ತುಮಕೂರು : ವಿಶ್ವವಿದ್ಯಾಲಯಗಳು ಮತ್ತು ಅದರ ಸಂಯೋಜಿತ ಕಾಲೇಜುಗಳು ಒಂದು ಕಾಲೇಜು, ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗಬೇಕು. ಶಾಲಾ ಕಾಲೇಜುಗಳಲ್ಲಿ ಡ್ರಾಪ್ ಔಟ್ ಸಮಸ್ಯೆಯನ್ನು ತಡೆಯಲು ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದ ಡಾ.ಶ್ರೀಶಿವಕುಮಾರ ಸ್ವಾಮಿ ಸಭಾಂಗಣದಲ್ಲಿ ಸೋಮವಾರ ನಡೆದ 16ನೇ ಘಟಿಕೋತ್ಸವದಲ್ಲಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕಾದರೆ, ಮೊದಲಿಗೆ ಡ್ರಾಪ್ ಔಟ್ ಸಮಸ್ಯೆ ಬಗೆಹರಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸಲು ಪ್ರಯತ್ನಿಸಬೇಕು. ಉತ್ತಮ ಶಿಕ್ಷಣ ಪಡೆಯಲು ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ. ಅನಾದಿ ಕಾಲದಿಂದಲೂ ವಸುದೈವ ಕುಟುಂಬಕಂ ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ. ನಾವು ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವಶಾಂತಿಗಾಗಿ ಶ್ರಮಿಸುತ್ತೇವೆ. ಸಮಾನತೆ ಮತ್ತು ಸಾಮರಸ್ಯವನ್ನು ಶಿಕ್ಷಣ ನೀಡುತ್ತದೆ ಎಂದು ಹೇಳಿದರು.
ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಾಂತಿಶ್ರೀ ಧೂಳಿಪುಡಿ ಪಂಡಿತ್ ಮಾತನಾಡಿ, ಜೆಎನ್‌ಯುನಲ್ಲಿ ಕನ್ನಡ ಪೀಠ ಸ್ಥಾಪಿಸಿದ್ದು, ಕರ್ನಾಟಕದ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೀಠ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಲಾಧಿಪತಿಗಳೂ ಆದ ರಾಜ್ಯಪಾಲರು, ಕನ್ನಡದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕನ್ನಡ ಪೀಠವನ್ನು ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಈ ಸಂಬಂಧ ಉನ್ನತ ಶಿಕ್ಷಣ ಸಚಿವರು, ಸರ್ಕಾರ ಕ್ರಮವಹಿಸಲಿದೆ ಎಂದರು.
ಘಟಿಕೋತ್ಸವದಲ್ಲಿ ರಾಜ್ಯಾಪಾಲರು ಸಮಾಜ ಸೇವಕ ಆರ್.ಎಲ್.ರಮೇಶ್ ಬಾಬು ಮತ್ತು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕುಲಸಚಿವರಾದ ನಹೀದಾ ಜಮ್ ಜಮ್, ಪೊ›.ಕೆ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.
10273 ಮಂದಿಗೆ ಪದವಿ ಪ್ರಧಾನ: ಘಟಿಕೋತ್ಸವದಲ್ಲಿ ಸ್ನಾತಕ 8756 ಮತ್ತು ಸ್ನಾತಕೋತ್ತರ 1517 ವಿದ್ಯಾರ್ಥಿಗಳು ಸೇರಿ ಒಟ್ಟು 10273 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಒಟ್ಟು 80 ವಿದ್ಯಾರ್ಥಿಗಳಿಗೆ 90 ಬಂಗಾರದ ಪದಕ ಹಾಗೂ 6 ನಗದು ಬಹುಮಾನ ಪ್ರದಾನ ಮಾಡಲಾಯಿತು. ಕಲಾನಿಕಾಯದ 44 ಮಂದಿ, ವಾಣಿಜ್ಯ ಹಾಗೂ ನಿರ್ವಹಣ ನಿಕಾಯದ 18 ಮಂದಿ ವಿಜ್ಞಾನ ತಂತ್ರಜ್ಞಾನ ನಿಕಾಯದ 16 ಮಂದಿ ಸೇರಿ ಒಟ್ಟು 78 ಮಂದಿಗೆ ಪಿಎಚ್‌ಡಿ ಪದವಿ ಪದವಿ ಪ್ರದಾನ ಮಾಡಲಾಯಿತು.