Advertisement

ಈ ಜರ್ನಿಯಲ್ಲಿ ತಿರುವುಗಳು ಜಾಸ್ತಿ!

10:34 AM Sep 02, 2017 | |

ಅವನು ಸತ್ತು ಆಗಲೇ ಎರಡು ತಿಂಗಳಾಗಿವೆ ಅಂತ ಇನ್‌ಸ್ಪೆಕ್ಟರ್‌ ಹೇಳುತ್ತಿದ್ದಂತೆಯೇ, ಅವರೆಲ್ಲಾ ಗಾಬರಿಯಾಗುತ್ತಾರೆ. ಏಕೆಂದರೆ, ಕೆಲವು ದಿನಗಳ ಹಿಂದೆ ಸ್ವತಃ ಅವನೇ ಅವರಿಗೆ ಫೋನ್‌ ಮಾಡಿ, ತನ್ನ ಹಳ್ಳಿಯ ಮನೆಗೆ ಕರೆದಿರುತ್ತಾನೆ. ಅವರು ಆ ಮನೆಗೆ ಬಂದ ಸಂದರ್ಭದಲ್ಲಿ ಅವರಿಗೆ ಆತಿಥ್ಯ ನೀಡಿ ಸತ್ಕರಿಸುತ್ತಾನೆ. ಹೀಗಿರುವಾಗ ಅವನು ಎರಡು ತಿಂಗಳ ಹಿಂದೆಯೇ ಸಾಯುವುದಕ್ಕೆ ಹೇಗೆ ಸಾಧ್ಯ?

Advertisement

ಒಂದು ಪಕ್ಷ ಅವನು ಸತ್ತು ಹೋದ ಅಂತಿಟ್ಟುಕೊಂಡರೂ, ಅವರ ಜೊತೆಗೆ ಎರಡು ದಿನಗಳ ಕಾಲ ಕಳೆದಿದ್ದು ಯಾರು? ಈ ವಿಷಯ ತಿಳಿಯುವುದಕ್ಕಾದರೂ ನೀವು ಜರ್ನಿ ಕೈಗೊಳ್ಳಬೇಕು. ಅದು ಹ್ಯಾಪಿ ಆಗಿ ಮುಗಿಯುತ್ತದೋ ಅಥವಾ ಇಲ್ಲವೋ ಎಂಬುದು ನಿಮಗೆ ಬಿಟ್ಟಿದ್ದು. ಯುವಕರು ಬೇರೆಯವರ ಜೀವನದಲ್ಲಿ ಹೇಗೆಲ್ಲಾ ಚೆಲ್ಲಾಟವಾಡುತ್ತಾರೆ ಮತ್ತು ಅದರಿಂದ ಏನೇನು ಅನಾಹುತಗಳಾಗುತ್ತವೆ ಎಂದು ಹೇಳುವ ಕಥೆ “ಹ್ಯಾಪಿ ಜರ್ನಿ’.

ಇಲ್ಲಿ ಒಂದಿಷ್ಟು ಗೆಳೆಯರು, ಒಂದೇ ಕಂಪೆನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುತ್ತಾರೆ. ಅದರಲ್ಲಿ ಒಬ್ಟಾತ ಒಂದು ಹುಡುಗಿಗೆ ಪ್ರಪೋಸ್‌ ಮಾಡುತ್ತಾನೆ. ಅವಳು ನಿರಾಕರಿಸುತ್ತಾಳೆ. ಆಕೆಯನ್ನು ಪ್ರೀತಿಸುತ್ತಿರುವ ಮತ್ತೂಬ್ಬ, ಇವನಿಗೆ ಹೊಡೆದು ಬೀಳಿಸುತ್ತಾನೆ. ಇವರೆಲ್ಲರ ಸಹವಾಸವೇ ಬೇಡ ಎಂದು ಅವನು ಗೆಳೆಯರನ್ನು, ಕೆಲಸವನ್ನು ಮತ್ತು ಊರನ್ನು ಬಿಟ್ಟು ತನ್ನ ಹಳ್ಳಿಗೆ ಬರುತ್ತಾನೆ. ಹಾಗೆ ಬಂದರೂ, ಅವನು ನೆಮ್ಮದಿಯಾಗಿರುವುದಕ್ಕೆ ಸಾಧ್ಯವಾಗುವುದಿಲ್ಲ.

ಹಳೆಯ ನೆನಪುಗಳು ಕಾಡುತ್ತಲೇ ಇರುತ್ತವೆ. ಅದರಿಂದ ಆತ ಆಚೆ ಬರುವುದು ಹೇಗೆ ಅಂತ ಒದ್ದಾಡುತ್ತಿರುವಾಗಲೇ, ಅದೊಂದು ಘಟನೆ ನಡೆದು ಹೋಗುತ್ತದೆ. ಆ ಘಟನೆ ಅವನೊಬ್ಬನ ಜೀವನವಷ್ಟೇ ಅಲ್ಲ, ಎಲ್ಲರ ಜೀವನದಲ್ಲೂ ಒಂದು ಬದಲಾವಣೆ ತರುತ್ತದೆ. ಬಹುಶಃ “ಹ್ಯಾಪಿ ಜರ್ನಿ’ಯಲ್ಲಿ ತಾಯಿ ಸೆಂಟಿಮೆಂಟ್‌ ಒಂದು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಇದೆ ಎಂದರೆ ತಪ್ಪಿಲ್ಲ. ಕಾಮಿಡಿ, ಥ್ರಿಲ್‌, ಹಾರರ್‌, ಸ್ನೇಹ, ಪ್ರೀತಿ ಎಲ್ಲವನ್ನೂ ಮಿಕ್ಸ್‌ ಮಾಡಿ ಒಂದು ಚಿತ್ರ ಮಾಡಿದ್ದಾರೆ ಶ್ಯಾಮ್‌ ಶಿವಮೊಗ್ಗ.

ಚಿತ್ರ ಶುರುವಾಗುವುದು ಒಂದಿಷ್ಟು ಜನ ಕಾಡಿನಲ್ಲಿ ಓಡುವ ಮೂಲಕ. ಅವರು ಯಾಕೆ ಓಡುತ್ತಿದ್ದಾರೆ ಎಂದು ಶುರುವಾಗುವ ಕುತೂಹಲವು ದೃಶ್ಯದಿಂದ ದೃಶ್ಯಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಅದು ದೆವ್ವದ ಚೇಷ್ಟೆಯಾ ಅಥವಾ ಯಾರಾದರೂ ಈ ರೀತಿ ಮಾಡುತ್ತಿದ್ದಾರಾ ಎಂಬ ಕುತೂಹಲ ವಿಪರೀತವಾಗಿ ಕಾಡುತ್ತದೆ. ಆ ಮಟ್ಟಕ್ಕೆ ಸಾಕಷ್ಟು ತಿರುವುಗಳನ್ನು ಇಟ್ಟಿದ್ದಾರೆ ಶ್ಯಾಮ್‌. ಹೀಗೆ ಪ್ರೇಕ್ಷಕರನ್ನು ಹಿಡಿದಿಡುವ ಚಿತ್ರವು, ಕ್ರಮೇಣ ದಾರಿ ತಪ್ಪುತ್ತದೆ.

Advertisement

ಬಹುಶಃ ಅಷ್ಟೊಂದು ತಿರುವುಗಳೇ ಚಿತ್ರದ ಮೈನಸ್‌ ಪಾಯಿಂಟ್‌ಗಳೆಂದರೆ ತಪ್ಪಿಲ್ಲ. ಕೆಲವು ತಿರುವುಗಳು ತೀರ ಸಿಲ್ಲಿ ಎನಿಸಲೂಬಹುದು. ಚಿತ್ರವನ್ನು ಸ್ವಲ್ಪ ಗಂಭೀರವಾಗಿ ಮತ್ತು ಹೇಳುವುದನ್ನು ಸರಿಯಾಗಿ ಹೇಳಿದ್ದರೆ, ಪ್ರಯಾಣ ಸುಖಕರವಾಗಿತ್ತಿತ್ತೇನೋ? ಏಕೆಂದರೆ, ಮಧ್ಯದಲ್ಲಿ ಒಂದಿಷ್ಟು ಕೆಟ್ಟ ಕಾಮಿಡಿ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುವುದರ ಜೊತೆಗೆ, ಪ್ರೇಕ್ಷಕರನ್ನು ಅಲ್ಲಲ್ಲಿ ಬೋರ್‌ ಹೊಡೆಸುತ್ತವೆ. ಇವೆಲ್ಲಾ ಪ್ರಯಾಣವನ್ನು ಇನ್ನಷ್ಟು ಸುಸ್ತು ಮಾಡುತ್ತದೆ. ಜರ್ನಿ ಮುಗಿದು, ಪ್ರೇಕ್ಷಕ ಕೆಳಗಿಳಿಯುವಷ್ಟರಲ್ಲಿ ಸುಸ್ತಾಗಿರುತ್ತಾನೆ.

ಬರೀ ಚಿತ್ರಕಥೆಯಷ್ಟೇ ಅಲ್ಲ, ಅಭಿನಯದಲ್ಲೂ ಅತಿರೇಕ ಸ್ವಲ್ಪ ಜಾಸ್ತಿಯೇ ಇದೆ. ನವೀನ್‌ ಪಡೀಲ್‌ ಮತ್ತು ಕುರಿ ಪ್ರತಾಪ್‌ ಅವರ ಕಾಮಿಡಿ ಪಂಚ್‌ಗಳು ಅಲ್ಲಲ್ಲಿ ಪ್ರೇಕ್ಷಕರನ್ನು ನಗಿಸುತ್ತದೆ ಎನ್ನುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ಮಜಾ ಕೊಡುವ ಸನ್ನಿವೇಶಗಳು ಕಡಿಮೆಯೇ. ಇನ್ನು ಕಲಾವಿದರ ಪೈಕಿ ಸೃಜನ್‌, ರಮೇಶ್‌ ಭಟ್‌ ಮತ್ತು ಶಿವಧ್ವಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಚಂದ್ರಕಾಂತ್‌ ಅವರ ಸಂಗೀತ ಮತ್ತು ಎಂ.ಆರ್‌. ಸೀನು ಅವರ ಛಾಯಾಗ್ರಹಣದಲ್ಲಿ ಅದ್ಭುತ ಎನ್ನುವಂತದ್ದು ಏನೂ ಇಲ್ಲ.

ಚಿತ್ರ: ಹ್ಯಾಪಿ ಜರ್ನಿ
ನಿರ್ದೇಶನ: ಶ್ಯಾಮ್‌ ಶಿವಮೊಗ್ಗ
ನಿರ್ಮಾಣ: ಕರಿಷ್ಮಾ ಆರ್‌ ಶೆಟ್ಟಿ
ತಾರಾಗಣ: ಸೃಜನ್‌ ಲೋಕೇಶ್‌, ಅಮಿತಾ ಕುಲಾಲ್‌, ನವೀನ್‌ ಪಡೀಲ್‌, ಕುರಿ ಪ್ರತಾಪ್‌, ಶಿವಧ್ವಜ್‌, ರಮೇಶ್‌ ಭಟ್‌ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next