ಕಲಬುರಗಿ: ತೊಗರಿ ಬೆಂಬಲ ಬೆಲೆಯನ್ನು 7,500ರೂ.ಗಳಿಗೆ ಹೆಚ್ಚಿಸಬೇಕು, ವಿದೇಶಿ ಆಮದು ತೊಗರಿ ಮೇಲೆ ಶೇಕಡಾ 30ರಷ್ಟು ಸುಂಕ ಹೆಚ್ಚಿಸಬೇಕು, ಕೆಎಂಎಫ್ ಮಾದರಿಯಲ್ಲಿ ತೊಗರಿ ಮಂಡಳಿ ಬಲಪಡಿಸಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಏಳು ಸಂಘಟನೆಗಳು ಜಂಟಿಯಾಗಿ ಕರೆ ನೀಡಿದ್ದ ಕಲಬುರಗಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರವನ್ನು ಬೆಳಗಿನಿಂದಲೇ ಸ್ಥಗಿತಗೊಳಿಸಲಾಗಿತ್ತು. ನಗರಕ್ಕೆ ಬರಬೇಕಿದ್ದ ಬಸ್ಸುಗಳು ನಗರದ ವರ್ತುಲ ರಸ್ತೆಗಳಮೂಲಕವೇ ಚಲಿಸಿದವು. ಅಲ್ಲಿಂದ ಪ್ರಯಾಣಿಕರನ್ನು ಸಾಗಿಸಿದವು. ಇನ್ನುಳಿದಂತೆ ಶಾಲಾ, ಕಾಲೇಜುಗಳು, ಸಿನೆಮಾ ಮಂದಿರಗಳು, ವ್ಯಾಪಾರಿ ಮಾಲ್ ಗಳು, ಕಾಯಿಪಲ್ಲೆ ಮಾರುಕಟ್ಟೆಗಳು, ಹೋಟೆಲ್ ಗಳು ಎಂದಿನಂತೆ ನಡೆದವು.
ಆಟೋ ಸಂಚಾರವೂ ನಗರದಲ್ಲಿ ಮಾಮೂಲಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ನಗರ ಎಂದಿನಂತೆಯೇ ಇತ್ತು. ಸರಕಾರ ಕಚೇರಿಗಳು, ಬ್ಯಾಂಕುಗಳು, ನಿಗಮ, ಮಂಡಳಿ ಕಚೇರಿಗಳು ಎಂದಿನಂತೆಯೆ ನಡೆದವು. ಎಪಿಎಂಸಿ ಮಾರುಕಟ್ಟೆ,, ಸರಾಫ್ ಬಜಾರ್ ಮತ್ತು ಮಾಲ್‌ಗಳು ಎಲ್ಲವೂ ಎಂದಿನಂತೆ ನಡೆದವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಜನಸಾಮಾನ್ಯರು, ಅದರಲ್ಲಿಯೂ ಗ್ರಾಮಾಂತರದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾದರು.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಅನೇಕರು ಬಸ್ ಗಳಿಲ್ಲದೇ ಪರದಾಡುವಂತಾಗಿತ್ತು. ನಗರದ ಗಂಜ್ ಮಾರುಕಟ್ಟೆ, ಕಿರಣಾ ಬಜಾರ್, ಸರಾಫ್ ಬಜಾರ್ ಪ್ರದೇಶಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ಸಿಕ್ಕಿತು. ಗಂಜ್ ಮಾರುಕಟ್ಟೆಯಲ್ಲಿ ಎಲ್ಲ ವಹಿವಾಟು ಸ್ಥಗಿತಗೊಂಡಿತ್ತು. ಅದೇ ರೀತಿ ಕಿರಾಣಾ ಬಜಾರ್, ಸರಾಫ್ ಬಜಾರ್‌ಗಳಲ್ಲಿ ವರ್ತಕರು ತಮ್ಮ ವ್ಯಾಪಾರ, ವಹಿವಾಟು ಬಂದ್ ಮಾಡಿದ್ದರು.
ಉಳಿದಂತೆ ಅಲ್ಲೊಂದು, ಇಲ್ಲೊಂದು ಮಳಿಗೆಗಳು ಬಂದ್ ಆಗಿದ್ದನ್ನು ಬಿಟ್ಟರೆ, ಎಲ್ಲೆಡೆ ದಿನನಿತ್ಯದ ವ್ಯಾಪಾರ, ವಹಿವಾಟು ಮುಂದುವರಿಯಿತು. ಪ್ರಯಾಣಿಕರು ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬಂದ್‌ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಅಖೀಲ ಭಾರತ ಕಿಸಾನ್ ಸಭಾ ರಾಜ್ಯ ರೈತ ಸಂಘ ಹಸಿರುಸೇನೆ, ಚಿತ್ತಾಪುರ ತೊಗರಿ ಬೆಳೆಗಾರರ ಸಂಘ, ಹೈದ್ರಾಬಾದ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ, ದಾಲ್ ಮಿಲ್ ಅಸೋಶಿಯೇಶನ್, ಆಹಾರ ಧಾನ್ಯ ಬೇಳೆಕಾಳುಗಳ ಸಂಘ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು.