Advertisement
ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ಅನಂತರ ಮುನಿರಾಬಾದ್‌ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತುಂಗಭದ್ರಾ ಬೋರ್ಡ್ ಜತೆ ಚರ್ಚೆ ನಡೆಸಿ ಒಂದು ವರ್ಷದೊಳಗೆ ನೂತನ ಗೇಟ್ ಅಳವಡಿಕೆ ಮಾಡಲಾಗುವುದು. ಆ ಮೂಲಕ ರೈತರ ರಕ್ಷಣೆ ಮಾಡಲಾಗುವುದು. ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಕ್ರೆಸ್ಟ್‌ಗೇಟ್ ಕಿತ್ತು ಹೋಗಿದ್ದ ವೇಳೆ ನಮ್ಮ ಸರಕಾರ ರೈತರ ಪರವಾಗಿ ನಿಂತು ತಜ್ಞರ ಶ್ರಮದಿಂದ ಮತ್ತೆ ಡ್ಯಾಂನಲ್ಲಿ ನೀರುಳಿಸುವ ಕೆಲಸ ಮಾಡಿದೆ. ಈ ಅವಕಾಶ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ನಮ್ಮ ಭಾಗ್ಯ ಎಂದರು.
ಕಷ್ಟಕಾಲದಲ್ಲಿ ಕನ್ನಯ್ಯ ನಾಯ್ಡು ಅವರು ನಮ್ಮ ಜೊತೆ ನಿಂತು, 20 ಟಿಎಂಸಿಯಷ್ಟು ನೀರು ಉಳಿಸಿದರು. 9 ಲಕ್ಷ ಎಕರೆಗೆ ಬೆಳೆ ಹಾಗೂ ನಮ್ಮ ರೈತರನ್ನು ಉಳಿಸಿದರು. ಇವರೊಟ್ಟಿಗೆ ನಾರಾಯಣ, ಹಿಂದೂಸ್ಥಾನ್ ಎಂಜಿನಿಯರಿಂಗ್, ಜಿಂದಾಲ್ ಸಹಕಾರ ದೊರೆಯಿತು. ಗೇಟ್ ಕಿತ್ತ ಒಂದೇ ವಾರದಲ್ಲಿ ದುರಸ್ತಿ ಮಾಡಿದ್ದು ನಮಗೆಲ್ಲ ಸಂತಸ ತರಿಸಿದೆ ಎಂದರು. ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಸಮತೋಲಿತ ಅಣೆಕಟ್ಟು. ಇದರ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಲಾಗಿದೆ. 15 ಸಾವಿರ ಎಕರೆ ಭೂಮಿ, 9 ಸಾವಿರ ಕೋಟಿ ರೂ. ಅಗತ್ಯವಿದೆ. ಈ ಕುರಿತು ಆಂಧ್ರ-ತೆಲಂಗಾಣ ಸರಕಾರಗಳ ಸಿಎಂ ಹಾಗೂ ಆ ರಾಜ್ಯದ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಎಂದರು.