Advertisement

JDS: ಗ್ರಾಮಾಂತರ ಕೇತ್ರದಲ್ಲಿ ಯಾರು ಹೊರುತ್ತಾರೆ ತೆನೆ?

04:27 PM Dec 11, 2023 | Team Udayavani |

ತುಮಕೂರು: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಂತೆ ರಾಜಕೀಯದಲ್ಲಿ ಏರುಪೇರುಗಳು ಆಗುತ್ತಿದ್ದು, ಕಲ್ಪತರು ನಾಡಿನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಜೆಡಿಎಸ್‌ ಕಟ್ಟಾಳಾಗಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ತೆನೆ ಇಳಿಸಿ, ಕೈ ಹಿಡಿದ ಹಿನ್ನೆಲೆ ಗ್ರಾಮಾಂತರದಲ್ಲಿ ಈಗ ಮತ್ತೆ ತೆನೆ ಹೊರಲು ಮುಖಂಡರ ಹುಡುಕಾಟ ಪ್ರಾರಂಭವಾಗಿದೆ.

Advertisement

ಮೊದಲಿನಿಂದಲೂ ತುಮಕೂರು ಗ್ರಾಮಾಂತರ ಕ್ಷೇತ್ರ ಜೆಡಿಎಸ್‌ ಪಕ್ಷದ ಭದ್ರ ಕೋಟೆಯಾಗಿತ್ತು. ಇಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆ ಇತ್ತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರ ಮೇಲೆ ಅಪಾರ ವಿಶ್ವಾಸ ಇಟ್ಟಿರುವ ಕಾರ್ಯಕರ್ತರ ಪಡೆ ಗ್ರಾಮಾಂತರ ಕ್ಷೇತ್ರದಲ್ಲಿದ್ದು, ಈಗ ಪಕ್ಷದ ರಥವನ್ನು ಮುನ್ನೆಡೆಸುತ್ತಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ಅವರು ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರಿದ ಹಿನ್ನಲೆ ಜೆಡಿಎಸ್‌ ಈಗ ನಾಯಕ ನಿಲ್ಲದ ಮನೆಯಾಗಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆ: ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಸಂಘಟಿಸಿ, ಇಡೀ ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದ ಪ್ರಭಾವಿ ನಾಯಕ ಎಂದೇ ಬಿಂಬಿತವಾಗಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ಅವರು ಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಬೇಸರಗೊಂಡು ಪಕ್ಷ ತೊರೆದಿರುವ ಹಿನ್ನೆಲೆ ಮತ್ತೆ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಸಂಘಟನೆ ಮಾಡಬೇಕು ಎಂದು ಜಿಲ್ಲಾ ಜೆಡಿಎಸ್‌ ಮುಖಂಡರು ಮುಂದಾಗಿದ್ದಾರೆ.

ಸಂಘಟಿಸುವ ಮುಖಂಡನ ಹುಡುಕಾಟ: ಮಾಜಿ ಶಾಸಕ ಡಿ.ಸಿ.ಗೌರಿಶಂಕರ್‌ ಕಾಂಗ್ರೆಸ್‌ ಪಕ್ಷ ಸೇರುತ್ತಿದ್ದಂತೆ ಜೆಡಿಎಸ್‌ನಲ್ಲಿ ಪ್ರಬಲ ನಾಯಕನ ಕೊರತೆಯಾದ ಹಿನ್ನೆಲೆಯಲ್ಲಿ ಅವರ ಜೊತೆಯಲ್ಲಿ ಹಲವು ಜೆಡಿಎಸ್‌ ಮುಖಂಡರು ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದಾರೆ. ಹೀಗಾಗಿ, ಎಚ್ಚೆತ್ತುಕೊಂಡಿರುವ ಜೆಡಿಎಸ್‌ ಮುಖಂಡರು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದು, ಮುಂದೆ ಬರಲಿರುವ ಜಿಪಂ, ತಾಪಂಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಂಘಟನಾ ಚತುರನಾಗಿ, ಡಿ.ಸಿ.ಗೌರಿಶಂಕರ್‌ ಅವರಿಗೆ ಸವಾಲಾಗಿ ಪಕ್ಷ ಸಂಘಟನೆ ಮಾಡುವ ಮುಖಂಡನ ಹುಡುಕಾಟ ನಡೆದಿದ್ದು, ಈಗ ಪಕ್ಷದಲ್ಲಿರುವ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲಾ ಜೆಡಿಎಸ್‌ ಪಕ್ಷವನ್ನು ಮುನ್ನೆಡೆಯಲು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಗ್ರಾಮಾಂತರ ಕ್ಷೇತ್ರದಲ್ಲಿ ಹಲವು ಯುವ ಜೆಡಿಎಸ್‌ ಮುಖಂಡರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೆಬ್ಬೂರಿನ ದೀಪು ಬೋರೇಗೌಡ, ನಾಗವಲ್ಲಿಯ ರಾಮಣ್ಣ, ನಿಡುವಳಲು ಕೃಷ್ಣಪ್ಪ, ಸುವರ್ಣಗಿರಿ ಕುಮಾರ್‌, ಶಕುಂತಲ, ಶಶಿಕಲಾ, ಸುರೇಶ್‌, ಅಪ್ಪೇಗೌಡ, ಎ.ಸು.ವೆಂಕಟೇಶ್‌, ಕೆ.ಬಿ.ರಾಜಣ್ಣ ಸೇರಿದಂತೆ ಹಲವು ಮುಖಂಡರು ಮುಂದೆ ಜೆಡಿಎಸ್‌ ಪಕ್ಷವನ್ನು ಸಂಘಟನೆಗೆ ಮುಂದಾಗಿದ್ದು, ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಪ್ರಬಲ ನಾಯಕನ ಆಯ್ಕೆ ಆಗುವವರೆಗೆ ಪಕ್ಷಸಂಘಟನೆಗೆ ಸಾಮೂಹಿಕ ನಾಯಕತ್ವ ವಹಿಸಲು ಎಲ್ಲರೂ ಮುಂದಾಗಿದ್ದಾರೆ.

ಸ್ಥಳೀಯರಿಗೆ ಆದ್ಯತೆ ನೀಡಿ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಸಂಘಟನೆಗೆ ಪ್ರಬಲ ನಾಯಕನನ್ನು ಆಯ್ಕೆ ಮಾಡಲು ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಮುಂದಾಗಿದ್ದಾರೆ. ಅದಕ್ಕಾಗಿ ಹೆಬ್ಬೂರಿನಲ್ಲಿ ಬೃಹತ್‌ ಜೆಡಿಎಸ್‌ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟನೆ ಮಾಡಿದ್ದ ಮಾಜಿ ಶಾಸಕ ಎಚ್‌ .ನಿಂಗಪ್ಪ ಅವರನ್ನು ಪಕ್ಷಕ್ಕೆ ತರಬೇಕು ಎನ್ನುವ ಆಲೋಚನೆ ನಡೆದಿದೆ ಎನ್ನಲಾಗಿದೆ. ಉಳಿದಂತೆ ಬೆಂಗಳೂರಿನಿಂದ ಪ್ರಭಾವಿ ಮುಖಂಡರೊಬ್ಬರು ಗ್ರಾಮಾಂತರಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ, ಜೆಡಿಎಸ್‌ ಕಾರ್ಯಕರ್ತರು ಹೊರಗಡೆಯವರಿಗೆ ಅವಕಾಶ ನೀಡಬೇಡಿ, ಸ್ಥಳೀಯರಿಗೆ ಆದ್ಯತೆ ನೀಡಬೇಕು ಎನ್ನುವ ಒತ್ತಾಯ ಮಾಡುತ್ತಿದ್ದಾರೆ.

Advertisement

ಎಚ್‌ಡಿಕೆ ನೇತೃತ್ವದಲ್ಲಿ ಜೆಡಿಎಸ್‌ ಸಮಾವೇಶ: ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷವನ್ನು ಸಂಘಟನೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಡಿ.ಸಿ.ಗೌರಿಶಂಕರ್‌ ಅವರು ನಮ್ಮ ಪಕ್ಷವನ್ನು ಬಿಟ್ಟು ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದರೂ, ನಮ್ಮ ಪಕ್ಷದ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ಬಿಟ್ಟಿಲ್ಲ. ಈಗ ಪಕ್ಷವನ್ನು ಸಾಮೂಹಿಕ ನಾಯಕತ್ವದಲ್ಲಿ ಸಂಘಟನೆ ಮಾಡಲಾಗುತ್ತಿದೆ. ಡಿ.23ರಂದು ಹೆಬ್ಬೂರಿನಲ್ಲಿ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಮಾಜಿ ಮುಖ್ಯಮಂತಿ ಎಚ್‌.ಡಿ.ಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆಯಲಿದೆ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಆಂಜನಪ್ಪ ತಿಳಿಸಿದ್ದಾರೆ.

ಡಿ.ಸಿ.ಗೌರಿಶಂಕರ್‌ ಕಾಂಗ್ರೆಸ್‌ ಸೇರ್ಪಡೆ ನಂತರ ಕೆಲ ಮುಖಂಡರು ಅವರನ್ನು ಹಿಂಬಾಲಿಸಿದ್ದಾರೆ. ಆದರೆ, ಕಾರ್ಯಕರ್ತರು ಪಕ್ಷ ತೊರೆದಿಲ್ಲ. ಜೆಡಿಎಸ್‌ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಹೀಗಾಗಿ, ಅಳಿದುಳಿದ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷ ಸದೃಢಗೊಳಿಸುವ ನಿಟ್ಟಿನಲ್ಲಿ ಗ್ರಾಮಾಂತರದ ಹೆಬ್ಬೂರು,ನಾಗವಲ್ಲಿ, ಊರುಕೆರೆ, ಉರ್ಡಿಗೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆ ನಡೆಸಲಾಗುವುದು. – ಡಿ.ನಾಗರಾಜಯ್ಯ, ಮಾಜಿ ಸಚಿವ

ಗ್ರಾಮಾಂತರದಲ್ಲಿ ಪಕ್ಷ ಕಟ್ಟಬೇಕು ಎಂಬ ಉತ್ಸಾಹ ಕಾರ್ಯಕರ್ತರಲ್ಲಿದೆ. ಮಾಜಿ ಸಚಿವರಾಗಿದ್ದ ಸಿ.ಚನ್ನಿಗಪ್ಪ ಅವರು ಪಕ್ಷಕ್ಕಾಗಿ ದುಡಿದಿದ್ದಾರೆ. ಎಚ್‌. ಡಿದೇವೇಗೌಡರ ಮತ್ತು ಚನ್ನಿಗಪ್ಪ ಅವರದ್ದು ಅಪ್ಪ ಮಕ್ಕಳ ಸಂಬಂಧ. ಡಿ.ಸಿ.ಗೌರಿಶಂಕರ್‌ಗೆ ಶೀಘ್ರದಲ್ಲೇ ಸತ್ಯದ ಅರಿವಾಗಲಿದೆ. ಪಕ್ಷ ತಾಯಿ ಇದ್ದಂತೆ. ಅದನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. – ಆರ್‌.ಸಿ.ಆಂಜನಪ್ಪ, ಜಿಲ್ಲಾಧ್ಯಕ್ಷ, ಜೆಡಿಎಸ್‌

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷ ಸಂಘಟನೆಗೆ ಎಲ್ಲಾ ಕಾರ್ಯಕರ್ತರು ಆದ್ಯತೆ ನೀಡಿದ್ದೇವೆ. ಪಕ್ಷದ ನಾಯಕತ್ವ ವಹಿಸಲು ಹೊರಗಡೆ ಯ ಮುಖಂಡರು ಬೇಡ. ನಮ್ಮ ಕ್ಷೇತ್ರದ ಮುಖಂಡರನ್ನು ಪಕ್ಷದ ನಾಯಕನನ್ನಾಗಿ ಮಾಡಬೇಕು ಎನ್ನುವುದು ಎಲ್ಲಾ ಕಾರ್ಯಕರ್ತರ ಅಭಿಲಾಸೆಯಾಗಿದೆ. ಜ.15ರ ನಂತರ ತುಮಕೂರು ಗ್ರಾಮಾಂತರಕ್ಕೆ ಹೊಸ ನಾಯಕ ಬರಬಹುದು. ● ದೀಪು ಬೋರೇಗೌಡ ಹೆಬ್ಬೂರು, ಯುವ ಮುಖಂಡ

– ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next