ಹುಬ್ಬಳ್ಳಿ: ಪಾಲಿಕೆ ವಾಣಿಜ್ಯ ಮಳಿಗೆಗಳ ಬಾಡಿಗೆ ಕುರಿತಾಗಿ ಅಧಿಕಾರಿಗಳ ಕ್ರಮದ ಬಗ್ಗೆ ಸಂತೋಷ ತುರುಮರಿ ಎನ್ನುವವರು ನನ್ನ ಪಾಲಿಕೆ ಸದಸ್ಯತ್ವ ರದ್ದತಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಒಂದು ವಾರದೊಳಗೆ ಕ್ಷಮೆ ಕೇಳದೆ ಇದ್ದಲ್ಲಿ ಅವರಿಗೆ ಮಾನನಷ್ಟ ಮೊಕದ್ದೆಮೆ ನೋಟಿಸ್ ನೀಡಿ ನಂತರ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪಾಲಿಕೆ ಸದಸ್ಯ ವೀರಣ್ಣ ಸವಡಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಗಳ ಬಾಡಿಗೆ ಹೆಚ್ಚಳ ಹಾಗೂ ಬಾಕಿ ಇರುವ ಬಾಡಿಗೆ ವಸೂಲಿ ನಿಟ್ಟಿನಲ್ಲಿ ನೋಟಿಸ್ ಹಾಗೂ ಎಚ್ಚರಿಕೆ ನೀಡಿದಾಗಲೂ ಸ್ಪಂದನೆ ಇಲ್ಲವಾದಾಗ ಪಾಲಿಕೆ ಅಧಿಕಾರಿಗಳು ಬಾಕಿ ಹಣ ಪಾವತಿಸದ ಅಂಗಡಿಗಳಿಗೆ ಬೀಗ ಹಾಕಿದ್ದಾರೆ.
ಆದರೆ ಮಳಿಗೆದಾರರಿಗೆ ನಾನು ಕಿರುಕುಳ ನೀಡಿದ್ದೇನೆ ಎಂದು ತುರುಮರಿ ಆರೋಪಿಸಿರುವುದು ಹಾಸ್ಯಾಸ್ಪದವಾಗಿದೆ ಎಂದರು. ಹುಬ್ಬಳ್ಳಿಯಲ್ಲಿ 1600 ಮಳಿಗೆಗಳಿದ್ದು, ಅದರಲ್ಲಿ 1300 ಮಳಿಗೆದಾರರು ಈಗಾಗಲೇ ಬಾಡಿಗೆ ಭರಿಸಿದ್ದಾರೆ. 200 ಮಳಿಗೆದಾರರು ಮಾ.31ರೊಳಗೆ ಬಾಡಿಗೆ ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಇನ್ನುಳಿದ ಮಳಿಗೆಗಳಿಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಧಾರವಾಡದಲ್ಲಿ 489 ಮಳಿಗೆಗಳಿದ್ದು ಅದರಲ್ಲಿ 260 ಮಳಿಗೆಯವರು ಬಾಡಿಗೆ ತುಂಬಿದ್ದು ಇನ್ನುಳಿದ 229 ಮಳಿಗೆದಾರರಿಗೆ ಸಂತೋಷ ತುರುಮರಿ, ಪಾಲಿಕೆ ಸದಸ್ಯ ದೀಪಕ ಚಿಂಚೂರೆ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆ ಅಂಗಡಿಕಾರರ, ಭೂ ಬಾಡಿಗೆದಾರರ ಸಂಘದ ಅಧ್ಯಕ್ಷ ಸಂತೋಷ ತುರುಮರಿ ಎಂಬುವವರು ನನ್ನ ಸದಸ್ಯತ್ವ ರದ್ದು ಮಾಡಲು ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಮನವಿ ಸಲ್ಲಿಸುತ್ತಾರೆ ಅಂತಾ ಹೇಳಿದ್ದಾರೆ. ನಾನೇನು ಕ್ರಿಮಿನಲ್ ಚಟುವಟಿಕೆ ಮಾಡಿದ್ದೇನೆ.
ನನ್ನ ಮೇಲೆ ಯಾವುದಾದರೂ ಆರೋಪಗಳಿವೆಯೇ ಎಂಬುದರ ಸಾಮಾನ್ಯ ಜ್ಞಾನವಿಲ್ಲದೇ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಡಿಗೆ ಬಾಕಿ ಪಾವತಿಸದವರು ಹಾಗೂ ಪಾಲಿಕೆ ಅಧಿಕಾರಿಗಳು ಹಾಕಿದ ಬೀಗ ಮುರಿದು ಒಳ ಪ್ರವೇಶಿಸಿದ ಮಳಿಗೆಗಳವರ ವಿರುದ್ಧ ಪಾಲಿಕೆ ಆಯುಕ್ತರು ನಿರ್ದಾಕ್ಷಣ್ಯ ಕ್ರಮ ತೆಗೆದುಕೊಳ್ಳಬೇಕು.
ಇಲ್ಲವಾದಲ್ಲಿ ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳು ಆಯುಕ್ತರ ವಿರುದ್ಧವೇ ತಿರುಗಿ ಬೀಳಬೇಕಾದೀತು ಎಂದರಲ್ಲದೆ, ಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳದೆ ಇದ್ದಲ್ಲಿ, ಏಪ್ರಿಲ್ 3ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಇದನ್ನು ಗಂಭೀರ ವಿಷಯವಾಗಿ ಚರ್ಚಿಸಲಾಗುವುದು ಎಂದರು. ಪಾಲಿಕೆ ಸಭಾನಾಯಕ ರಾಮಣ್ಣಾ ಬಡಿಗೇರ, ಸದಸ್ಯ ಸುಧೀರ ಸರಾಫ ಇದ್ದರು.