Advertisement

TungaBhadra ಡ್ಯಾಂ ದುರಸ್ತಿಗೆ 65 ಟಿಎಂಸಿ ನೀರು ಖಾಲಿ ಮಾಡಬೇಕು !

12:25 AM Aug 12, 2024 | Team Udayavani |

ಕೊಪ್ಪಳ: ಸದ್ಯ ತುಂಗಭದ್ರಾ ಡ್ಯಾಂನಲ್ಲಿ 100 ಟಿಎಂಸಿ ನೀರು ಸಂಗ್ರಹವಾಗಿದ್ದು, ನೀರಿನ ರಭಸ ಹೆಚ್ಚಾಗಿದೆ. ಇಂಥ ಸ್ಥಿತಿಯಲ್ಲಿ ಮುರಿದ ಸ್ಥಳದಲ್ಲಿ ಹೊಸ ಗೇಟ್‌ ಅಳವಡಿಕೆ ಅಸಾಧ್ಯ. ಎಂತಹದೇ ತಂತ್ರಜ್ಞಾನ ಬಳಕೆ ಮಾಡಿಕೊಂಡರೂ ಇದು ಸಾಧ್ಯವಾಗದ ಕೆಲಸ. ಕನಿಷ್ಠ 60-65 ಟಿಎಂಸಿ ನೀರು ನದಿಗೆ ಹರಿಬಿಟ್ಟ ಬಳಿಕ ಅಂದರೆ ಸುಮಾರು 20 ಅಡಿ ಆಳದಷ್ಟು ನೀರು ಖಾಲಿ ಮಾಡಿದ ಬಳಿಕ ನೀರಿನ ಒತ್ತಡ ಕಡಿಮೆ ಆಗುತ್ತದೆ. ಆಗ ಹೊಸ ಗೇಟ್‌ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.

Advertisement

ಒಂದು ಗೇಟ್‌ನ ಗಾತ್ರ ಎಷ್ಟು?
ಜಲಾಶಯದಲ್ಲಿ ನೀರು ಸಂಗ್ರಹ ಸಾಮರ್ಥ್ಯದ ಆಧಾರದಲ್ಲಿ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಟಿಬಿ ಡ್ಯಾಂ 133 ಟಿಎಂಸಿ ಸಂಗ್ರಹ ಸಾಮರ್ಥ್ಯ ಇರುವುದರಿಂದ 33 ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸಲಾಗಿದೆ. ಒಂದು ಗೇಟ್‌ 24 ಅಡಿ ಅಗಲ, 21 ಅಡಿ ಎತ್ತರ ಹಾಗೂ 20 ಮಿ.ಮೀ. ದಪ್ಪವಿದೆ. ಇದನ್ನು ಎರಡು ಬೃಹತ್‌ ಕ್ರೇನ್‌ಗಳ ಮೂಲಕ ಅಳವಡಿಕೆ ಮಾಡಬೇಕಾಗುತ್ತದೆ.

ಏನಿದು ಕ್ರಸ್ಟ್‌ಗೇಟ್‌?
ತುಂಗಭದ್ರಾ ಜಲಾಶಯಕ್ಕೆ 33 ಕ್ರಸ್ಟ್‌ಗೇಟ್‌ ಅಳವಡಿಸಲಾಗಿದೆ. ಜಲಾಶಯ ಭರ್ತಿಯಾದ ಬಳಿಕ ಹೆಚ್ಚುವರಿ ನೀರನ್ನು ಈ ಕ್ರಸ್ಟ್‌ಗೇಟ್‌ಗಳನ್ನು ಮೇಲಕ್ಕೆತ್ತಿ ನದಿ ಪಾತ್ರಕ್ಕೆ ಹರಿ ಬಿಡಲಾಗುತ್ತದೆ. ಇದರಿಂದ ಡ್ಯಾಂಗೆ ಯಾವುದೇ ಅಪಾಯವೂ ಉಂಟಾಗುವುದಿಲ್ಲ. ಈ ಕ್ರಸ್ಟ್‌ಗೇಟ್‌ಗಳನ್ನು ಎಲೆಕ್ಟ್ರಾನಿಕ್‌ ಯೂನಿಟ್‌ನಡಿ ಹೈಡ್ರೋಲಿಕ್‌ ತಂತ್ರಜ್ಞಾನದ ಸಹಾಯದಿಂದ ವಿದ್ಯುತ್‌ ಯಂತ್ರಗಳ ಮೂಲಕ ಎತ್ತುವುದು ಹಾಗೂ ಇಳಿಸಲಾಗುತ್ತದೆ. ಬೇರೆ ಡ್ಯಾಂನಲ್ಲಿ ಪರ್ಯಾಯ ಗೇಟ್‌ ಆಪರೇಟಿಂಗ್‌ ಸಿಸ್ಟಮ್‌ ಇದೆ. ಆದರೆ ಇಲ್ಲಿ ಹೈಡ್ರೊಲಿಕ್‌ ಮಷಿನ್‌ನಡಿ ಗೇಟ್‌ಗಳ ಎತ್ತುವಿಕೆ, ಇಳಿಸುವಿಕೆ ಬಿಟ್ಟು ಪರ್ಯಾಯ ವ್ಯವಸ್ಥೆಯಿಲ್ಲ.


12 ಲಕ್ಷ ಎಕರೆ ರೈತರಿಗೆ ನೀರು

ತುಂಗಭದ್ರಾ ಜಲಾಶಯ 12 ಲಕ್ಷ ಎಕರೆ ರೈತರಿಗೆ ನೀರು ಒದಗಿಸುತ್ತದೆ. ಕಳೆದ 5 ದಶಕಗಳಿಂದ ಈ ಪ್ರದೇಶದಲ್ಲಿ ಮುಂಗಾರು ಮತ್ತು ಬೇಸಗೆ ಹಂಗಾಮಿನಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ. ಇದರಿಂದ ಪ್ರತಿ ಬೆಳೆಗೂ ಕನಿಷ್ಠ 35-40 ಟಿಎಂಸಿ ನೀರು ಬೇಕಾಗುತ್ತದೆ.

7 ದಶಕಗಳ ಹಿಂದೆ ನಿರ್ಮಾಣ
ಈ ಜಲಾಶಯವನ್ನು 1955ರಲ್ಲಿ ಸುಮಾರು 125 ಕೋಟಿ ರೂ. ವೆಚ್ಚದಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಬರಗಾಲ ನೀಗಿಸಲು 7 ದಶಕಗಳ ಹಿಂದೆ ನಿರ್ಮಿಸಲಾಗಿದೆ. ನೀರು ಹಂಚಿಕೆ, ಡ್ಯಾಂ ನಿರ್ವಹಣೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರದ ನೇತೃತ್ವದಲ್ಲಿರುವ ಟಿಬಿ ಬೋರ್ಡ್‌ಗೆ ವಹಿಸಲಾಗಿದೆ.

Advertisement

ಟಿಬಿ ಡ್ಯಾಂ ನಿರ್ಮಿಸಿದ್ದು ಯಾರು?
ಬಯಲು ಸೀಮೆಯ ಈ ಭಾಗದಲ್ಲಿ ಭೀಕರ ಬರದ ಪರಿಸ್ಥಿತಿ ಗಮನಿಸಿದ ಹೈದರಾಬಾದ್‌ ನಿಜಾಮ ಸರ್ಕಾರ ಹಾಗೂ ಮದ್ರಾಸ್‌ ಸರ್ಕಾರ ತುಂಗಭದ್ರಾ ಡ್ಯಾಂ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1948ರಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

ಅಂದು ನಿಜಾಮ್‌ ಸರ್ಕಾರ ಹಾಗೂ ಮದ್ರಾಸ್‌ ಸರ್ಕಾರದ ಜಂಟಿ ಸಹಯೋಗದಲ್ಲಿ ಅನುದಾನ ವಿನಿಯೋಗ ಮಾಡಿತ್ತು. 1955ರಲ್ಲಿ ಡ್ಯಾಂಗಳಿಗೆ 33 ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಮಾಡಲಾಗಿತ್ತು. 1955ರಲ್ಲಿ ಡ್ಯಾಂನ ಕಾರ್ಯ ಮುಕ್ತಾಯವಾಗಿದೆ. ಅಂದು ಮದ್ರಾಸ್‌ ಸರ್ಕಾರದ ತಿರುಮಲ ಅಯ್ಯಂಗಾರ್‌ ಎನ್ನುವ ಚೀಪ್‌ ಎಂಜಿನಿಯರ್‌ ಡ್ಯಾಂ ಯೋಜನೆ ರೂಪಿಸಿ, ನಿರ್ಮಾಣದ ಹೊಣೆ ಹೊತ್ತು ಪೂರ್ಣಗೊಳಿಸಿದ್ದರು.

10 ವರ್ಷ, 125 ಕೋಟಿ ವೆಚ್ಚದಲ್ಲಿ ನಿರ್ಮಾಣ!
ತುಂಗಭದ್ರಾ ಡ್ಯಾಂ 1945ರಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿ, 1955ರಲ್ಲಿ ಪೂರ್ಣಗೊಂಡಿದೆ. ಆಗ ತುಂಗಭದ್ರಾ ಜಲಾಶಯದ ನಿರ್ಮಾಣದ ವೆಚ್ಚ ಕೇವಲ 17 ಕೋಟಿ ರೂ. ವೆಚ್ಚವಾಗಿದೆ. ಆಗ ಎಡದಂಡೆ ಮುಖ್ಯ ಕಾಲುವೆಗೆ 50 ಕೋಟಿ, ಬಲದಂಡೆ ಮುಖ್ಯ ಕಾಲುವೆಗೆ 16.27 ಕೋಟಿ ಹೀಗೆ ವಿವಿಧ ಕಾಲುವೆಗಳು, 33 ಕ್ರಸ್ಟ್‌ಗೇಟ್‌ಗೆ 13.29 ಕೋಟಿ ಸೇರಿದಂತೆ ಒಟ್ಟಾರೆ ಡ್ಯಾಂನ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಕೇವಲ 125 ಕೋಟಿ ರೂ. ಮಾತ್ರ ವೆಚ್ಚವಾಗಿದ್ದು ಡ್ಯಾಂ ನೀರಾವರಿ ಇಲಾಖೆಯ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ಡ್ಯಾಂ ಅಚ್ಚುಕಟ್ಟು ಪ್ರದೇಶ ದ್ವಿಗುಣ
ತುಂಗಭದ್ರಾ ಡ್ಯಾಂನ ಆರಂಭಿಕ ಅಚ್ಚುಕಟ್ಟು ಪ್ರದೇಶ ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ 6 ಲಕ್ಷ ಎಕರೆ ಪ್ರದೇಶವನ್ನು ಹೊಂದಿತ್ತು. ಆದರೆ ಕಳೆದ 3 ದಶಕಗಳಿಂದ ಡ್ಯಾಂನ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತನಾಟಿಯ ಪ್ರಮಾಣ ಹೆಚ್ಚಾಗಿ ಅನಧಿಕೃತ ನೀರಾವರಿ ಪ್ರದೇಶವೂ ಹೆಚ್ಚಾಗಿದೆ. ದಾಖಲೆಗಳ ಪ್ರಕಾರ ಆರಂಭದಲ್ಲಿ ಡ್ಯಾಂನ ಅಚ್ಚುಕಟ್ಟು 5,35,281 ಹೆಕ್ಟೇರ್‌ ಪ್ರದೇಶದಷ್ಟಿದೆ. ಇದರಲ್ಲಿ ಕರ್ನಾಟಕದ ಪಾಲು 3,65,811 ಲಕ್ಷ ಹೆಕ್ಟೇರ್‌ ಪ್ರದೇಶಷ್ಟು ವಿಸ್ತಾರವನ್ನು ಹೊಂದಿದೆ. ಅದು ಈಗ ದುಪ್ಪಟ್ಟಾಗಿ ಮಾರ್ಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next