Advertisement
ಕರಾವಳಿಯ ಪ್ರಮುಖ ಜಾನಪದ ಕ್ರೀಡೆಯಾಗಿರುವ ಕಂಬಳವನ್ನು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆಸಲಾಗಿತ್ತು. ಜತೆಗೆ ಇತರ ಕಡೆಗಳಲ್ಲೂ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿದೆ. ಅದರಂತೆ ಶಿವಮೊಗ್ಗದಲ್ಲಿ ಈ ಬಾರಿ ಕಂಬಳ ನಡೆಸಲು ಅಲ್ಲಿನ ಉದ್ಯಮಿಗಳು, ಕರಾವಳಿ ಭಾಗದ ಪ್ರಮುಖರು ಹಾಗೂ ಇತರರು ಆಸಕ್ತಿ ತೋರಿದ್ದಾರೆ.
ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ-ಶಾಸಕ ಅಶೋಕ್ ಕುಮಾರ್ ರೈ “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಈ ಬಾರಿಯೂ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗುವುದು. ನವೆಂಬರ್ ಮೊದಲ ವಾರದಲ್ಲಿ ಜಿಲ್ಲಾ ಕಂಬಳ ಸಮಿತಿ ವತಿಯಿಂದ ಕಂಬಳ ನಡೆಸಲು ಉದ್ದೇಶಿಸಲಾಗಿದೆ’ ಎಂದರು.
Related Articles
ಬೆಂಗಳೂರಿನಲ್ಲಿ ಯಶಸ್ವಿಯಾದ ಕಾರಣದಿಂದ ನಾಡಿನ ಬೇರೆ ಬೇರೆ ಕಡೆಗಳಿಂದ ಕಂಬಳ ಆಯೋಜನೆಗೆ ಒಲವು ವ್ಯಕ್ತವಾಗಿದೆ. ಕರಾವಳಿ ಭಾಗದವರು ಹೆಚ್ಚಿರುವ ಮುಂಬಯಿಯಲ್ಲಿ ಕಂಬಳ ಮಾಡುವಂತೆ ಕೆಲವರು ಆಗ್ರಹಿಸಿದ್ದಾರೆ. ಆದರೆ ಅಲ್ಲಿಗೆ ಕೋಣಗಳನ್ನು ಕೊಂಡೊಯ್ಯುವುದು ಕಷ್ಟ ಎಂಬುದು ಕೆಲವರ ಅಭಿಪ್ರಾಯ. ಮತ್ತೂಂದೆಡೆ ಹಾಸನದಲ್ಲಿ ಕಂಬಳ ಮಾಡಲು ಕೆಲವರು ಆಸಕ್ತಿ ತೋರಿಸುತ್ತಿದ್ದಾರೆ.
Advertisement
ಹೊರಜಿಲ್ಲೆ ಕಂಬಳ: ಪ್ರಮುಖ ಸವಾಲುಗಳೇನು?ದೂರದೂರಿನಲ್ಲಿ ಕಂಬಳ ಮಾಡುವುದಾದರೆ ಕೋಣಗಳನ್ನು ಕರೆದುಕೊಂಡು ಹೋಗುವುದೇ ಆಯೋಜಕರಿಗೆ ಬಹುದೊಡ್ಡ ಸವಾಲು. ವಾಹನಗಳಲ್ಲಿ ಕೋಣಗಳನ್ನು ವೇಗವಾಗಿ ಕೊಂಡೊಯ್ಯುವಂತಿಲ್ಲ. ಕೋಣಗಳು ತುಂಬ ಸಮಯ ನಿಂತುಕೊಂಡೇ ಇದ್ದರೆ ಆಯಾಸವಾಗಿ ಕಾಲುನೋವು ಬಹುವಾಗಿ ಕಾಡುತ್ತದೆ. * ಹೊರ ಜಿಲ್ಲೆಯ ಕಂಬಳ ಇದ್ದರೆ ಕೋಣಗಳ ಪ್ರಯಾಣದ ಹಿನ್ನೆಲೆಯಲ್ಲಿ ಕಂಬಳದ ಮೊದಲು 1 ವಾರ ಹಾಗೂ ಬಳಿಕ 1 ವಾರ ಕೋಣಗಳಿಗೆ ವಿಶ್ರಾಂತಿಯೂ ಅಗತ್ಯ. ಹೀಗಾಗಿ ಕರಾವಳಿಯಲ್ಲಿ 3 ವಾರ ಕಂಬಳ ಕಷ್ಟ. * ಹೊರ ಜಿಲ್ಲೆಗಳಲ್ಲಿ ಕೋಣಗಳ ಉಸ್ತುವಾರಿ ನೋಡುವವರಿಗೆ ವಾಸ್ತವ್ಯ ಸಹಿತ ಇತರ ವ್ಯವಸ್ಥೆ ನಡೆಸಬೇಕಾಗುತ್ತದೆ. * ಹೊರಜಿಲ್ಲೆಯ ಆಹಾರ ಕ್ರಮ ಹಾಗೂ ಅಲ್ಲಿನ ಹವಾಮಾನವು ಕೆಲವು ಕೋಣಗಳಿಗೆ ಹೊಂದದೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯೂ ಇದೆ. * ಹೊರಜಿಲ್ಲೆಯ ಕಂಬಳಕ್ಕೆ ಕನಿಷ್ಠ 50-75 ಲಕ್ಷ ರೂ.ಗಳಿಗೂ ಅಧಿಕ ಖರ್ಚಿರುತ್ತದೆ. ಈ ಬಾರಿ “ಪಿಲಿಕುಳ ಕಂಬಳ’!
ಕರಾವಳಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ಹಿಂದೆ ನಡೆಯುತ್ತಿದ್ದ “ಪಿಲಿಕುಳ ಕಂಬಳ’ ಈ ಬಾರಿ ಮತ್ತೆ ಆರಂಭವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಜಿಲ್ಲಾ ಕಂಬಳ ಸಮಿತಿಯು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ “ಪಿಲಿಕುಳ ಕಂಬಳ’ ಮರು ಆರಂಭಕ್ಕೆ ವಿನಂತಿಸಿದ್ದು, ಅದಕ್ಕೆ ಜಿಲ್ಲಾಡಳಿತದಿಂದ ಪೂರಕ ಸ್ಪಂದನೆ ಸಿಕ್ಕಿದೆ. ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನಮನೆಯ ಮುಂಭಾಗದಲ್ಲಿರುವ “ನೇತ್ರಾವತಿ- ಫಲ್ಗುಣಿ’ ಜೋಡುಕರೆಯಲ್ಲಿ 85 ಜೊತೆ ಕೋಣಗಳು ಓಡಿದ್ದವು. ಬಳಿಕ ಕಂಬಳದ ವಿರುದ್ಧ ಪೆಟಾ ಸಂಸೆœ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತವು ಪಿಲಿಕುಳ ಕಂಬಳವನ್ನು ಸ್ಥಗಿತಗೊಳಿಸಿತ್ತು. 2018ರ ಕಂಬಳ ಋತುವಿನಲ್ಲಿ ಜಿಲ್ಲಾಡಳಿತ ಕಂಬಳ ನಡೆಸಲು ನಿರ್ಧರಿಸಿತ್ತಾದರೂ ಅನುದಾನ ದೊರೆಯದ ಹಿನ್ನೆಲೆಯಲ್ಲಿ ಪ್ರಸ್ತಾವನೆ ಮೂಲೆ ಸೇರಿತ್ತು. “ಮಹಾಸಭೆಯಲ್ಲಿ ದಿನಾಂಕ ಅಂತಿಮ’
“ಕಳೆದ ಬಾರಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಬಾರಿಯೂ ಬೆಂಗಳೂರಿನಲ್ಲಿ ಕಂಬಳ ಆಯೋಜನೆಯಾಗಲಿದೆ. ಇದರ ಜತೆಗೆ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಕೆಲವರು ಆಸಕ್ತಿ ವ್ಯಕ್ತಪಡಿಸಿದ್ದು, ಮುಂದಿನ ಮಹಾಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡು ದಿನಾಂಕ ಪ್ರಕಟಿಸಲಾಗುವುದು.”
ಡಾ| ಬೆಳಪು ದೇವೀಪ್ರಸಾದ್ ಶೆಟ್ಟಿ , ಅಧ್ಯಕ್ಷರು, ದ.ಕ. ಜಿಲ್ಲಾ ಕಂಬಳ ಸಮಿತಿ – ದಿನೇಶ್ ಇರಾ