ಗಂಗಾವತಿ: ಭಾರೀ ಮಳೆಯ ಪರಿಣಾಮದಿಂದ ತುಂಗಭದ್ರಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು ತುಂಗಭದ್ರಾ ಡ್ಯಾಂ ಒಳಹರಿವು ನಿರಂತರ ಏರಿಕೆಯಾಗಿದೆ. ಸುಮಾರು 2ಲಕ್ಷಕ್ಕೂ ಅಧಿಕ ಪ್ರಮಾಣದ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗಿದ್ದು. ವಿರೂಪಾಪೂರಗಡ್ಡಿ ಸ್ಥಳೀಯ ನಿವಾಸಿಗಳು ಮತ್ತು ಋಷಿಮುಖ ಪರ್ವತ ದೇಗುಲದಲ್ಲಿರುವ ಜನರು ಕಳೆದ 5 ದಿನಗಳಿಂದ ಹೊರ ಜಗತ್ತಿನೊಡನೆ ಸಂಪರ್ಕ ಕಡಿದುಕೊಂಡಿದ್ದಾರೆ.
ಪ್ರವಾಹದ ಸಂದರ್ಭದಲ್ಲಿ ವಿರೂಪಾಪೂರಗಡ್ಡಿಗೆ ಹೋಗಿ ಬರಲು ಸ್ಥಳೀಯ ಹರಿಗೋಲನ್ನು ವ್ಯಾಪಕವಾಗಿ ಬಳಕೆ ಮಾಡುತ್ತಿದ್ದರು. ಹರಿಗೋಲು ಹಾಕದಂತೆ ತಾಲೂಕು ಆಡಳಿತ ಕಟ್ಟಪ್ಪಣೆ ಮಾಡಿದ್ದರಿಂದ ಜನರು ಕಂಗಾಲಾಗಿದ್ದಾರೆ. ಕಳೆದ 5 ದಿನಗಳಿಂದ ವಿರೂಪಾಪೂರಗಡ್ಡಿಗೆ ಹಾಲು ತರಕಾರಿ ಜನರಿಗೆ ಅಗತ್ಯ ಔಷಧಗಳು ದೊರಕುತ್ತಿಲ್ಲ. ವಿರೂಪಾಪೂರಗಡ್ಡಿ ಶಾಲೆ ಬೆಂಚಿಕುಟ್ರಿಗೆ ಸ್ಥಳಾಂತರ ಮಾಡಲಾಗಿದೆ.
ಗಂಗಾವತಿ ಕಂಪ್ಲಿ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಿದ್ದು ಮಂಗಳವಾರ ಬೆಳಿಗ್ಗೆಯಿಂದಲೇ ಬಸ್ ಸೇರಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಬದಲಿ ಮಾರ್ಗವಾಗಿ ಆನೆಗೊಂದಿ ಕಡೆಬಾಗಿಲು ಹೊಸ ಸೇತುವೆಯ ಮೇಲೆ ಎಲ್ಲಾ ವಾಹನಗಳು ತೆರಳುತ್ತಿವೆ.
ತೊಂದರೆ ಆಗದಂತೆ ಕ್ರಮ:
ವಿರೂಪಾಪೂರಗಡ್ಡಿ ಋಷಿಮುಖ ಪರ್ವತ ದೇಗುಲದಲ್ಲಿ ಇರುವವರನ್ನು ಸಂಪರ್ಕಿಸಲಾಗಿದ್ದು ಸದ್ಯ ಯಾವುದೇ ತೊಂದರೆ ಇಲ್ಲ. ಪ್ರವಾಹ ಮುಂದುವರಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಉದಯವಾಣಿ ಗೆ ತಿಳಿಸಿದ್ದಾರೆ.
ಹರಿಗೋಲು ಹಾಕಲು ಅವಕಾಶ:
ಕಳೆದ 5 ದಿನಗಳಿಂದ ನದಿಯಲ್ಲಿ ಪ್ರವಾಹ ಉಂಟಾಟಾಗಿದ್ದು ಬೆಳಿಗ್ಗೆ ಮತ್ತು ಸಂಜೆ ಹರಿಗೋಲು ಹಾಕಲು ಅವಕಾಶ ಕಲ್ಪಿಸಬೇಕು. ತರಕಾರಿ ಹಾಲು ಜನರಿಗೆ ಅಗತ್ಯ ಔಷಧಿ ಪಡೆಯಲು ನೆರವಾಗುತ್ತದೆ ಎಂದು ಗಡ್ಡಿಯಲ್ಲಿರುವ ಸೋಮರಾಜು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.