ಬಂಟ್ವಾಳ: ಹಿಂದಿನ ವರ್ಷಗಳಲ್ಲಿ ಈ ಹೊತ್ತಿಗೆ ನೀರಿಲ್ಲದೆ ಭಣಗುಡು ತ್ತಿದ್ದ ತುಂಬೆ ಡ್ಯಾಂನಲ್ಲಿ ಈ ಬಾರಿ ಪೂರ್ತಿ ನೀರು ತುಂಬಿಕೊಂಡಿದೆ. ಮಳೆಯ ಮುನ್ನೆಚ್ಚರಿಕೆಯಾಗಿ ಅರ್ಧ ಮೀಟರ್‌ನಷ್ಟು ಕಡಿಮೆ ನಿಲ್ಲಿಸಲಾಗಿದೆ.
ಪ್ರಸ್ತುತ ತುಂಬೆ ಡ್ಯಾಂನಲ್ಲಿ 5.50 ಮೀ. ನೀರಿದ್ದು, ಸುಮಾರು ಒಂದೂವರೆ ತಿಂಗಳು ಮಳೆ ವಿಳಂಬವಾದರೂ ಮಂಗಳೂರಿನ ಜನತೆ ಆತಂಕ ಪಡಬೇಕಿಲ್ಲ. ಅಂದರೆ ಅಷ್ಟು ಸಮಯಕ್ಕೆ ಬೇಕಾಗುವ ನೀರು ಸಂಗ್ರಹವಿದೆ. ಜತೆಗೆ ಶಂಭೂರು ಡ್ಯಾಂನಲ್ಲಿಯೂ 18.90 ಮೀ. ನೀರಿದ್ದು, ಹೀಗಾಗಿ ಈ ಬಾರಿ ಕುಡಿಯುವ ನೀರಿನ ಬಗ್ಗೆ ಆತಂಕ ಪಡಬೇಕಿಲ್ಲ.
ಸ್ವಲ್ಪ ಸಮಯದ ಹಿಂದೆ ತುಂಬೆ ಡ್ಯಾಂನಲ್ಲಿ 6 ಮೀ.ವರೆಗೂ ನೀರು ನಿಲ್ಲಿಸಲಾಗಿತ್ತು. ಆದರೆ ಈಗ ಮಳೆಯ ನಿರೀಕ್ಷೆ ಇದ್ದು, ಅರ್ಧ ಮೀಟರ್ ನೀರು ಕಡಿಮೆ ಮಾಡಲಾಗಿದೆ. ಮುಂದೆ ಮಳೆ ಪರಿಸ್ಥಿತಿ ಗಮನಿಸಿಕೊಂಡು ಡ್ಯಾಂನ ಗೇಟ್‌ಗಳನ್ನು ಎತ್ತುವ ಕಾರ್ಯವೂ ನಡೆಯಲಿದೆ. ಮಳೆ ನೀರಿನ ಜತೆಗೆ ಮರದ ದಿಮ್ಮಿ, ಕಸಕಡ್ಡಿ ಹರಿದು ಬರುವುದರಿಂದ ಡ್ಯಾಂ ಶುದ್ಧವಾಗಿಡುವ ಉದ್ದೇಶದಿಂದ ಒಂದೊಂದೇ ಗೇಟ್ ತೆರೆಯಲಾಗುತ್ತದೆ. ಪೂರ್ತಿ ನೀರು ತುಂಬಿದರೆ ಎಲ್ಲ ಗೇಟ್ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ತುಂಬೆ ಡ್ಯಾಂನಲ್ಲಿ 5.50 ಮೀ. ನೀರಿದ್ದು, ಮಳೆಯ ಆತಂಕದಿಂದ ಅರ್ಧ ಮೀ. ನೀರು ಕಡಿಮೆ ನಿಲ್ಲಿಸಲಾಗಿದೆ. ಇದು ಮುಂದಿನ ಒಂದೂವರೆ ತಿಂಗಳಿಗೆ ಸಾಕು.
– ನರೇಶ್ ಶೆಣೈ, ಎಇಇ, ಮನಪಾ