ಇಸ್ತಾಂಬುಲ್/ಅಜ್ಮರಿನ್: ನೈಋತ್ಯ ಟರ್ಕಿ ಮತ್ತು ಉತ್ತರ ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಗಳಿಂದ ಕನಿಷ್ಠ 2,700 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸೋಮವಾರ ಬೆಳಗಿನ ಜಾವ 4.17ಕ್ಕೆ ಬಹುತೇಕರು ಮುಂಜಾನೆಯ ಸವಿನಿದ್ರೆಯಲ್ಲಿದ್ದಾಗಲೇ ಭೂಮಿತಾಯಿ ರುದ್ರನರ್ತನಗೈದಿದ್ದು, ಕಣ್ಣುಬಿಡುವ ಮೊದಲೇ ಸಾವಿರಾರು ಮಂದಿ ಮಣ್ಣಾಗಿದ್ದಾರೆ. ಇನ್ನೂ ನೂರಾರು ಮಂದಿ ಅವಶೇಷಗಳಡಿ ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಗಳು ಇವೆ.
ಸ್ಥಳೀಯ ಕಾಲಮಾನ ಮುಂಜಾನೆ 4.17ಕ್ಕೆ ಮೊದಲ ಭೂಕಂಪ ಸಂಭವಿಸಿದರೆ, ಕೆಲವೇ ತಾಸುಗಳ ಬಳಿಕ 7.5ರ ತೀವ್ರತೆಯಲ್ಲಿ ಮತ್ತೂಂದು ಭೂಕಂಪ ಉಂಟಾಗಿದೆ. ಸೂರ್ಯ ಮುಳುಗುವ ಹೊತ್ತಿಗೆ ಮತ್ತೊಂದು ಬಾರಿ ಭೂಮಿ ಕಂಪಿಸಿದೆ. ಇದಲ್ಲದೆ 50ಕ್ಕೂ ಅಧಿಕ ಪಶ್ಚಾತ್ ಕಂಪನಗಳು ಸಂಭವಿಸಿವೆ. ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಟರ್ಕಿಯಿಂದ ಸುಮಾರು 5,500 ಕಿ.ಮೀ. ದೂರದಲ್ಲಿರುವ ಗ್ರೀನ್‌ಲ್ಯಾಂಡ್ ನಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಭೂಮಿಯು ಅಲುಗಾಡುತ್ತಿರುವ ಅನುಭವವಾಗುತ್ತಿದ್ದಂತೆ ಕೆಲವರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ. ಅವರ ಕಣ್ಣೆದುರೇ ಮನೆಗಳು, ಕಟ್ಟಡಗಳು, ಮರ ಗಳು ಧರೆಗುರುಳಿವೆ. ತೀವ್ರ ಚಳಿ ಹಾಗೂ ಮಂಜಿನ ಮಳೆಯ ನಡುವೆ ಅನೇಕರು ತಮ್ಮವರನ್ನು ರಕ್ಷಿಸಲು ಹೆಣಗಾಡುತ್ತಿದ್ದ, ಅವಶೇಷಗಳಡಿಯಿಂದ ಹೊರಗೆಳೆ ಯಲು ಯತ್ನಿಸುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಭಾರತದಿಂದ ರಕ್ಷಣ ತಂಡ ರವಾನೆ
ಭೂಕಂಪ ಪೀಡಿತ ರಾಷ್ಟ್ರಗಳಿಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಬೆನ್ನಲ್ಲೇ ಸರಕಾರವು ಟರ್ಕಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ ಶೋಧ ಮತ್ತು ರಕ್ಷಣ ತಂಡಗಳು, ವೈದ್ಯಕೀಯ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ತತ್‌ಕ್ಷಣವೇ ಕಳುಹಿಸಿಕೊಟ್ಟಿದೆ.
ಭೂಕಂಪದಿಂದ ಉಂಟಾದ ಅಪಾರ ಸಾವು ನೋವಿನ ಸುದ್ದಿ ಕೇಳಿ ದುಃಖವಾಯಿತು. ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ. ಟರ್ಕಿ ಮತ್ತು ಸಿರಿಯಾದ ಜನರಿಗೆ ಬೆಂಬಲವಾಗಿ ಭಾರತ ನಿಲ್ಲುತ್ತದೆ.
– ನರೇಂದ್ರ ಮೋದಿ, ಪ್ರಧಾನಿ