Advertisement

‘ಮನೆ ಮನೆಗೆ ವಿಕಿಪೀಡಿಯಾ’ಯೋಜನೆ

04:22 AM Mar 17, 2019 | |

ಮಹಾನಗರ : ತುಳು ಭಾಷೆ, ಸಂಸ್ಕೃತಿ ಉಳಿಸುವುದರ ಜತೆಗೆ ತುಳು ವಿಕಿಪೀಡಿಯಾ ಬರೆಹದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕರಾವಳಿ ವಿಕಿಮೀಡಿಯನ್ಸ್‌ ತಂಡವು ‘ಮನೆ ಮನೆಗೆ ವಿಕಿಪೀಡಿಯಾ’ ಎಂಬ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿದೆ.

Advertisement

ತುಳು ಭಾಷೆ ಇದೀಗ ಪಠ್ಯದ ವಿಷಯವಾಗಿದ್ದು, ಹಲವು ವಿದ್ಯಾರ್ಥಿಗಳು ತುಳು ಭಾಷೆಯಲ್ಲಿಯೇ ಪರೀಕ್ಷೆ ಬರೆಯುತ್ತಿದ್ದಾರೆ. ದೇಶದುದ್ದಗಲಕ್ಕೂ ಇರುವ ಮಂದಿಗೆ ಆನ್‌ಲೈನ್‌ನಲ್ಲಿ ತುಳು ಭಾಷೆಯ ಗುಣಮಟ್ಟದ ಲೇಖನಗಳು ಸಿಗಬೇಕು. ಇದಕ್ಕೆ ಹೆಚ್ಚಿನ ತುಳು ಲೇಖನಗಳು ವಿಕಿ ಪೀಡಿಯಾ ಸೇರಬೇಕೆಂಬ ಉದ್ದೇಶದಿಂದ ತಂಡವೊಂದು ಈಗಾಗಲೇ ವಿದ್ವಾಂಸರ ಮನೆಗಳಿಗೆ ತೆರಳಿ ಸಲಹೆ ಪಡೆಯುತ್ತಿದೆ.

ಮೊದಲನೇ ಹಂತದಲ್ಲಿ ವಿದ್ವಾಂಸರಾದ ಪ್ರೊ| ಅಮೃತ ಸೋಮೇಶ್ವರ, ಪ್ರೊ| ಬಿ.ಎ. ವಿವೇಕ್‌ ರೈ, ಪ್ರೊ| ಎ.ವಿ. ನಾವಡ ಅವರ ಮನೆಗೆ ತೆರಳಿ ವಿಕಿಪೀಡಿಯಾ ಯೋಜನೆ ವಿವರಿಸಿ, ಅವರ ಬಳಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ವಿಕಿಪೀಡಿಯಾದಲ್ಲಿ ವಿಕಿ ಸೋರ್ಸ್‌ ಎಂಬ ಪ್ರತ್ಯೇಕ ಪುಟವಿದೆ. ಇದಕ್ಕೆ ಪುಸ್ತಕಗಳ ಪ್ರತಿಯ ಪಿಡಿಎಫ್‌ ಹಾಕಲು ಅವಕಾಶವಿದೆ. ಓದುಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಯೋಜನೆಯಲ್ಲಿ ವಿದ್ವಾಂಸರ ಅನುಮತಿಯ ಮೇರೆಗೆ ಅವರ ಪುಸ್ತಕಗಳ ಪ್ರತಿಯನ್ನು ಇದರಲ್ಲಿ ಹಾಕುವ ಯೋಚನೆ ಈ ತಂಡಕ್ಕಿದೆ. ಇದರಿಂದ ಆನ್‌ ಲೈನ್‌ನಲ್ಲಿಯೇ ಪುಸ್ತಕದ ಜ್ಞಾನವನ್ನೂ ಪಡೆಯಬಹುದಾಗಿದೆ.

ಬರಹಗಾರರ ಹೆಚ್ಚಳಕ್ಕೆ ಪ್ರಾಶಸ್ತ್ಯ
ವಿಕಿಪೀಡಿಯದಲ್ಲಿ ತುಳು ಭಾಷೆಯಲ್ಲಿ ಲೇಖನ ಬರೆಯುವವರ ಸಂಖ್ಯೆ ಕಡಿಮೆ ಇದೆ. ಸದ್ಯ ಸುಮಾರು 25 ಮಂದಿ ಮಾತ್ರ ಸಕ್ರೀಯರಾಗಿದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಉದ್ದೇಶದಿಂದ 
‘ವಿಕಿಪೀಡಿಯಾ ಶಿಕ್ಷಣ ಯೋಜನೆ’ಯನ್ನು ಪರಿಚಯಿಸಲಾಗುತ್ತಿದೆ. ಇದಕ್ಕೆಂದು ದ.ಕ. ಜಿಲ್ಲೆಯ ಸೈಂಟ್‌ ಅಲೋಶಿಯಸ್‌ ಕಾಲೇಜು, ಮೂಡುಬಿದಿರೆಯ ಆಳ್ವಾಸ್‌ ಕಾಲೇಜು, ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಬೆಂಗಳೂರಿನ ಕ್ರೈಸ್ಟ್‌ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ಇದೀಗ ಮುಂದಿನ ಹಂತದಲ್ಲಿ ಮಂಗಳೂರಿನ ಕೆನರಾ ಕಾಲೇಜು, ಸುರತ್ಕಲ್‌ನ ಗೋವಿಂದ ದಾಸ ಕಾಲೇಜು ಕೂಡ ಸೇರ್ಪಡೆಯಾಗಲಿದೆ. 

ಈ ಹೊಸ ಯೋಜನೆಯ ಮುಖೇನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಯಾವ ರೀತಿ ವಿಕಿಪೀಡಿ ಯಾಕ್ಕೆ ಬರೆಯಬೇಕು, ಯಾವ ರೀತಿ ಅಪ್‌ಲೋಡ್‌ ಮಾಡಬೇಕು ಎಂಬ ತರಬೇತಿ ನೀಡಲಾಗುತ್ತದೆ. ನಿಗದಿಪಡಿಸಿದ ಸಮಯದೊಳಗೆ ಲೇಖನಗಳನ್ನು ಸಿದ್ಧಪಡಿಸಬೇಕಾಗಿದೆ. ಈ ಯೋಜನೆಗೆ ವಿದ್ಯಾರ್ಥಿಗಳ ಇಂಟರ್‌ನಲ್‌ ಮಾರ್ಕ್‌ನಲ್ಲಿಯೂ ಪರಿಗಣಿಸಲಾಗುತ್ತದೆ. ಕರಾವಳಿ ವಿಕಿಮೀಡಿಯನ್ಸ್‌ ಕೋಶಾಧಿಕಾರಿ ಡಾ| ಕಿಶೋರ್‌ ಕುಮಾರ್‌ ರೈ ಅವರು ಪ್ರತಿಕ್ರಿಯಿಸಿ, ತುಳು ಮತ್ತು ಕನ್ನಡ ಭಾಷೆಯಲ್ಲಿ ಮಹಿಳಾ ಸಂಬಂಧಿತ ಲೇಖನ ಹೆಚ್ಚಳಕ್ಕೆ ವಿಕಿ ವುಮೆನ್ಸ್‌ ಎಂಬ ತಂಡ ಶ್ರಮಿಸುತ್ತಿದೆ. ಮಹಿಳಾ ಬರಹಗಾರ್ತಿಯರು ತಂಡವೊಂದನ್ನು ಕಟ್ಟಿಕೊಂಡು ಮಹಿಳಾ ವಿಷಯಾಧಾರಿತ ಲೇಖನಗಳನ್ನು ಬರೆಯುತ್ತಾರೆ ಎನ್ನುತ್ತಾರೆ.

Advertisement

1,200ಕ್ಕೂ ಹೆಚ್ಚು ಲೇಖನ
2007ರಲ್ಲಿ ಅಂತರ್ಜಾಲದಲ್ಲಿ ತುಳು ವಿಕಿಪೀಡಿಯ ಪ್ರಾರಂಭವಾಯಿತು. 2014ರ ಮಾರ್ಚ್‌ನಲ್ಲಿ ಇದರಲ್ಲಿ 135 ಲೇಖನಗಳಿದ್ದವು. ಡಿಸೆಂಬರ್‌ ವೇಳೆಗೆ ಈ ಸಂಖ್ಯೆ 750ಕ್ಕೆ ಏರಿಕೆಯಾಯಿತು. 2015 ಫೆ. 2ರಂದು ತುಳುವಿನ 789 ಲೇಖನ ಲಭ್ಯವಿದ್ದವು. 2014ರ ಡಿಸೆಂಬರ್‌ನಲ್ಲಿ ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬದ ಬಳಿಕ ತುಳು ವಿಕಿಪೀಡಿಯ ಆಸಕ್ತರ ಸಂಖ್ಯೆ ಹೆಚ್ಚಿತು. ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಕಾರ್ಯಾಗಾರ ಮತ್ತು ಸಂಪಾದನೋತ್ಸವಗಳು ನಡೆದ ಬಳಿಕ ಲೇಖನಗಳ ಸಂಖ್ಯೆ ಹೆಚ್ಚಳದಿಂದ ಸ್ವತಂತ್ರ ವಿಶ್ವಕೋಶವಾಗಿ ರೂಪುಗೊಂಡಿತು ಪ್ರಸ್ತುತ 1,200ಕ್ಕೂ ಹೆಚ್ಚು ಪರಿಪೂರ್ಣ ಲೇಖನಗಳಿವೆ.

ತುಳು ಭಾಷೆಗೆ ಬರಲಿದೆ ವಿಕ್ಷನರಿ
ತುಳು ಭಾಷೆಯ ಪದದ ಅರ್ಥ, ಸಮಾನಾರ್ಥಕ ಪದ, ತುಳು ಭಾಷೆಗೆ ಇತರೇ ಭಾಷೆಯಲ್ಲಿ ಅರ್ಥ ತಿಳಿಸುವಂತಹ ತುಳು ಭಾಷೆಯ ವಿಕ್ಷನರಿ ಕೆಲಸಗಳು ಈಗಾಗಲೇ ಪ್ರಾರಂಭವಾಗಿವೆ. ಈಗಾಗಲೇ 300 ಪದಗಳನ್ನು ಅಪ್‌ಲೋಡ್‌ ಮಾಡಲಾಗಿದ್ದು, ಸುಮಾರು 600 ಪದಗಳ ಜೋಡಣೆಯ ಬಳಿಕ ಲೈವ್‌ ಆಗಲಿದೆ.

ಕಾಲೇಜುಗಳಲ್ಲಿ ಕಾರ್ಯಾಗಾರ
ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರೆಯಬಹುದು. ಅದರಲ್ಲಿಯೂ ಯುವಕರು ಈ ಬಗ್ಗೆ ಗಮನಹರಿಸಬೇಕು. ಈ ಉದ್ದೇಶದಿಂದ ಯುವ ಬರಹಗಾರರು ವಿಕಿಪೀಡಿಯಾಗೆ ಬರೆಯುವ ಸಲುವಾಗಿ ಕಾಲೇಜುಗಳಲ್ಲಿ ಕಾರ್ಯಾಗಾರ ಮಾಡಲಾಗುತ್ತಿದೆ.
– ಡಾ| ವಿಶ್ವನಾಥ ಬದಿಕಾನ, 
ಕರಾವಳಿ ವಿಕಿಮೀಡಿಯನ್ಸ್‌ ಅಧ್ಯಕ್ಷ

 ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next