Advertisement

ತುಂಗಭದ್ರಾ ಡ್ಯಾಮ್‌ಗೆ 74ರ ಸಂಭ್ರಮ

11:04 AM Feb 28, 2019 | |

ಗಂಗಾವತಿ: ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ನಿರ್ಮಾಣದ ಶಂಕುಸ್ಥಾಪನೆಗೊಂಡು ಇಂದಿಗೆ 74 ವರ್ಷಗಳಾಗಿದ್ದು, ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತುಂಗಭದ್ರಾ ಜಲಾಶಯದ 74ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

Advertisement

ತುಂಗಭದ್ರಾ ಜಲಾಶಯ ನಿರ್ಮಾಣದ ಹಿಂದೆ ಹಲವಾರು ಘಟನೆಗಳು ಜರುಗಿವೆ. 1891ರಲ್ಲಿ ಭೀಕರ ಬರಗಾಲದಿಂದ ತುಂಗಭದ್ರಾ ನದಿ ಉಗಮ ಸ್ಥಳದಿಂದ ಬಂಗಾಳಕೊಲ್ಲಿಯನ್ನು ಸೇರುವ ತನಕ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನಜಾನುವಾರು ಮರಣ ಹೊಂದಿದ್ದರಿಂದ ಅಂದಿನ ಬ್ರಿಟಿಷ್‌ ಸರಕಾರ ಮತ್ತು ನಿಜಾಮ ಆಡಳಿತ ಬರಗಾಲವನ್ನು ಗಂಭೀರವಾಗಿ ಪರಿಗಣಿಸಿ ತುಂಗಭದ್ರಾ ನದಿಗೆ ಹೊಸಪೇಟೆ ಹತ್ತಿರ ಡ್ಯಾಮ್‌ ನಿರ್ಮಿಸಲು ಯೋಜಿಸಿದ್ದವು. ಕಾರಣಾಂತರಗಳಿಂದ ಜಲಾಶಯ ನಿರ್ಮಾಣಕ್ಕೆ 1945ರ ಫೆಬ್ರುವರಿ 28ರಂದು ಜಲಾಶಯ ನಿರ್ಮಾಣದ ಬಲಗಡೆ ಹೊಸಪೇಟೆ ಹತ್ತಿರ ಮದ್ರಾಸ್‌ ಗೌವರ್ನರ್‌ ಸರ್‌ ಅರ್ಥರ್‌ ಕಾಟನ್‌, ಎಡಭಾಗದ ಮುನಿರಾಬಾದ್‌ನಲ್ಲಿ ನಿಜಾಮ ಆಡಳಿತದ ಯುವರಾಜ ಪ್ರಿನ್ಸ್‌ ಬೇರರ್‌ ಶಂಕುಸ್ಥಾಪನೆ ನೆರವೇರಿಸಿದರು.

ಜಲಾಶಯ ನಿರ್ಮಾಣಕ್ಕೆ 17 ಕೋಟಿ ರೂ. ವೆಚ್ಚವಾಗಿದ್ದು ಬಲ, ಎಡ ಮೇಲ್ಮಟ್ಟದ ಕಾಲುವೆ ನಿರ್ಮಾಣ ಮತ್ತು ಸ್ವಾಧಿಧೀನ ಪಡೆಸಿಕೊಂಡ ಭೂ ಮಾಲೀಕರಿಗೆ ಪರಿಹಾರ, ರಸ್ತೆ ನಿರ್ಮಾಣ, ಅಧಿಕಾರಿಗಳ ವಸತಿಗೃಹ ನಿರ್ಮಾಣ, ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ನಿರ್ಮಾಣ ಸೇರಿ 100 ಕೋಟಿ ರೂ.ಗಳು ಒಟ್ಟು 117 ಕೋಟಿ ರೂ. ಗಳು ಖರ್ಚಾಗಿದೆ. 1953ರಲ್ಲಿ ಜಲಾಶಯವನ್ನು 1630 ನಿರ್ಮಿಸಿ ಉದ್ಘಾಟಿಸಲಾಯಿತು. ನಂತರ 1958ರಲ್ಲಿ ಜಲಾಶಯವನ್ನು 1633 ಅಡಿಗೆ ಹೆಚ್ಚಿಸಿ ಎಡ ಹಾಗೂ ಬಲ ಭಾಗದ ಕಾಲುವೆಗಳಿಗೆ ನೀರು ಹರಿಸಲಾಯಿತು.

ಜಲಾಶಯ ನಿರ್ಮಾಣಕ್ಕೆ ಬಳ್ಳಾರಿ ಕೊಪ್ಪಳ(ಆಗಿನ ರಾಯಚೂರು ಜಿಲ್ಲೆ) ಗದಗ ಜಿಲ್ಲೆಯ ಸುಮಾರು 90ಕ್ಕೂ ಹೆಚ್ಚು ಗ್ರಾಮಗಳು ಮುಳುಗಡೆಯಾಗಿದ್ದು 84 ಸಾವಿರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು 11 ಸಾವಿರ ಕುಟುಂಬಗಳು ಸಂತ್ರಸ್ತಗೊಂಡಿವೆ. ನಿರಾಶ್ರಿತರಾದ ಪ್ರತಿ ಕುಟುಂಬಕ್ಕೆ ಮನೆ ಹಾಗೂ 5 ಎಕರೆ ಭೂಮಿ ಅಲ್ಪ ಪ್ರಮಾಣದ ಹಣದ ಪರಿಹಾರವಾಗಿ ನೀಡಲಾಯಿತು.

ಯಂತ್ರಗಳಿಲ್ಲದೇ ಕಾರ್ಮಿಕರೇ ಕೆಲಸ ಮಾಡುವ ಮೂಲಕ ಮಾನವ ಶಕ್ತಿಯಿಂದ ನಿರ್ಮಾಣಗೊಂಡ ಪ್ರಥಮ ಡ್ಯಾಮ್‌ ಎನ್ನುವ ಹೆಗ್ಗಳಿಕೆ ತುಂಗಭದ್ರಾ ಜಲಾಶಯಕ್ಕಿದೆ. ಜಲಾಶಯ ನಿರ್ಮಾಣದ ಕಾರ್ಯದಲ್ಲಿ ಸ್ಥಳೀಯರು ತೆಲಂಗಾಣ, ತಮಿಳುನಾಡು, ಕೇರಳದ ಮಲಬಾರ್‌ನಿಂದ ಕೂಲಿಕಾರ್ಮಿಕರು ಆಗಮಿಸಿದ್ದರು. ಒಂದು ಲೆಕ್ಕದ ಪ್ರಕಾರ ಡ್ಯಾಮ್‌ ನಿರ್ಮಾಣಕ್ಕೆ 12 ಸಾವಿರ ಕಾಲುವೆ ಹಾಗೂ ಇತರೆ ಕಟ್ಟಡ ನಿರ್ಮಾಣಕ್ಕೆ 38 ಸಾವಿರ ಕಾರ್ಮಿಕರು
ಕೆಲಸ ಮಾಡಿದ್ದಾರೆ.

Advertisement

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸ್ತುತ 12.05 ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ಬೇಸಿಗೆ ಮತ್ತು ಮುಂಗಾರು ಹಂಗಾಮಿನಲ್ಲಿ ಎರಡು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಜಲಾನಯನ ಪ್ರದೇಶದಲ್ಲಿ ಕಡಿಮೆ ಮಳೆಯಾಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು, ರೈತರು ಒಂದೇ ಬೆಳೆ ಬೆಳೆಯುವ ಸ್ಥಿತಿಯುಂಟಾಗಿದೆ.

ಇತ್ತೀಚಿಗೆ ಜಲಾಶಯದ ನೀರನ್ನು ಅವೈಜ್ಞಾನಿಕ ನಿರ್ವಾಹಣೆ ಕೈಗಾರಿಕೆ ಮತ್ತು ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಿರುವುದರಿಂದ ಕೃಷಿಗೆ ನೀರಿನ ಕೊರತೆಯಾಗುತ್ತಿದೆ. ಜಲಾನಯನ ಪ್ರದೇಶದಲ್ಲಿ ಅವೈಜ್ಞಾನಿಕ ಗಣಿಗಾರಿಕೆಯಿಂದಾಗಿ 33 ಟಿಎಂಸಿ ಅಡಿಯಷ್ಟು ಹೂಳು ಸಂಗ್ರಹವಾಗಿದ್ದು, ಸದ್ಯ ಡ್ಯಾಮ್‌ನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 97 ಟಿಎಂಸಿ ಅಡಿ ಮಾತ್ರ. ಜಲಾಶಯದ ಮೇಲ್ಭಾಗದಲ್ಲಿ ಸರಕಾರ ನಿರ್ಮಿಸಿದ ಅವೈಜ್ಞಾನಿಕ ನೀರಾವರಿ ಯೋಜನೆಗಳಿಂದಲೂ ಟಿಬಿ ಡ್ಯಾಮ್‌ಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗುತ್ತಿದೆ.

ಸದ್ಯ ಸರಿಯಾದ ನಿರ್ವಹಣೆ ಇಲ್ಲದೇ ನೀರು ಪೋಲಾಗುತ್ತಿದ್ದು, ನಾಲ್ಕೈದು ವರ್ಷಗಳಿಂದ ಒಂದೇ ಬೆಳೆಗೆ ನೀರು ದೊರಕುತ್ತಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರಕಾರ ಹೂಳೆತ್ತುವ ಅಥವಾ ಪರ್ಯಾಯ ಸಮನಾಂತರ ಜಲಾಶಯ ನಿರ್ಮಿಸುವ ಮಾತನಾಡುತ್ತಿದ್ದು ಕಾರ್ಯಗತವಾಗುತ್ತಿಲ್ಲ. ಡ್ಯಾಂ ನಿರ್ಮಾಣಗೊಂಡು 74 ವರ್ಷಗಳು ಸಂದಿರುವ ಸಂದರ್ಭದಲ್ಲಿ ತುಂಗಭದ್ರಾ ಉಳಿಸಿ ಆಂದೋಲನ ಸಮಿತಿ, ರೈತ ಸಂಘಗಳು, ಕೃಷಿಕೂಲಿಕಾರರ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ಡ್ಯಾಮ್‌ ನ ವರ್ಷಾಚರಣೆ ನೆಪದಲ್ಲಿ ಡ್ಯಾಮ್‌ನ ಕೆಲ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಮಾಡುತ್ತಿವೆ.

117 ಕೋಟಿ ರೂ. ವೆಚ್ಚದಲ್ಲಿ ಪ್ರಾಮಾಣಿಕವಾಗಿ ನಿರ್ಮಿಸಿದ ಡ್ಯಾಮ್‌ನ್ನು 74 ವರ್ಷಗಳಿಂದ ಎಲ್ಲಾ ಸರಕಾರಗಳು ನಿರ್ಲಕ್ಷ್ಯ ಮಾಡಿವೆ. ಕಾಲುವೆ ದುರಸ್ತಿ ನೆಪದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ ಜನಪ್ರತಿನಿಧಿಗಳು ಡ್ಯಾಮ್‌ನ ಮಹತ್ವ ತಿಳಿಯದೇ ನಿರ್ಲಕ್ಷ್ಯ ಮಾಡಿದ್ದರಿಂದ ರೈತರಿಗೆ ನೀರಿನ ಕೊರತೆಯಾಗಿದೆ. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಮತ್ತು ಡ್ಯಾಮ್‌ ನಿರ್ಮಾಣದಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು ಸ್ಮರಿಸಲು 74ನೇ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
. ಜೆ. ಭಾರದ್ವಾಜ್‌, ತುಂಗಭದ್ರಾ
ಉಳಿಸಿ ಆಂದೋಲನ ಗೌರವಾಧ್ಯಕ್ಷ್ಯ 

„ಕೆ. ನಿಂಗಜ್ಜ 

Advertisement

Udayavani is now on Telegram. Click here to join our channel and stay updated with the latest news.

Next