ಜಕಾರ್ತಾ: ಪ್ರಬಲ ಭೂಕಂಪದಿಂದ ನಲುಗಿ ಹೋಗಿರುವ ಟರ್ಕಿ-ಸಿರಿಯಾದಲ್ಲಿ ಭಾರತದ ರಕ್ಷಣಾ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಏತನ್ಮಧ್ಯೆ ಟರ್ಕಿಯ ಅಂಕಾರದಲ್ಲಿ ಭಾರತದ ರಕ್ಷಣಾ ತಂಡದ ಮಹಿಳಾ ಅಧಿಕಾರಿಯನ್ನು ಟರ್ಕಿಶ್ ಮಹಿಳೆ ಆತ್ಮೀಯವಾಗಿ ಆಲಿಂಗಿಸಿಕೊಂಡು ಕೃತಜ್ಞತೆ ಅರ್ಪಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ದೇಶಸೇವೆ ಮಾಡಿದ ಅಧಿಕಾರಿಗೆ ರಕ್ಷಣೆ ಕೊಡದಷ್ಟು ಅಮಾನವೀಯವೇ? ಸರ್ಕಾರ ವಿರುದ್ಧ JDS ಆಕ್ರೋಶ
ಟರ್ಕಿ ಸಿರಿಯಾದಲ್ಲಿನ ಭಾರತದ ಸೇನೆಯ ರಕ್ಷಣಾ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಯುದ್ಧವಲ್ಲ, ಆದರೆ ಅವರು ತಮ್ಮದೇ ದೇಶದ ಜನರನ್ನು ರಕ್ಷಿಸಬೇಕಾಗಿದೆ. ಇದಕ್ಕಾಗಿ ಆಪರೇಶನ್ ದೋಸ್ತ್ ತಂಡಕ್ಕೆ ಅಭಿನಂದನೆಗಳು ಎಂದು ಟ್ವೀಟರ್ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
“ಮಾನವತೆಯೇ ವಿಶ್ವದ ಅತೀ ದೊಡ್ಡ ಧರ್ಮ ಮತ್ತು ಸತ್ಯ, ಭಾರತೀಯ ಸಂಸ್ಕೃತಿಯ ಆತ್ಮದ ತಿರುಳಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಟರ್ಕಿ-ಸಿರಿಯಾಕ್ಕೆ ಭಾರತದ ಸೇನೆ ಈಗಾಗಲೇ ಆಪರೇಶನ್ ದೋಸ್ತ್ ಭಾಗದ ಅಂಗವಾಗಿ ಔಷಧ, ಮೊಬೈಲ್ ಹಾಸ್ಪಿಟಲ್, ವೈದ್ಯರು ಮತ್ತು ಶೋಧ ಹಾಗೂ ರಕ್ಷಣಾ ತಂಡವನ್ನು ಕಳುಹಿಸಿದೆ.
ನಿದ್ದೆಯ ಮಂಪರಿನಲ್ಲಿದ್ದ ವೇಳೆ ಸೋಮವಾರ ಟರ್ಕಿ-ಸಿರಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮ ಸಾವಿರಾರು ಕಟ್ಟಡಗಳು ನೆಲಸಮಗೊಂಡಿವೆ. ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡು ರಕ್ಷಣೆಗಾಗಿ ಅಂಗಲಾಚುತ್ತಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 21,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ವರದಿ ಪ್ರಕಾರ, ಸಿರಿಯಾದಲ್ಲಿ 3,377 ಮಂದಿ ಹಾಗೂ ಟರ್ಕಿಯಲ್ಲಿ 17,674 ಜನರು ಸಾವನ್ನಪ್ಪಿದ್ದಾರೆ. ಸಾರ್ವಜನಿಕ ಆಸ್ಪತ್ರೆಗಳು, ಏಳು ನಗರಗಳು ಸೇರಿದಂತೆ ಸುಮಾರು 4,000ಕ್ಕೂ ಅಧಿಕ ಕಟ್ಟಡಗಳು ನೆಲಸಮವಾಗಿರುವುದಾಗಿ ವರದಿ ವಿವರಿಸಿದೆ.