Advertisement

ತುಳು ಯಕ್ಷಗಾನ ಸ್ಪರ್ಧೆ ಅಭಿನಯ ಕೌಶಲ ಅನಾವರಣ

12:37 PM Oct 26, 2018 | |

ಬೆಳುವಾಯಿ ಯಕ್ಷದೇವ ಮಿತ್ರಕಲಾ ಮಂಡಳಿ ಅಸ್ತಿತ್ವಗೊಂಡು ಇಪ್ಪತ್ತೂಂದು ವರ್ಷ ಕಳೆಯಿತು. ಮೂಡಬಿದಿರೆ ಪ್ರದೇಶವನ್ನು ಪ್ರಧಾನ ಕೇಂದ್ರವಾಗಿರಿಸಿ ಪ್ರತೀ ಮಳೆಗಾಲದಲ್ಲಿ ವೈವಿಧ್ಯ ಸೌಂದರ್ಯದ ಕಲಾಪ್ರದರ್ಶನ. ಆಧುನಿಕ ಪರಿಕಲ್ಪನೆಯ ಜನಪ್ರೀತ ರಂಗಪ್ರಯೋಗ. ಕಾರ್ಯಧ್ಯಕ್ಷ ದೇವಾನಂದ ಭಟ್ಟರ ಬಳಗದ ಅಚ್ಚುಕಟ್ಟಾದ ಸಂಯೋಜನೆ.

Advertisement

ಹಾಸ್ಯ-ಲಾಸ್ಯ, ಗಾನ ಮೇಳ, ಲಯ ವಿನ್ಯಾಸ, ನಾಟ್ಯ ಸಂಭ್ರಮ, ಯುಗಳ ಸಂವಾದ, ತಾಳಮದ್ದಳೆ ಕೂಟ, ತೆಂಕು- ಬಡಗುತಿಟ್ಟು ಕಲಾವಿದರ ಕೂಡಾಟ … ಎಲ್ಲೂ ಯಡವಟ್ಟು ಗೊಂದಲಗಳಿಲ್ಲದ ಸುವ್ಯವಸ್ಥೆ. ಸಾಂಪ್ರದಾಯಿಕ ಸ್ವರೂಪ ಹೊಂದಿದ ಚೌಕಿ ಮತ್ತು ರಂಗ ವೇದಿಕೆಯ ಸಿದ್ಧತೆ. ಮಳೆಗಾಲ ಆರಂಭವಾಗುತ್ತಿರುವಂತೆ ಕುತೂಹಲಭರಿತ ಕೆಲ ಖಾಯಂ ಪ್ರೇಕ್ಷಕರಿಗೆ ಯಕ್ಷದೇವರ ಆಟದ ಮುನ್ನೋಟದ ನಿರೀಕ್ಷೆ.

ಈ ಬಾರಿ 3 ದಿವಸಗಳಲ್ಲಿ 8 ತಂಡಗಳ ತುಳು ಯಕ್ಷಗಾನ ಸ್ಪರ್ಧೆ ನಿರೂಪಿತವಾಯಿತು. ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ವೇಷಧಾರಿ ಎಮ್‌.ಕೆ ರಮೇಶ ಆಚಾರ್ಯ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ತೀರ್ಪುಗಾರರಾಗಿ ನಿಯೋಜಿತರು. 

ಬಹುತೇಕ ಪ್ರಸಿದ್ಧ ಕಲಾವಿದರ ಜೊತೆ ಕೆಲ ಹವ್ಯಾಸಿಗಳು ಪಾಲ್ಗೊಂಡ ಶಿಸ್ತುಬದ್ಧ ತಂಡ. ಪರಿಶುದ್ಧ ರಾಗ-ತಾಳ-ಲಯ ಹೊಂದಿದ ಹಿಮ್ಮೇಳ. ಎಳೆಯರ ಪ್ರಯತ್ನಶೀಲತೆ. ಹಳೆಯ ವೇಷಧಾರಿಗಳ ಉಲ್ಲಾಸ. ಉತ್ತಮವಾಗಿ ಸಾಗಿದ ರಂಗ ಚಲನೆ.

ಸೊಗಸಾದ ವೇಷಭೂಷಣ. ಪ್ರಗಲ್ಬ ತುಳು ಭಾಷೆಯ ನುಡಿ ತೋರಣ. ಅಭಿನಯ ಕೌಶಲದಿಂದ ರಂಗಮಂಟಪ ಅನಾವರಣ. ಕೆಲ ಪ್ರಸಂಗಗಳಲ್ಲಿ ಬಳಸಿಕೊಂಡ “ತೆಂಗಿನ ಸೋಗೆ, ಮಡಕೆ, ಗೆರಸೆ, ಎಲೆ ಅಡಿಕೆ, ಭತ್ತ , ಬೆತ್ತ , ಕತ್ತಿ…’ ರಂಗ ಪರಿಕರಗಳು ದೃಶ್ಯ ಸಂಯೋಜನೆಗೆ ಉತ್ತಮ ಪರಿಣಾಮಕಾರಿಯಾಯಿತು. ಒಟ್ಟಿನಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡ ಪ್ರದರ್ಶನಗಳಲ್ಲಿ ಒಂದಕ್ಕಿಂದ ಮತ್ತೂಂದು ಶ್ರೇಷ್ಠವಾಗಿ ಕಾಣಿಸಿತು. “ಯಕ್ಷ ಉಚ್ಚಯ ತುಳು ಆಟದ ಪಂತೊ’ ತುಳು ಭಾಷಾಭಿಮಾನಿಗಳ ಮನಮುಟ್ಟಿತು. ಕೆಲ ಪುರಾಣ ಪ್ರಸಂಗಗಳನ್ನು ಕನ್ನಡದಷ್ಟೇ ಗಟ್ಟಿಯಾಗಿ ತುಳು
ಬಾಷೆಯಲ್ಲೂ ಪ್ರದರ್ಶಿಸಲು ಸಾಧ್ಯವೆನಿಸಿತು. ತುಳು ಸಾಹಿತ್ಯವನ್ನು ರಂಗದಲ್ಲಿ ಸಮೃದ್ಧವಾಗಿ ಬಳಸಬಲ್ಲ ಕಲಾವಿದರ ಸಂಖ್ಯೆಯು ವಿಪುಲವಾಗಿದೆ ಎಂಬುದು ವೇದ್ಯವಾಯಿತು.

Advertisement

ಸಿದ್ಧಕಟ್ಟೆ ಯಕ್ಷಾಂತರಂಗ ತಂಡದವರ “ಕೋಡಬ್ಬು ಬಾರಗ’ ಪ್ರಥಮ. ಕಾವೂರು ಸತ್ಯದೇವತಾ ಕಲಾಮಂಡಳಿ “ಬಾಲೆಮಾನಿ ಮಾಯಂದಾಲೆ’ ದ್ವಿತೀಯ ಮತ್ತು ಕೈರಂಗಳ ಗೋಪಾಲಕೃಷ್ಣ ಮೇಳಕ್ಕೆ “ಕುಡಿಯನ ಕಣ್‌’ ತೃತೀಯ ಸ್ಥಾನದ ವಿಜಯಮಾಲೆ ಪ್ರಾಪ್ತಿಯಾಯಿತು. ಈ ಮಧ್ಯೆ ಪ್ರಖ್ಯಾತ ತುಳು ಪ್ರಸಂಗ ಕತೃ ಅನಂತರಾಮ ಬಂಗಾಡಿ ಮತ್ತು ಅರುವ ಕೊರಗಪ್ಪ ರೈ ಅವರಿಗೆ “ಯಕ್ಷದೇವ ಪುರಸ್ಕಾರ’ ಸಲ್ಲಿಸಲಾಯಿತು. ತುಳು ಭಾಷಾ ಪ್ರೌಢಿಮೆ ಹೊಂದಿದ ಈ ಸಾಧಕರಿಬ್ಬರ ಆಯ್ಕೆ ಪ್ರಸ್ತುತವೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next