ತುರುವೇಕೆರೆ: ಕೋವಿಡ್ 19 ಹಿನ್ನೆಲೆಯಲ್ಲಿ ಗುರುವಾರ ದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದ್ದು ಶಿಕ್ಷಣ ಇಲಾಖೆ ಸರ್ಕಾರಗಳ ಮಾನದಂಡ ಅನ್ವಯ ಅಗತ್ಯ ಮುಂಜಾಗ್ರತೆ ಕ್ರಮದೊಂದಿಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಈ ಬಗ್ಗೆ ಪೋಷಕರಾಗಲಿ, ವಿದ್ಯಾರ್ಥಿಗಳಾಗಲಿ ಆತಂಕಗೊಳ್ಳುವ ಪ್ರಮೇಯವಿಲ್ಲ. ತಾಲೂಕಾದ್ಯಂತ 17 ಸರ್ಕಾರಿ, 27 ಅನುದಾನಿತ, 11 ಅನುದಾನ ರಹಿತ ಸೇರಿದಂತೆ ಒಟ್ಟು 55 ಪ್ರೌಢಶಾಲೆಗಳಿವೆ. ಪ್ರಸ್ತುತ 2020ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 1946 ಹೊಸ, 73 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ, 2016 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳು: ತುರುವೇಕೆರೆ ಪಟ್ಟಣದ ಜಿಜೆಸಿ ಸರಸ್ವತಿ ಪ್ರೌಢಶಾಲೆ, ಮಾಯಸಂದ್ರದ ನೆಹರು ಬಾಲಿಕ ಪ್ರೌಢಶಾಲೆ, ಸೊರವನಹಳ್ಳಿ ವೃತ್ತದ ಎಸ್.ಬಿ.ಜೆ ಪ್ರೌಢಶಾಲೆ, ದಬ್ಬೇಘಟ್ಟ ಸರ್ಕಾರಿ ಶಾಲೆ, ದಂಡಿನಶಿವರ ಕೆ.ಪಿ.ಎಸ್.ಶಾಲೆ, ಹುಲ್ಲೇಕೆರೆಯ ಬಸವೇಶ್ವರ ಪ್ರೌಢಶಾಲೆ, ಒಳಗೊಂಡಂತೆ 8 ಕೇಂದ್ರಗಳನ್ನು ನಿಗದಿಗೊಳಿಸಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿದೆ.
ಕೋವಿಡ್ 19 ಮಂಜಾಗ್ರತೆ ಹಿನ್ನೆಲೆಯಲ್ಲಿ ಪ್ರತಿ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ 1 ಮೀಟರ್ ಅಂತರ ಕಾಯ್ದುಕೊಳ್ಳಲು ಒಂದು ಡೆಸ್ಕ್ಗೆ ಇಬ್ಬರು ವಿದ್ಯಾರ್ಥಿಗಳು, ಪ್ರವೇಶ ರದಲ್ಲೇ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಅನಿರೀಕ್ಷಿತ ಕೆಮ್ಮು, ಜ್ವರ ಕಾಣಿಸಿಕೊಂಡರೆ ಅಂತಹ ವಿದ್ಯಾರ್ಥಿಗಳನ್ನು ಉಳಿದ ವಿದ್ಯಾರ್ಥಿಗಳಿಂದ ಬೇರ್ಪಡಿಸಲು ಎಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿ ಮೀಸಲಿರಿಸಿದೆ.
ಸಿಬ್ಬಂದಿ ಹಾಗೂ ಸಿದ್ಧತೆ: 8 ಮಂದಿ ಚೀಪ್ ಕಸ್ಟೋಡಿಯರ್, 8 ಮಂದಿ ಸಂಚಾರ ಕಸ್ಟೋಡಿಯನ್, ಪ್ರತಿ ಕೊಠಡಿಗೆ ಒಬ್ಬ ಇನ್ವಿಜಿಲೇಟರ್, ಸಹಾಯಕರು, ಹೆಚ್ಚುವರಿ ಸಿಬ್ಬಂದಿ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ಸಿಬ್ಬಂದಿ ಸೇರಿ ಅಗತ್ಯ ಸಿಬ್ಬಂದಿಗಳನ್ನು ಈಗಾಗಲೇ ನೇಮಿಸಿಕೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಶಿಕ್ಷಣ ಇಲಾಖೆ ಸಹ ಮಾಸ್ಕ್ ನೀಡಲಿದೆ.
ಕುಡಿಯುವ ನೀರಿನ ವ್ಯವಸ್ಥೆ ಪರೀಕ್ಷಾ ಕೇಂದ್ರದಲ್ಲಿ ಇದ್ದರೂ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸ್ವಂತ ಬಾಟಲಿಯಲ್ಲಿ ನೀರು ಹಾಗೂ ಅವರಿಗೆ ಊಟೋ ಪಚಾರದ ವ್ಯವಸ್ಥೆಯನ್ನು ಅವರ ಪೋಷಕರೇ ಪೂರೈಸಬೇಕು ಹಾಗೂ ಸಂಚಾರದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಇರಬೇಕು. ಪರೀಕ್ಷಾ ಮಂಡಳಿ ಪ್ರಮಾಣಿತ ಎಸ್.ಒ.ಪಿ ಯಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೋಲಿಸ್, ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಪಂ ಪಟ್ಟಣ ವ್ಯಾಪ್ತಿಯ ಪುರಸಭೆಗಳು ಸ್ವತ್ಛತೆ, ನೈರ್ಮಲ್ಯ ಆರೋಗ್ಯ, ರಕ್ಷಣಾ ವ್ಯವಸ್ಥೆ ಎಲ್ಲವನ್ನೂ ಸುಗಮವಾಗಿ ನೋಡಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ.