Advertisement
ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲೇ 45 ವರ್ಷಗಳ ಹಿಂದೆ ಸ್ಥಳೀಯರೇ ಆದ ಮಹದೇವಯ್ಯ(ಭೂತಯ್ಯ) ಪುಟ್ಟದಾಗಿ ಪೆಟ್ಟಿಗೆ ಹೋಟೆಲ್ ಇಟ್ಟುಕೊಂಡು ಮನೆಯಲ್ಲೇ ಅಡುಗೆ ಮಾಡಿಕೊಂಡು ತಂದು ಗ್ರಾಹಕರಿಗೆ ಬಡಿಸುತ್ತಿದ್ದರು. ಕಡಿಮೆ ದರದಲ್ಲಿ ಮನೆಯಲ್ಲೇ ಮಾಡಿದ ಆಹಾರ ಸಿಗುತ್ತಿದ್ದ ಕಾರಣ, ಜನರು ಮಹದೇವಯ್ಯರ ಹೋಟೆಲ್‌ಗೆ ಬರುತ್ತಿದ್ದರು. ಬೆಂಗಳೂರಿಂದ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಹೋಗುವ ಪ್ರವಾಸಿಗರು, ವಾಹನ ಸವಾರರು ಬೆಳಗ್ಗಿನ ತಿಂಡಿಗೆ ರಸ್ತೆ ಪಕ್ಕದಲ್ಲೇ ಇದ್ದ ಭೂತಯ್ಯನ ಹೋಟೆಲ್‌ಗೆ ಬರುತ್ತಿದ್ದರು. ಈಗ ಮಹದೇವಯ್ಯ ಅವರ ಮಗ ಶಿವಕುಮಾರ್ ಹೋಟೆಲ್ ನೋಡಿಕೊಳ್ಳುತ್ತಿದ್ದು, ಇವರಿಗೆ ಪತ್ನಿ ರೂಪಾ ಸಾಥ್ ನೀಡುತ್ತಾರೆ. ಮನೆಯ ಮುಂಭಾಗದಲ್ಲೇ ಗೋಡೆ ಕಟ್ಟಿ, ಜಂಕ್‌ಶೀಟ್ ಹಾಕಿಕೊಂಡು ಅದಕ್ಕೆ ಸಿದ್ದಲಿಂಗೇಶ್ವರ ಹೋಟೆಲ್ ಎಂದು ನಾಮಕರಣ ಮಾಡಿದ್ದಾರೆ.
ಈ ಹೋಟೆಲ್‌ನ ವಿಶೇಷ ತಿಂಡಿ ಅಂದ್ರೆ ಇಡ್ಲಿ. 40 ರೂ.ಗೆ 2 ತಟ್ಟೆ ಇಡ್ಲಿ, ವಡೆ ಜೊತೆಗೆ ಕೆಂಪ್ ಚಟ್ನಿ, ಸಾಗು ಹಾಗೂ ತುಪ್ಪ ಕೊಡುತ್ತಾರೆ. ತುಪ್ಪವನ್ನು ಮನೆಯಲ್ಲೇ ತಯಾರಿಸುತ್ತಾರೆ. 25 ರೂ.ಗೆ ರೈಸ್‌ಬಾತ್ ಸಿಗುತ್ತದೆ. ಬೆಳಗ್ಗೆ 7ರಿಂದ 12 ರವರೆಗೆ ಚಿತ್ರಾನ್ನ, ಟೊಮೆಟೋ ಬಾತ್, ಫಲಾವ್, ಪೂರಿ ಸಹ ಮಾಡಲಾಗುತ್ತದೆ. ಮಧ್ಯಾಹ್ನಕ್ಕೆ ಮುದ್ದೆ ಊಟ:
ತಿಂಡಿ ಜತೆಗೆ ಮುದ್ದೆ ಊಟಕ್ಕೂ ಹೋಟೆಲ್ ಹೆಸರುವಾಸಿ. 50 ರೂ.ಗೆ ಮುದ್ದೆ, ಅನ್ನ ಸೊಪ್ಪಿನ ಸಾರು, ಪಲ್ಯ, ಮಜ್ಜಿಗೆ, ಉಪ್ಪಿನಕಾಯಿ, ಹಪ್ಪಳ, ಸೌತೆ ಕಾಯಿ, ಈರುಳ್ಳಿ ಕೊಡ್ತಾರೆ. ಉಪ್ಸಾರು, ಬಸ್ಸಾರು, ಸಪ್ಪೆಸಾರು, ತರಕಾರಿ ಸಾರು, ಮೊಳಕೆ ಕಟ್ಟಿದ ಸಾರು ಹೀಗೆ ಒಂದೊಂದು ದಿನ ಒಂದೊಂದು ಬಗೆಯ ಸಾಂಬಾರ್ ಮಾಡ್ತಾರೆ.
Related Articles
ಮಂಗಳೂರು ಬೆಂಗಳೂರು ರಸ್ತೆಯ ಪಕ್ಕದಲ್ಲೇ ಈ ಹೋಟೆಲ್ ಇರುವ ಕಾರಣ, ಎಡೆಯೂರು, ಮಂಗಳೂರು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಉಡುಪಿ, ಹಾಸನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು, ಬೈಕ್‌ರೈಡ್ ಹೋಗುವವರು, ಇತರೆ ವಾಹನ ಸವಾರರು ಈ ಹೋಟೆಲ್‌ನ ಪ್ರಮುಖ ಗ್ರಾಹಕರು. ಈಗ ಬೈಪಾಸ್ ರೋಡ್ ಆಗಿದ್ರೂ ಕೆಲವರು ನೆನಪಿಸಿಕೊಂಡು ಈ ಹೋಟೆಲ್‌ನಲ್ಲಿ ತಿಂಡಿ ತಿಂದು ಹೋಗ್ತಾರೆ.
ಹೋಟೆಲ್ ಸಮಯ:
ಬೆಳಗ್ಗೆ 7 ಗಂಟೆಯಿಂದ ರಾತ್ರಿ 4 ಗಂಟೆಯವರೆಗೆ, ಭಾನುವಾರ ಮಧ್ಯಾಹ್ನದವರೆಗೆ ರಜೆ.
Advertisement
ಹೋಟೆಲ್ ವಿಳಾಸ:ಬಿ.ಎಂ. ರೋಡ್, ಪೊಲೀಸ್ ಠಾಣೆ, ಕುಣಿಗಲ್ ಟೌನ್. – ಭೋಗೇಶ ಆರ್. ಮೇಲುಕುಂಟೆ
– ಫೋಟೋ ಕೃಪೆ ಕುಣಿಗಲ್ ಲೋಕೇಶ್