Advertisement

ತುರ್ತುಕ್‌ ಹಳ್ಳಿಯ ವಿಹಾರ ವಿಚಾರ 

06:00 AM Sep 30, 2018 | |

ಶೈಯೋಕ್‌ ನದಿಯ ದಡದಲ್ಲಿರುವ ತುರ್ತುಕ್‌ನ ಪುಟ್ಟ ಖಾನಾವಳಿಯಲ್ಲಿ “ಇಂದಿನ ಸ್ಪೆಶಲ್‌’ ಎಂದು ಬರೆದಿದ್ದ ಕೇಸರಿ ಬೆರೆಸಿದ್ದ ಹಾಲಿಗೆ ಆರ್ಡರ್‌ ಕೊಟ್ಟು ಕಾಯುತ್ತ ಕುಳಿತಿದ್ದೆವು, ನಾವು ಆರು ಮಂದಿ. ಅಲ್ಲಿ ಒಳ್ಳೆಯ ಉಪಾಹಾರ ಸಿಗುತ್ತದೆ ಅಂದಿದ್ದ ನಮ್ಮ ಸಾರಥಿ, ಹುಂಡೂರಿನ ನೊಂಗ್‌ ಬೊ. ಅಲ್ಲಿಂದಲೇ ನಮ್ಮನ್ನು ಕೆಣಕುತ್ತಿದ್ದ ಪಾಕಿಸ್ತಾನದ ಕಾರಾಕೊರಂ ಮಡಿಲಲ್ಲಿ ಆರೇ ಕಿಲೋಮೀಟರ್‌ ದೂರದಲ್ಲಿತ್ತು ಎಲ್‌ಒಸಿ ಅಥವಾ ನಿಯಂತ್ರಣ ರೇಖೆ. ಪ್ರಪಂಚದ ಅತಿ ಎತ್ತರದ ವಾಹನ ಸಂಚಾರ ಮಾರ್ಗ ಖರ್ದುಂಗ್‌ ಲಾ (18,380 ಅಡಿ)ದಿಂದ ಬಾಲ ಬಿಚ್ಚುವ ನೂಬ್ರಾ ಕಣಿವೆಯಿಂದ 1971 ರವರೆಗೆ ಪಾಕಿಸ್ತಾನದಲ್ಲಿದ್ದ ಮತ್ತು ಈಗ ಭಾರತದ ವಶದಲ್ಲಿರುವ ತುರ್ತುಕ್‌ ಹಳ್ಳಿಯವರೆಗಿನ ಸುಮಾರು 200 ಕಿ.ಮೀ. ದೂರದ ಸರ್ಪಸುರುಳಿಯ ಹಾದಿ ಅನೂಹ್ಯ ಸೌಂದರ್ಯದ ಖನಿ. ಇತಿಹಾಸ ಹೆಪ್ಪುಗಟ್ಟಿ ನಿಂತಿರುವ ಲಡಾಖ್‌ ಮತ್ತು ಬಾಲ್ಟಿಸ್ತಾನ್‌ ಎಂಬ ವಿಚಿತ್ರ ಪ್ರಾಂತ್ಯಗಳ ಇತಿಹಾಸವನ್ನು ಕರಾರುವಾಕ್ಕಾಗಿ ನಮಗೆ ಹೇಳುತ್ತಿದ್ದ ನೊಂಗ್‌ ಬೊ ನಾವು ಕಂಡಿದ್ದ ಅತ್ಯಂತ ಯೋಗ್ಯ ಸಾರಥಿಯಾಗಿದ್ದ.  

Advertisement

ಒಂದೂವರೆ ಗಂಟೆಯಾಯಿತು. ಕೇಸರಿ ಹಾಲು ಪತ್ತೆಯಿಲ್ಲ! ನಮ್ಮ ಜೊತೆಗಿದ್ದ ಪ್ರಕಾಶ್‌ ಶೆಣೈ ಒಳಗೆ ಇಣುಕಿ ಬಂದರು. “ಕಲ್ಲಿನಲ್ಲಿ ಅರೀತಿದ್ದಾರೆ. ಕೇಸರಿ ಸಣ್ಣ ಆಗಬೇಕಲ್ವಾ…’ ಅಂತ ಹೇಳಿ ಸಮಾಧಾನದಿಂದ ಕೂತರು. ಹೊಟ್ಟೆಯಲ್ಲಿ ಚಂಡೆಮದ್ದಳೆ. ಮತ್ತೂ ಅರ್ಧಗಂಟೆಯಾಯಿತು. ಹಾಲಿಲ್ಲ! ಆರುಮಂದಿಗೆ ನಾಲ್ಕೇ ಹಾಲು ಹೇಳಿದ್ದರಿಂದ (ಒಂದಕ್ಕೆ ಇನ್ನೂರು ರೂ.) “ಇನ್ನೆರಡು ಗ್ಲಾಸು ಕೊಡು’ ಅಂದಾಗ ಹುಡುಗ ವಿಚಿತ್ರವಾಗಿ ನೋಡಿ ಎರಡು ಗ್ಲಾಸು ತಂದಿಟ್ಟು ಹೋದ. ಕೊನೆಗೂ ಅಡುಗೆ ಮನೆಯಿಂದ ಹೊರಬಂತು ನಮ್ಮ ಕೇಸರಿ ಹಾಲು! ನೋಡುತ್ತೇವೆ, ನಾಲ್ಕು ತಟ್ಟೆಗಳಲ್ಲಿ ಎರಡೆರಡು ಉತ್ತಪ್ಪದಂತಹ ದಪ್ಪದಪ್ಪ ದೋಸೆಗಳು ! ಒಟ್ಟಿಗೆ ಮೊಸರುಬಜ್ಜಿಯಂತಹ ಚಟ್ನಿ !

“ಯೇ ಕ್ಯಾ ಹೈ?’ ಅಂತ ಅವನನ್ನು ಗೊಂದಲದಿಂದ ಕೇಳಿದರು ಸತ್ಯಶಂಕರ್‌. ಅವನು, “ಯೇ ಕೇಸ್ರಿà ತ್ಸಮಿಕ್‌’ ಅಂದ. ಬೋರ್ಡನ್ನು ಸರಿಯಾಗಿ ನೋಡಿದೆವು. kesri tsamik ಅಂತಾನೇ ಇತ್ತು. ದೋಸೆಯನ್ನು ತೋರಿಸಿ, “ಯೇ ಕೇಸ್ರಿ’, ಚಟ್ನಿ ತೋರಿಸಿ  “ಯೇ ತ್ಸಮಿಕ್‌’ ಅಂದ. ನಾವು ಹೊಟ್ಟೆ ತುಂಬಾ ನಕ್ಕು ತಿಂದೆವು. ರುಚಿಯಾಗಿಯೂ ಇತ್ತು. “ಬಾಲ್ಟಿ ಭಾಷೆಯಲ್ಲಿ ಕೇಸ್ರಿ ಅಂದರೆ ದೋಸೆ, ತ್ಸಮಿಕ್‌ ಅಂದರೆ ಗಿಡಮೂಲಿಕೆಗಳನ್ನು ಸೇರಿಸಿ ಅರೆದ ಚಟ್ನಿ’ ಅಂತ ಆಮೇಲೆ  ನೊಂಗ್‌ ಬೋ ವಿವರಿಸಿದ. ನಮ್ಮ ತುರ್ತುಕ್‌ ಅನುಭವಕ್ಕೆ ತ್ಸಾಮಿಕ್‌ ಪ್ರಕರಣ ರುಚಿಕಟ್ಟಾದ ಮುನ್ನುಡಿಯಾಯಿತು.

ತುರ್ತುಕ್‌ ಪಯಣವೊಂದು ಸುಂದರ ಭಾವಯಾನ
ಪ್ರಪಂಚದ ಅತೀ ಎತ್ತರದ ವಾಹನಮಾರ್ಗ ಖರ್ದುಂಗ್‌ಲಾ ಟಾಪ್‌ನಿಂದ ಶುರುವಾಗುವ ಮತ್ತು ಇನ್ನೂರು ಕಿ.ಮೀ. ದೂರಕ್ಕೆ ಭಾರತದಲ್ಲಿ ತಲೆಯಿಟ್ಟಿರುವ ಕಡಿದಾದ ನೂಬ್ರಾ ಕಣಿವೆ ಮತ್ತು ಎಡಪಕ್ಕದಲ್ಲಿ ಜೀವ ಝಲ್ಲೆನಿಸುವ ಶಿಖರಗಳು. ಬಲಕ್ಕೆ ನೂಬ್ರಾ ನದಿ ಮುಂದೆ ಅದು ಸೇರುವ ಶೈಯೋಕ್‌ ನದಿ. ನದಿಗಳ ಆಚೀಚೆ ದುಂಡುಮರಳು ಕಲ್ಲುಗಳ ವಿಶಾಲ ಹಾಸು. “ನೂಬ್ರಾ ನದಿಯ ಆಚೆ ಇರುವುದೇ ಕಾರಾಕೋರಂ ಶ್ರೇಣಿ’ ಅಂದ ನೊಂಗ್‌ ಬೋ. ನೂಬ್ರಾ ಮತ್ತು ಶೈಯೋಕ್‌ ನದಿಗಳ ಸಂಗಮ ಒಂದು ಅವರ್ಣನೀಯ ಸೌಂದರ್ಯವಿಸ್ತಾರ. ಸಾವಿರಾರು ವರ್ಷಗಳ ಹಿಂದೆ ಚೀನಾದಿಂದ ಯುರೋಪಿಗೆ ಇದ್ದ ರೇಶ್ಮೆ ಹೆದ್ದಾರಿ ಶೈಯೋಕ್‌ನಿಂದ ಆಚೆಗಿದ್ದ ಕಾರಾಕೋರಂ ಮೂಲಕವೇ ಹಾದುಹೋಗಿತ್ತು. ತುರ್ತುಕ್‌ ರೇಷ್ಮೆ ಹೆದ್ದಾರಿಗೆ ಕಾಶ್ಮೀರದ ಹೆಬ್ಟಾಗಿಲಾಗಿತ್ತು.

“ನದಿಯನ್ನು ದಾಟಿ ಆಚೆ ಹೋಗಬಹುದೇ?’ ಎಂದು ನೊಂಗ್‌ ಬೋನನ್ನು ಕೇಳಿದೆ. “ಸಾಧ್ಯವೇ ಇಲ್ಲ’ ಎಂದ. ಚೀನಾ, ಮಂಗೋಲಿಯಾ ಕಡೆಯಿಂದ ಈ ಕಡೆ ದಾಳಿಗೆ, ವ್ಯಾಪಾರಕ್ಕೆ ಬಂದವರಲ್ಲಿ ಮುಕ್ಕಾಲುಪಾಲು ಮಂದಿ ಈ ನದಿಯನ್ನು ದಾಟುವಾಗ ವೇಗಕ್ಕೂ ಆಳಕ್ಕೂ ಸೋತು ಜಲಸಮಾಧಿಯಾಗಿದ್ದಾರಂತೆ ! ಕಾರಾಕೋರಂ ಮಡಿಲಿನ ಈ ನದಿಯ ಉದ್ದಕ್ಕೂ ಸತ್ತವರ ಎಲುಬುಗಳೇ ತುಂಬಿವೆ ಎಂದ. ಶೈಯೋಕ್‌ ಅಂದರೆ ಸಾವಿನ ನದಿ ಎಂದು ಅರ್ಥ. ಎಂತಹ ವೇಗವೆಂದರೆ ಯಾರೂ ಈಜಿಕೊಂಡು ಅಥವಾ ತೆಪ್ಪದಲ್ಲಿ ದಾಟಲಾಗದ ನದಿ ಇದು! ಲಡಾಖ್‌ ಜನರಿಗೆ ರಕ್ಷಣೆ ಕೊಡುವ ಜಲಬಂಧ ! 550 ಕಿ.ಮೀ. ಉದ್ದದ ಶೈಯೋಕ್‌ ಸಿಯಾಚಿನ್‌ನ ರಿಮೊ ಗ್ಲೆಸಿಯರ್‌ನಲ್ಲಿ ಹುಟ್ಟಿ ಪಾಂಗಾಂಗ್‌ ಸರೋವರದ ನಂತರ ರಪ್ಪನೆ ಭಾರತದ ಕಡೆ ಮುಖ ಮಾಡಿ ನೂಬ್ರಾದೊಂದಿಗೆ ಮೇಳವಿಸಿ ತುರ್ತುಕ್‌ ಸೇರುತ್ತದೆ. ಅಲ್ಲಿಂದ ಪಾಕಿಸ್ತಾನಕ್ಕೆ.
.
ಜಮ್ಮು-ಕಾಶ್ಮೀರದ ಲೇಹ್‌ ಜಿಲ್ಲೆಯಲ್ಲಿರುವ ತುರ್ತುಕ್‌ನ ನಡುಹಳ್ಳಿಯಲ್ಲಿ ಹರಿಯುವ ತೊರೆ ಇದನ್ನು ಯೂಲ್‌ ಮತ್ತು ಫೆರೋಲ್‌ ಎಂದು ಎರಡು ಭಾಗ ಮಾಡಿದೆ. ಯೂಲ್‌ ನಿಜವಾದ ಬಾಲ್ಟಿ ತುರ್ತುಕ್‌ ಸಂಸ್ಕೃತಿಯ ಹಳ್ಳಿ. ಇಲ್ಲಿರುವವರೆಲ್ಲ ಸುನ್ನಿ ಮುಸಲ್ಮಾನರು. ಫೆರೋಲ್‌ನಲ್ಲಿ ಪೇಟೆ ಅಂಗಡಿಗಳು. ಇಲ್ಲಿ ಸೂಫಿ ಮುಸ್ಲಿಮರು. ತುರ್ತುಕ್‌ ಒಳಗೆ ಕಾಲಿಟ್ಟರೆ ಒಂದು ಚಕ್ರವ್ಯೂಹದ ಒಳಹೊಕ್ಕ ಅನುಭವ. ಅಡ್ಡಾದಿಡ್ಡಿ ಓಣಿಗಳ ಜಾಲ. ಕಣ್ಣು ಹಾಯಿಸಿದಲ್ಲಿ ಸಣ್ಣಸಣ್ಣ ಮನೆಗಳು ಮತ್ತು ಹೋಂ ಸ್ಟೇ ಎಂಬ ಫ‌ಲಕಗಳು. ಪಕ್ಕದಲ್ಲೇ ನಳನಳಿಸುವ ಪುಟ್ಟಪುಟ್ಟ ಗದ್ದೆಗಳಲ್ಲಿ ಗೋಧಿ, ಕ್ಯಾಬೇಜ್‌, ಏಪ್ರಿಕೋಟ್‌ ಮರಗಳ ನೋಟ… ಬಾಲ್ಟಿ, ಲಡಾಖೀ, ಉರ್ದು ಭಾಷೆಗಳನ್ನಾಡುವ ತುರ್ತುಕ್‌ ಮುಸ್ಲಿಮರ ನಡುವೆ ಒಂದು ಗೋಂಪಾ (ಬೌದ್ಧ ಮಂದಿರ) ನಮ್ಮ ಗಮನ ಸೆಳೆಯಿತು. ಕಾನಿಷ್ಕನ ಕಾಶ್ಮೀರಕ್ಕೂ ಚೀನಾಕ್ಕೂ ಬೌದ್ಧ ಧರ್ಮದ ಸಂಪರ್ಕ ಮಾರ್ಗ ತುರ್ತುಕ್‌ ಮೂಲಕವೇ ಸಾಗಿರಬೇಕು. ನೊಂಗ್‌ ಬೋ ಹೇಳಿದ: ಮುಸ್ಲಿಮರ ದಾಳಿಯಾಗುವ ಮೊದಲು, ಅಂದಾಜು ಸಾವಿರದಿನ್ನೂರು ವರ್ಷಗಳ ಹಿಂದೆ, ಇಲ್ಲಿ ಬೌದ್ಧರೇ ಇದ್ದರಂತೆ. ಸುಮಾರು ಕ್ರಿ. ಶ. 800 ರಲ್ಲಿ ಚೀನಾದ ಈಗಿನ ಕ್ಸಿನ್‌ ಜಿಯಾಂಗ್‌ ಪ್ರಾಂತ್ಯದಿಂದ (ಆಗಿನ ಯಾರ್ಖಂಡ್‌) ಸಿಯಾಚಿನ್‌ ಹಿಮನದಿಯ ಮೂಲಕ ಯಾಗ್‌ ಬೋ ವಂಶದ ಬೇಗ್‌ ಮಂತರ್‌ ಎಂಬ ಮುಸ್ಲಿಮ್‌ ದಾಳಿಕೋರ ತುರ್ತುಕ್‌ ಹಳ್ಳಿಯನ್ನು ಗೆದ್ದುಕೊಂಡ. ಬಾಲ್ಟಿಸ್ತಾನದ ಈ ವಿಚಿತ್ರ ಹಳ್ಳಿಯನ್ನು ಅವನ ವಂಶಜರು ಲಡಾಖ್‌ವರೆಗೆ ಒಂದು ಸಾವಿರ ವರ್ಷ ಆಳಿದರು. 1846ರಲ್ಲಿ ಡೋಗ್ರಾ ವಂಶದವರು ಕಾಶ್ಮೀರವನ್ನು ಗೆದ್ದಾಗ ತುರ್ತುಕ್‌ನಲ್ಲಿ ಯಾಂಗ್‌ ಬೋ ಆಡಳಿತ ಕೊನೆಗೊಂಡಿತು.  ಈಗ ಯಾಂಗ್‌ ಬೋ ವಂಶದ ಒಂದು ಹಳೆಯ ಅರಮನೆ ಇಲ್ಲಿದೆ. ರಾಜವಂಶದ ಮುದುಕ ಯಾಬೊ ಮೊಹಮ್ಮದ್‌ ಖಾನ್‌ ಕಾಚೋ ಈಗ ತುರ್ತುಕ್‌ನ ರಾಜನಂತೆ! ಅವನ ಅಜ್ಜ ರಾಜ್ಯ ಕಳಕೊಂಡದ್ದು. ಅವನ ವಂಶಜರೆಲ್ಲ ತುರ್ತುಕ್‌ನಿಂದ ನಾಲ್ಕು ಮೈಲಿ ದೂರದ ಎಲ್‌ಒಸಿ (ನಿಯಂತ್ರಣ ರೇಖೆ) ಯಿಂದ ಆಚೆಗಿದ್ದಾರೆ.

Advertisement

1947ರಲ್ಲಿ ಭಾರತ -ಪಾಕಿಸ್ತಾನಗಳು ಸ್ವತಂತ್ರವಾದಾಗ ಪಾಕ್‌ ಸೈನಿಕರು ತುರ್ತುಕ್‌ಗೆ ನುಗ್ಗಿ ಕೊಳ್ಳೆಹೊಡೆದಿದ್ದರು. ಅರಮನೆಯ ಅಮೂಲ್ಯ ಕಲಾಕೃತಿಗಳನ್ನು ದೋಚಿದ್ದರು. 1971ರವರೆಗೂ ತುರ್ತುಕ್‌ ಪಾಕ್‌ ವಶದಲ್ಲಿತ್ತು. 1971ರ ಬಾಂಗ್ಲಾ ಯುದ್ಧ ನಡೆದಾಗ ತುರ್ತುಕ್‌ ಮುಸ್ಲಿಮರು ಎಲ್ಲೆಲ್ಲೋ ಅಡಗಿದ್ದರು. ಆಗ ಭಾರತದ ಲಡಾಖ್‌ ಸ್ಕೌಟ್ಸ್‌ ಮತ್ತು ನೂಬ್ರಾ ಗಾರ್ಡ್ಸ್‌ ದಳಗಳು ಮೇಜರ್‌ ಚೆವಾಂಗ್‌ ರಿಂಚೆನ್‌ನ ನೇತೃತ್ವದಲ್ಲಿ ತುರ್ತುಕ್‌ನ್ನು ವಶಪಡಿಸಿಕೊಂಡವು. ರಿಂಚೆನ್‌ಗೆ ಮಹಾವೀರ ಪ್ರಶಸ್ತಿ ಸಿಕ್ಕಿತು. ಅಂದಿನಿಂದ ತುರ್ತುಕ್‌ ಭಾರತದ  ವಶದಲ್ಲಿದೆ. ಕಾರ್ಗಿಲ್‌ ಯುದ್ಧದ ಸಮಯದಲ್ಲಿ ತುರ್ತುಕ್‌ಗೆ ನುಸುಳಿದ್ದ ಪಾಕ್‌ ಉಗ್ರಗಾಮಿಗಳನ್ನು ಹೊಡೆದುರುಳಿಸಿ ಹುತಾತ್ಮನಾಗಿದ್ದ ಹನೀಫ್ನ ನೆನಪಿನಲ್ಲಿ ಈಗ ತುರ್ತುಕ್‌ನ ಒಂದು ಭಾಗವನ್ನು ಹನೀಫ್ ಸೆಕ್ಟರ್‌ ಎನ್ನುತ್ತಾರೆ. ತುರ್ತುಕ್‌ನ ಒಂದೇ ಒಂದು ಪ್ರೈಮರಿ ಶಾಲೆಯ ಅಧ್ಯಾಪಕ, “ತುರ್ತುಕ್‌ ಭಾರತಕ್ಕೆ ಸೇರಿದ ಮೇಲೆ ನಾವು ಅರಳಿಕೊಂಡೆವು’ ಎನ್ನುತ್ತ ನಮ್ಮನ್ನು ಬಾಲ್ಟಿ ಸಂಸ್ಕೃತಿಯ ಹೆರಿಟೇಜ್‌ ಮನೆಗೆ ಕರೆದೊಯ್ದ. ದಾರಿಯುದ್ದಕ್ಕೂ ಮುದ್ದುಮೊಗದ ಎಳೆಯರು !

ಈ ಚೆಂದ ಇವರಿಗೆಲ್ಲಿಂದ ಬಂತು? ಅಲ್ಲಲ್ಲಿ ಪುಟ್ಟ ಕಿಟಕಿಗಳ ಒಳಗೆ ಚಲಿಸುವ ನೆರಳುಗಳು. ಹೆರಿಟೇಜ್‌ ಮನೆಯೊಳಗಿನ ಬಾಲ್ಟಿ ಬದುಕಿನ ಪಳೆಯುಳಿಕೆಯನ್ನು ನೋಡಿಯೇ ಅನುಭವಿಸಬೇಕು ! 

ಬಿ. ಸೀತಾರಾಮ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next