Advertisement

ಮಳೆಗಾಲದಲ್ಲೂ ಬತ್ತಿದ ತುಂಗಭದ್ರೆ

11:31 AM Jul 13, 2019 | Suhan S |

ಸಿದ್ದಾಪುರ: ಮುಂಗಾರು ಮಳೆ ಪ್ರಾರಂಭವಾಗಿ ಒಂದೂವರೆ ತಿಂಗಳಿದಾರೂ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ತುಂಗಭದ್ರಾ ನದಿ ಪಾತ್ರದ ಗ್ರಾಮಗಳಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ತುಂಗಭದ್ರಾ ನದಿ ಸಂಪೂರ್ಣ ಬತ್ತಿದ್ದು ಜನ ಜಾನುವಾರುಗಳಿಗೆ ಜಲ ಸಂಕಷ್ಟ ಎದುರಾಗಿದೆ.

Advertisement

ನದಿ ಪಾತ್ರದ ರೈತರು ತುಂಗಭದ್ರಾ ಡ್ಯಾಂ ನೀರನ್ನು ನಂಬಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುತ್ತಾರೆ. ಅದರಂತೆ ಈ ಬಾರಿಯು ಮುಂಗಾರು ಹಂಗಾಮಿಗೆ ಭತ್ತ ಬೆಳೆಯಲು ತುಂಗಭದ್ರಾ ನದಿ ನೀರನ್ನು ಆಶ್ರಯಿಸಿ ಭತ್ತದ ಸಸಿಮಡಿ ಹಾಕಿದ್ದರು. ಇಲ್ಲಿಯವರೆಗೂ ಹೇಳಿಕೊಳ್ಳುವಂತಹ ಮಳೆಯಾಗದ ಹಿನ್ನೆಲೆಯಲ್ಲಿ ಬಹುತೇಕ ತುಂಗಭದ್ರಾ ನದಿ ಬರಿದಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹಾಕಿದ್ದ ಸಸಿಮಡಿ ಉಳಿಸಿಕೊಳ್ಳಲು ರೈತರು ನದಿಯಲ್ಲಿ ಅಲ್ಲಲ್ಲಿ ಗುಂಡಿಗಳಲ್ಲಿ ನಿಂತಿರುವ ನೀರನ್ನು ಪೈಪ್‌ ಮೂಲಕ ತಂದ ಸಸಿಮಡಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ.

ಕುಡಿಯುವ ನೀರಿಗೂ ತೊಂದರೆ: ತುಂಗಭದ್ರಾ ನದಿಯಿಂದ ನದಿ ಪಾತ್ರ ಸೇರಿದಂತೆ ಇತರ ನೂರಾರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಮೂಲಕ ಕುಡಿಯುವ ನೀರಿನ್ನು ಒದಗಿಸಲಾಗಿತ್ತು. ಆದರೆ ನದಿ ಬತ್ತಿರುವ ಪರಿಣಾಮ ಬಹುಗ್ರಾಮ ಕುಡಿಯುವ ನೀರಿನ ಸಂಪಿನ ಹತ್ತಿರ ನೀರಿಲ್ಲದ ಕಾರಣ ಕುಡಿಯುವ ನೀರಿನ ಘಟಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕುಡಿಯುವ ನೀರಿನ ತೊಂದರೆ ಎದುರಾಗುವ ಸಾಧ್ಯತೆ ಹೆಚ್ಚಾಗಲಿದೆ ಎನ್ನಲಾಗಿದೆ.

ವಿದ್ಯುತ್‌ ಘಟಕ ಬಂದ್‌: ಬೆನ್ನೂರು ಮತ್ತು ಎಂ.ಸೂಗೂರು ಬಳಿ ನದಿ ನೀರನ್ನು ಬೇಸಿಗೆ ಸಮಯದಲ್ಲಿ ಕುಡಿಯಲು ಮತ್ತು ಕೃಷಿಗೆ ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ರಾಜರ ಆಳ್ವಿಕೆಯಲ್ಲಿ ತಡೆಗೊಡೆ ನಿರ್ಮಿಸಲಾಗಿತ್ತು. ಈ ತಡೆಗೊಡೆ ಹತ್ತಿರ ಕಳೆದ ಕೆಲವರ್ಷಗಳಿಂದ ಭೋರುಕ ಕಿರು ಜಲ ವಿದ್ಯುತ್‌ ಸ್ಥಾಪನೆ ಮಾಡಿ ವಿದ್ಯುತ್‌ ಉತ್ಪಾನೆಯನ್ನು ಸಹ ಮಾಡಲಾಗುತ್ತಿತ್ತು. ಸದ್ಯ ಈ ತಡೆಗೊಡೆ ಹತ್ತಿರ ನೀರಿಲ್ಲದ ಪರಿಣಾಮ ಐದಾರು ದಿನಗಳಿಂದ ಭೋರುಕ ವಿದ್ಯುತ್‌ ಘಟಕದಲ್ಲಿ ವಿದ್ಯುತ್‌ ಉತ್ಪಾದನೆ ಸಂಪೂರ್ಣ ನಿಲ್ಲಿಸಲಾಗಿದೆ. ನದಿ ಬತ್ತಿರುವ ಪರಿಣಾಮ ಹಾವು, ಮೀನು, ಏಡಿ, ಕಪ್ಪೆ, ಆಮೆ ಸೇರಿದಂತೆ ಜಲಚರ ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ.

ಅಕ್ರಮಕ್ಕೆ ರಹದಾರಿ: ತುಂಗಭದ್ರಾ ನದಿ ಸಂಪೂರ್ಣ ಬತ್ತಿರುವ ಪರಿಣಾಮ ನದಿ ಪಾತ್ರದ ಗ್ರಾಮಗಳಾದ ಹೆಬ್ಟಾಳ, ಮುಸ್ಟೂರು, ಕುಂಟೋಜಿ, ಜಮಾಪುರ, ಉಳೇನೂರು, ಬೆನ್ನೂರು, ಶ್ಯಾಲಿಗನೂರು, ಕಕ್ಕರಗೋಳ, ನಂದಿಹಳ್ಳಿಯ ಬಹುತೇಕ ಕಡೆ ಎಲ್ಲೆಂದರಲ್ಲಿ ಅಕ್ರಮ ಮರಳು ಸಾಗಾಟ ನಡೆದಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

Advertisement

ರಸ್ತೆಯಂತಾದ ನದಿ: ನದಿಯಲ್ಲಿ ನೀರು ಇದ್ದಾಗ ಎರಡು ಜಿಲ್ಲೆಗಳ ಸಂಪರ್ಕಕ್ಕೆ ಜನ ತೆಪ್ಪ ಬಳಸುತ್ತಿದ್ದರು. ಆದರೆ ಈಗ ತುಂಗಭದ್ರಾ ನದಿ ಬತ್ತಿರುವ ಪರಿಣಾಮ ಬಳ್ಳಾರಿ, ಕೊಪ್ಪಳ, ರಾಯಚೂರಿನ ಬಹುತೇಕ ನದಿಪಾತ್ರದ ಗ್ರಾಮಗಳ ಜನರು ನದಿಯಲ್ಲಿ ಈ ಕಡೆಯಿಂದ ಆಕಡೆಗೆ ಯಾವ ಸಹಾಯವಿಲ್ಲದೆ ಬೈಕ್‌ ಮೂಲಕ ಓಡಾಡುತ್ತಿದ್ದಾರೆ.

ನದಿಗೆ ನೀರು ಬಿಡಿ: ಮಲೆನಾಡು ಭಾಗದಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಆದರೆ ಜಲಾಶಯದ ಕೆಳಗಡೆ ನದಿ ಸಂಪೂರ್ಣ ಬತ್ತಿರುವ ಪರಿಣಾಮ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದನ್ನು ಗಮನಿಸಿ ನದಿಗೆ ನೀರು ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೇಸಿಗೆಯಲ್ಲಿ ನಮ್ಮ ಹೊಳೆಯಲ್ಲಿ ನೀರು ಇತ್ತು, ಕುಡಿಯೋಕೆ ಯಾವುದೇ ತೊಂದರೆ ಇರಲಿಲ್ಲ. ಈಗ ಮಳೆಗಾಲ ಇದ್ದರೂ ನದಿ ಸಂಪೂರ್ಣ ಬತ್ತಿದೆ. ಜನರಿಗೆ ಮತ್ತು ದನಕರುಗಳಿಗೆ ಕುಡಿಯೋಕಾದರೂ ಡ್ಯಾಮ್‌ನಿಂದ ನದಿಗೆ ನೀರು ಬಿಡಬೇಕು. •ನಾಗರಾಜ ನಂದಿಹಳ್ಳಿ, ಗ್ರಾಮಸ್ಥ
• ಸಿದ್ದನಗೌಡ ಹೊಸಮನಿ
Advertisement

Udayavani is now on Telegram. Click here to join our channel and stay updated with the latest news.

Next