ್ಯಾಂಕ್ ಉದ್ಯೋಗಿಯಾಗಿದ್ದ ತಂದೆ ನಿವೃತ್ತಿಯಾಗಿ ಮನೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ನಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದಾರೆ. ಇದರಿಂದಾಗಿ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಇದು ಕೇವಲ ನನಗೊಬ್ಬನಿಗೆ ಅಲ್ಲ. ಎಂಟರ್ ಟೈನ್ ಮೆಂಟ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಎಲ್ಲರೂ ಈ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿಂದಿನ ಸಂಬಳವೂ ಸಿಕ್ಕಿಲ್ಲ. ಸದ್ಯ ಕೆಲಸವೂ ಇಲ್ಲ, ಮುಂದೆ ಏನು ಎಂಬುದೇ ಗೊತ್ತಿಲ್ಲ ಎಂದು ಶಾ ಪ್ರತಿಕ್ರಿಯೆ ನೀಡಿದ್ದಾರೆ.