Advertisement

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

05:54 PM Sep 18, 2024 | Team Udayavani |

ಹೊಸಪೇಟೆಯ ಸಮೀಪವಿರುವ ಪ್ರಸಿದ್ಧ ತುಂಗಭದ್ರ ಅಣೆಕಟ್ಟು ಎಂದಾಕ್ಷಣ ನೆನಪಿಗೆ ಬರುವುದು ಸುಂದರ ಮನೋಹರ ದೃಶ್ಯ ಮತ್ತು ತುಂಗಭದ್ರಾ ನದಿ ದಂಡೆ ಮೇಲಿರುವ ವಿಶ್ವವಿಖ್ಯಾತ ಹಂಪಿ. ಫೋಟೋಗಳಲ್ಲಿ ಟಿ. ಬಿ. ಡ್ಯಾಮ್‌ ಸುತ್ತಮುತ್ತಲ ರಮ್ಯವಾದ ಪ್ರಕೃತಿಯನ್ನು ಕಂಡಾಗ ಅಲ್ಲಿಗೇ ಭೇಟಿ ನೀಡಿ ನೋಡಬೇಕೆನ್ನುವ ಬಯಕೆಯಾಗುವುದಂತು ಖಂಡಿತ.

Advertisement

ತುಂಗಭದ್ರ ನದಿ ಕರ್ನಾಟಕದ ಜೀವನಾಡಿ ನದಿಗಳಲ್ಲಿ ಒಂದು. ಇದು ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಅನ್ನದ ಬಟ್ಟಲು ಎಂದೇ ಜನಪ್ರಿಯವಾಗಿದೆ, ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶದ ಅನಂತಪುರ, ಕಡಪಾ ಮತ್ತು ಕರ್ನೂಲ್‌ನ ದೀರ್ಘ‌ಕಾಲದ ಬರಪೀಡಿತ ಜಿಲ್ಲೆಗಳ ಜೀವನಾಡಿಯಾಗಿದೆ. ಕೃಷ್ಣಾ ನದಿಯ ಉಪನದಿಗಳಲ್ಲಿ ಒಂದಾದ ಈ ನದಿಗೆ ಹೊಸಪೇಟೆಯ ಹತ್ತಿರದಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ನೀರಾವರಿ, ವಿದ್ಯುತ್ಛಕ್ತಿ ಮತ್ತು ಪ್ರವಾಹ ನಿರ್ವಹಣೆ ಹೀಗೆ ಬಹುಪಯೋಗಿಯಾಗಿ ಕಾರ್ಯನಿರ್ವಹಿಸುವ ಈ ಅಣೆಕಟ್ಟನ್ನು ನೋಡಿದಾಗ ಮನಸ್ಸಿನಲ್ಲಿ ಬಹಳ ಹೆಮ್ಮೆ ಗೌರವ ಮೂಡುತ್ತವೆ. ತುಂಗೆ ಮತ್ತು ಭದ್ರ ನದಿಗಳ ಸಂಗಮದಿಂದ ಉತ್ಪತ್ತಿಯಾಗುವ ಈ ನದಿ ಕರ್ನಾಟಕದ ಜೀವನಾಡಿಯೇ ಸರಿ.

ಸಂಜೆ ಹೊತ್ತಿನಲ್ಲಿ ಅಣೆಕಟ್ಟಿನ ಬಲಬದಿಯಲ್ಲಿರುವ ಬೆಟ್ಟ, ಸುತ್ತಲಿನ ಹಸುರರಾಶಿ ನೋಡಿದರೆ ಮನಸ್ಸಿಗೆ ಮುದ ಸಿಗುವುದಂತು ಖಂಡಿತ. ಇಲ್ಲಿ ಕೈಲಾಸ ಮತ್ತು ವೈಕುಂಠ ಎಂಬ ಎರಡು ಎತ್ತರದ ಜಾಗಗಳಿವೆ. ಅಲ್ಲಿ ನಿಂತು ಅಣೆಕಟ್ಟನ್ನು ವೀಕ್ಷಿಸುವುದು ಒಂದು ಅಪೂರ್ವ ಅನುಭವ. ವಿಶಾಲವಾದ ತುಂಗಭದ್ರೆಯ ಜಲರಾಶಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಅಣೆಕಟ್ಟನ್ನು ನೋಡಿದಾಗ, ಇದರ ಹಿಂದಿರುವ ಸಾವಿರಾರು ಕಾರ್ಮಿಕರು, ಎಂಜಿನಿಯರ್‌ಗಳ ಕುರಿತು ಮನಸ್ಸಿನಲ್ಲಿ ಗೌರವ, ಹೆಮ್ಮೆ ಮೂಡುವುದರಲ್ಲಿ ಆಶ್ಚರ್ಯವೇನಿಲ್ಲ.

ತುಂಗಭದ್ರೆಯ ಒಡಲಲ್ಲಿ ಅಪರೂಪದ ಜೀವ ಸಂಕುಲವಾದ ನೀರುನಾಯಿಗಳ ಸಂಸಾರ ಕಾಣಸಿಗುತ್ತವೆ. ನೀರು ನಾಯಿ ಸಂರಕ್ಷಣೆ ದೃಷ್ಟಿಯಿಂದ  ರಾಜ್ಯ ಸರಕಾರ ಇದನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ.

ಇಳಿ ಸಂಜೆ ಹೊತ್ತಲ್ಲಿ ಈ ಅಣೆಕಟ್ಟಿನ ಸುತ್ತಮುತ್ತ ನಿರ್ಮಿಸಿರುವ ಉದ್ಯಾನವನ, ದೂರದ ಸಂಡೂರಿನ ಗುಡ್ಡಗಳು, ಜುಲೈ ತಿಂಗಳ ಮಳೆಗಾಲದ ಮೋಡಗಳು, ಎಲ್ಲವೂ ಕಣ್ಣಿಗೆ ಮನೋಹರವೆನಿಸುವುದು. ಇಲ್ಲಿನ ಉದ್ಯಾನವನದ ಸಂಗೀತದ ಕಾರಂಜಿಗಳು ಪ್ರೇಕ್ಷಕರಿಗೆ ಮತ್ತೂಂದು ಆಕರ್ಷಣೀಯ ಸ್ಥಳವಾಗಿದೆ. ಸಂಜೆಯ ತಂಗಾಳಿಯಲ್ಲಿ ತೊನೆದಾಡುವ ಸರ್ವೆ ಮರಗಳ ಸುಯ್‌ ಸುಯ್‌ ಸದ್ದು, ಅಲ್ಲಿಯೇ ಗಂಭೀರವಾಗಿ ನಿಂತ ಅಶೋಕ ವೃಕ್ಷಗಳು, ಬೆಳ್ಳನೆಯ ಪುಷ್ಪಗಳಿಂದ ರಂಜಿತವಾದ ದೇವಕಣಿಗೆಲೆ ಮರಗಳು, ಜಲಾಶಯದ ಅಪಾರವಾದ ನೀರ ರಾಶಿಯಲ್ಲಿ ಅಲ್ಲಲ್ಲೇ ತೇಲಾಡುವ ದೋಣಿಗಳು ನೋಡುಗರ ಮನದಲ್ಲಿ ಕವಿತಾ ಭಾವವನ್ನು ಉಕ್ಕಿಸುತ್ತವೆ.

Advertisement

ಮಳೆಗಾಲದಲ್ಲಿ ತುಂಬಿ ಹರಿವ ಈ ನದಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ರೈತರ ಜೀವ ನದಿಯಾಗಿದೆ. ಇಲ್ಲಿನ ಅಣೆಕಟ್ಟಿನ ಬಾಗಿಲುಗಳನ್ನು ಹೆಚ್ಚಾಗಿ ಆ.15ರಂದು ತೆರೆದು ನೀರು ಹೊರ ಬಿಡಲಾಗುತ್ತದೆ, ಇದರ ಸೌಂದರ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಸೇರುತ್ತಾರೆ.

ತುಂಗಭದ್ರ ನದಿ, ಅಣೆಕಟ್ಟಿನ ಸೌಂದರ್ಯವನ್ನು ಎಷ್ಟು ವರ್ಣಿಸಿದರೂ ಸಾಲದು, ನೀವೂ ಒಮೆ ಭೇಟಿ ನೀಡಿ ಪ್ರಕೃತಿಯ ರಮಣೀಯ ದೇಶ್ಯವನ್ನು ಕಣ್ತುಂಬಿಕೊಳ್ಳಿ.

ಸಂತೋಷ ಕುಮಾರ್‌ ಎಚ್‌. ಕೆ.

ಉಪನ್ಯಾಸಕ, ವಿವಿ, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next