ಸಿಂಧನೂರು: ತುಂಗಭದ್ರಾ ಜಲಾಶಯಕ್ಕೆ ಹಂಚಿಕೆಯಾದ ನೀರಿನ ಒಳಹರಿವಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳವಾರ ಸಿಂಧನೂರಿನಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ತುಂಗಭದ್ರಾ ಅಣೆಕಟ್ಟೆಯಲ್ಲಿ 139 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ ಸುಮಾರು 30 ಟಿಎಂಸಿ ಅಡಿ ಹೂಳು ತುಂಬಿದೆ. ಜೊತೆಗೆ ಜಲಾಶಯದ ಮೇಲ್ಭಾಗದಲ್ಲಿ ತುಂಗಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಸಿಂಗಟಾಲೂರು ಸೇರಿ ಸುಮಾರು 20ಕ್ಕೂ ಅಧಿಕ ಹೊಸ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಪಾವಗಡಕ್ಕೆ 2.5 ಟಿಎಂಸಿ ಅಡಿ ನೀರು, ಕಾರ್ಖಾನೆಗಳಿಗೆ ನೀರು ಬಿಡಲಾಗುತ್ತಿದೆ.
ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಈ ಭಾಗದ ರೈತರು ನಿರಾಶ್ರಿತರಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಅರಿತು ಮುಖಂಡರ ಸಭೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ನಿವೃತ್ತ ಅಭಿಯಂತರರಿಂದ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ, ಫೆ. 11, 12ರೊಳಗೆ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ
ನಡೆಸಿ ಮನವಿ ಪತ್ರ ಸಿದ್ಧಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಹಂಚಿಕೆಯಾದಂತೆ ಒಳ ಹರಿವಿನ ಪ್ರಮಾಣ ಕಡಿಮೆಯಾಗದಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಪಾವಗಡಕ್ಕೆ ಹಿನ್ನೀರಿನ ಬದಲಾಗಿ ಮುನ್ನೀರು ಕೊಡಲು ಒತ್ತಾಯಿಸಲಾಗುವುದು. ಅರ್ಧಕ್ಕೆ ನಿಂತಿರುವ ಪರಮಶಿವಯ್ಯ ಸಮಿತಿಗೆ ತಜ್ಞರ ನೇಮಕ ಮಾಡಿ ಜಲಾಶಯದ ಕುರಿತಾಗಿ ಹೊಸ ವರದಿ ಸಿದ್ಧಪಡಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ನಿರ್ಧರಿಸಲಾಗಿದೆ. 28ರೊಳಗೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ನಿಗದಿ ಮಾಡುವುದಾಗಿ ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಫೆ.28ರವರೆಗೆ ಮಾತ್ರ ಎಡದಂಡೆ ನಾಲೆಗೆ ನೀರು ಬಿಡಲು ಐಸಿಸಿ ಸಭೆ ನಿರ್ಣಯಿಸಿತ್ತು. ಆದರೆ ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ನಿಯೋಗ ಕೊಂಡೊಯ್ದು ಅವರ ಪಾಲಿನ ನೀರನ್ನು ಎಡದಂಡೆ ನಾಲೆಗೆ ಬಳಸಿಕೊಳ್ಳಲು ಮನವೊಲಿಸುತ್ತೇವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಭರವಸೆ ನೀಡಿದ್ದರಿಂದ ರೈತರು ಲಕ್ಷಾಂತರ ಎಕರೆ ಭತ್ತ ನಾಟಿ ಮಾಡಿದ್ದಾರೆ. ಫೆಬ್ರವರಿ ಅಂತ್ಯದ ನಂತರ ನೀರು ಬರದೇ ಬೆಳೆ ಹಾನಿಯಾದರೆ ಅದಕ್ಕೆ ಶಾಸಕ ಬಾದರ್ಲಿ ಹಾಗೂ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ. ಬೆಳೆ ಹಾನಿ ಬಗ್ಗೆ ಸರ್ವೇ ನಡೆಸಿ ಪರಿಹಾರ ಕೊಡಿಸಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡ ರಾಜಶೇಖರ ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇತರರು ಇದ್ದರು.
ನಿವೃತ್ತ ಅಭಿಯಂತರರಿಂದ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗುವದು. ಫೆ. 11, 12ರೊಳಗೆ ಜನಪ್ರತಿನಿಧಿಗಳು, ರೈತ ಮುಖಂಡರ ಸಭೆ ನಡೆಸಿ ಮನವಿ ಪತ್ರ ಸಿದ್ಧಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದ