ಕಂಪ್ಲಿ: ಕಂಪ್ಲಿ-ಕೋಟೆಯ ತುಂಗಭದ್ರಾ ನದಿಗೆ ನಿರ್ಮಿಸಲಾದ ಸೇತುವೆ ಮೇಲೆ ಪ್ರವಾಹದಿಂದ ಸಂಗ್ರಹವಾಗಿದ್ದ ಜಲಸಸ್ಯ, ಮರದ ದಿಮ್ಮಿಗಳು ಸೇರಿದಂತೆ ಭಾರಿ ಪ್ರಮಾಣದ ತ್ಯಾಜ್ಯವನ್ನು ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು.
ಕಳೆದೆರಡು ದಿನಗಳಿಂದಲೂ ಭಾರಿ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸುವಲ್ಲಿ ಪುರಸಭೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ತುಂಗಭದ್ರಾ ಜಲಾಶಯದಿಂದ ನದಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು, ತ್ಯಾಜ್ಯವನ್ನು ತೆರವುಗೊಳಿಸಿದ್ದರಿಂದ ನೀರು ಸರಾಗವಾಗಿ ಹರಿಯುತ್ತಿದೆ. ಸೇತುವೆ ಕೆಳಮಟ್ಟದಲ್ಲಿ ಇರುವುದರಿಂದ ಹಾಗೂ ಸೇತುವೆಯ ಎರಡು ಬದಿಯಲ್ಲಿ ರಕ್ಷಣಾ ಕಂಬಿಗಳನ್ನು ಹಾಕಿರುವುದರಿಂದ ಭಾರಿ ಪ್ರಮಾಣದ ಕಸ ಶೇಖರಣೆ ಆಗುತ್ತಿದೆ.
ನೀರಿನ ರಭಸಕ್ಕೆ ಸೇತುವೆ ಎರಡು ಬದಿಯಲ್ಲಿ ನಿರ್ಮಿಸಲಾದ ರಕ್ಷಣಾ ಕಂಬಿಗಳು ಕಿತ್ತುಹೋಗಿವೆ. ಬುಧವಾರವೂ ಸೇತುವೆಯ ಮೇಲೆ ಸುಮಾರು ಒಂದುವರೆ ಅಡಿಯಷ್ಟು ನೀರು ಹರಿಯುತ್ತಿತ್ತು. ಈ ಭಾಗದ ಜನರು 10 ಕಿ.ಮೀ ದೂರದ ಗಂಗಾವತಿ ನಗರಕ್ಕೆ ತೆರಳಲು 27.ಕಿ.ಮೀ ಕ್ರಮಿಸಬೇಕಿದೆ. ಜೊತೆಗೆ ಬಸ್ ದರ ಕೂಡ 17 ರೂ. ಬದಲಿಗೆ 26 ರೂ.ಗಳನ್ನು ನೀಡಬೇಕಾಗಿದೆ ಎಂದು ಪ್ರಯಾಣಿಕರು ತಿಳಿಸಿದರು.
ಸೇತುವೆ ಕೆಳಗೆ ಹರಿಯುತ್ತಿದೆ ನೀರು: ತುಂಗಭದ್ರಾ ಜಲಾಶಯದಿಂದ ನದಿಗೆ ಬಿಡುವ ನೀರಿನ ಪ್ರಮಾಣವು ಗಣನೀಯವಾಗಿ ತಗ್ಗಿದ್ದು, ಇದುವರಡೆಗೂ ಒಂದು ಲಕ್ಷದ ಮೇಲೆ ಬರುತ್ತಿದ್ದ ನೀರಿನ ಪ್ರಮಾಣ ಇಂದು 70 ಸಾವಿರ ಕ್ಯೂಸೆಕ್ ಗೆ ಇಳಿದಿದೆ. ಕಂಪ್ಲಿ-ಕೋಟೆಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಸಂಪರ್ಕ ಸೇತುವೆಗಿಂತ ಮೂರು ಅಡಿ ಕೆಳಗೆ ಹರಿಯುತ್ತಿದೆ. ಪ್ರವಾಹ ಪರಿಸ್ಥಿತಿ ಬಹುತೇಕ ಕಡಿಮೆಯಾಗಿದೆ. ಸೇತುವೆ ಮೇಲಿನ ಕಸವನ್ನೆಲ್ಲಾ ಪುರಸಭೆಯವರು ತೆರವುಗೊಳಿಸಿದ್ದಾರೆ. ಆದರೆ ಸೇತುವೆಯ ಒಂದು ಭಾಗದ ಬಹುತೇಕ ಕಡೆಗಳಲ್ಲಿ ರಕ್ಷಣಾ ಕಂಬಿಗಳು ಕಿತ್ತುಹೋಗಿವೆ. ಪ್ರವಾಹ ಕಡಿಮೆ ಆಗಿದ್ದರೂ ಸಹಿತ ಇನ್ನು ಸೇತುವೆ ಮೇಲೆ ಸಾರ್ವಜನಿಕರನ್ನಾಗಲಿ, ವಾಹನಗಳನ್ನಾಗಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿಲ್ಲ. ಈ ವರ್ಷ ಸತತವಾಗಿ 9 ದಿನಗಳ ಕಾಲ ಭಾರಿ ಪ್ರಮಾಣದ ನೀರು ಸೇತುವೆ ಮೇಲೆ ಹರಿದಿರುವುದರಿಂದ ಸೇತುವೆಯ ಸಾಮಾರ್ಥ್ಯ ಪರಿಶೀಲಿಸಿದ ನಂತರ ಸಂಚಾರಕ್ಕೆ ಮುಕ್ತಗೊಳಿಸುವ ನಿರೀಕ್ಷೆ ಇದೆ.
ನದಿಯ ಪ್ರವಾಹದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪುರಸಭೆಯವರು ಸೇತುವೆ ಮೇಲಿನ ತ್ಯಾಜ್ಯ ತೆರವುಗೊಳಿಸಿದ್ದಾರೆ. ಆದರೆ ಸೇತುವೆಯ ಭದ್ರತೆ ಮತ್ತು ಸಾಮಾರ್ಥ್ಯದ ಬಗ್ಗೆ ಪರಿಶೀಲಿಸಲು ಗಂಗಾವತಿ ಭಾಗದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ಸೇತುವೆ ಪರಿಶೀಲಿಸಿ ಸಂಚಾರಕ್ಕೆ ಅವಕಾಶಕೊಟ್ಟರೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು.
-ಗೌಸಿಯಾಬೇಗಂ, ತಹಶೀಲ್ದಾರ್.