Advertisement

ಜನಮನ ಸೂರೆಗೈದ ತುಳುವ ಐಸಿರಿ

05:40 PM Aug 29, 2019 | Team Udayavani |

ಮುಂಡ್ಕೂರಿನ ಸಂಕಲಕರಿಯದ ವಿಜಯಾ ಯುವಕ ಸಂಘ ಹಾಗೂ ಖುಷಿ ಮಹಿಳಾ ಮತ್ತು ಯುವತಿ ಮಂಡಲದ ವಾರ್ಷಿಕೋತ್ಸವ ಇತ್ತೀಚೆಗೆ ನಡೆದಾಗ ಗಮನ ಸೆಳೆದದ್ದು ಈ ಎರಡೂ ಸಂಘಟನೆಗಳ 57 ಸದಸ್ಯರು ಒಟ್ಟಾಗಿ ಪಾಲ್ಗೊಂಡು ಪ್ರದರ್ಶಿಸಿದ ತುಳುವ ಐಸಿರಿ ಹೆಸರಿನ ತುಳು ಸಾಂಸ್ಕೃತಿಕ ವೈಭವ. ಈ ಕಾರ್ಯಕ್ರಮ ತುಳುನಾಡಿನ ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರಗಳು, ದೈವಾರಾಧನೆ, ದೇವತಾರಾಧನೆ ಸಹಿತ ವಿವಿಧ ಧಾರ್ಮಿಕ ಆಚರಣೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮನರಂಜನೆಯ ಜತೆ ನೀಡಿದ್ದು ಸುಮಾರು 2.30 ಗಂಟೆಗಳ ಕಾಲ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿತು.

Advertisement

ಸಂಘದ ಗೌರವಾಧ್ಯಕ್ಷ 79ರ ಹರೆಯದ ಭಾಸ್ಕರ ಶೆಟ್ಟಿಯವರಂತಹ ವಯೋವೃದ್ಧರಿಂದ ಹಿಡಿದು 4-5ರ ಹರೆಯದ ಚಿಣ್ಣರೂ ಲವಲವಿಕೆಯಿಂದ ಪಾಲ್ಗೊಂಡ ಈ ಸಾಂಸ್ಕೃತಿಕ ವೈಭವದಲ್ಲಿ ಕಟೀಲು, ಬಪ್ಪನಾಡು ಕ್ಷೇತ್ರಗಳ ಪುಣ್ಯ ಪುರಾಣಗಳ ರೂಪಕ, ದೀಪಾವಳಿ ಆಚರಣೆ, ಮುಸ್ಲಿಂ ಹಾಗೂ ಕ್ರೈಸ್ತರ ದೇವರ ಆರಾಧನೆಗಳ ಚಿತ್ರಣ, ಕಲ್ಕುಡ-ಕಲ್ಲುರ್ಟಿ ದೈವಗಳ ಇತಿಹಾಸಗಳ ಚಿತ್ರಣ, ತುಳುವರ ಕಂಬಳ, ಕೋಳಿ ಅಂಕ, ಡೋಲು ಕುಣಿತ, ಕಂಗಿಲು, ಆಟಿಕಳಂಜ, ದೇವರ ಬಲಿಯಂತಃ ದಾರ್ಮಿಕ ಆಚರಣೆಗಳ ಪ್ರಸ್ತುತಿ ಗಮನ ಸೆಳೆದ ಅಂಶಗಳು. ರೂಪಕಗಳ ಜತೆ ಹಲವಾರು ಸುಂದರ ನೃತ್ಯಗಳೂ ಆಕರ್ಷಣೀಯವಾಗಿದ್ದು ಗಮನ ಸೆಳೆದವು. ಇಡೀ ಊರಿನ ಕಲಾವಿದರೇ ವೇದಿಕೆಯಲ್ಲಿ 2.30 ಗಂಟೆ ತಮ್ಮ ಪ್ರತಿಭೆ ಪ್ರದರ್ಶಿಸಿದಾಗ ಸೇರಿದ್ದ ಕಲಾಭಿಮಾನಿಗಳು ಖುಷಿಯಿಂದ ಕಾರ್ಯಕ್ರಮ ಆಸ್ವಾದಿಸಿದರು. ಮುಂದೆ ಒಂದೆರಡು ಪ್ರದರ್ಶನಗಳನ್ನು ಕಂಡರೆ ಈ ತುಳುವ ಐಸಿರಿ ಇನ್ನಷ್ಟು ಪ್ರಬುದ್ಧತೆಯನ್ನು ಪಡೆದು ವೃತ್ತಿಪರ ತಂಡಗಳಿಗೆ ಸವಾಲಾಗುವುದರಲ್ಲಿ ಸಂದೇಹವಿಲ್ಲ.

ಈ ಯಶಸ್ವಿ ಕಾರ್ಯಕ್ರಮದ ರೂವಾರಿ ಕಾರ್ನಿಕೊದ ಗತವೈಭವ ಖ್ಯಾತಿಯ ಕಲಾವಿದ ರಜತ್‌ ಕುಮಾರ್‌ ಸಸಿಹಿತ್ಲು. ಇವರ ನಿರಂತರ ಪರಿಶ್ರಮದಿಂದಾಗಿ ತುಳುವ ಐಸಿರಿ ಮಿಂಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ನೃತ್ಯ ಸಂಯೋಜನೆಯ ಜತೆ ಸಹನಿರ್ದೇಶಕಿಯಾಗಿ ತನ್ನನ್ನು ತೊಡಗಿಸಿಕೊಂಡ ದೀಕ್ಷಿತಾ ಕೂಡಾ ಈ ಯಶಸ್ಸಿಗೆ ಕಾರಣರಾಗಿದ್ದಾರೆ.

ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next