ಉರ್ವಸ್ಟೋರ್: ತುಳು ಭಾಷೆಯನ್ನು ಅತ್ಯಂತ ಸರಳ ರೀತಿಯಲ್ಲಿ ತುಳುವೇತರರಿಗೆ ಮನ ಮುಟ್ಟುವ ರೀತಿಯಲ್ಲಿ ಕಲಿಸುವಂಥ ಕಾರ್ಯ ತುಳು ಸಾಹಿತ್ಯ ಅಕಾಡೆಮಿಯಿಂದ ನಿರಂತರವಾಗಿ ನಡೆಯಲಿ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಉರ್ವದಲ್ಲಿರುವ ಅಕಾಡೆಮಿಯ ಚಾವಡಿಯಲ್ಲಿ ಶುಕ್ರವಾರ ಆಯೋಜಿಸಲಾದ ತುಳುವೇತರರಿಗೆ ತುಳು ಕಲಿಕಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಳುವನ್ನು ಆಡು ಭಾಷೆಯ ಮೂಲಕ ಕಲಿಸುವ ಕೆಲಸ ನಡೆಯಬೇಕು. ಈ ಮೂಲಕ ತುಳು ಕಲಿಕೆ ತುಳುವೇತರರಿಗೂ ಸುಲಭವಾಗಲಿದೆ. ಮೊದಲ ಬಾರಿಗೆ ಈ ನೆಲೆಯಲ್ಲಿ ತುಳು ಅಕಾಡೆಮಿಯು ವಿನೂತನ ಪ್ರಯತ್ನ ಕೈಗೊಂಡಿದೆ. ಇದು ತುಳು ಭಾಷೆಗೆ ಸಲ್ಲಿಸುವ ಬಹುದೊಡ್ಡ ಸೇವೆ ಎಂದವರು ವಿಶ್ಲೇಷಿಸಿದರು.
ಪಾಲಿಕೆ ಮುಖ್ಯಸಚೇತಕ ಶಶಿಧರ ಹೆಗ್ಡೆ ಮಾತನಾಡಿ, ತುಳು ಭಾಷೆ ತುಳುನಾಡಿನ ಸಂಸ್ಕೃತಿಯ ರಾಯಭಾರಿಯಾಗಿದೆ. ಈ ನಿಟ್ಟಿನಲ್ಲಿ ತುಳು ಕಲಿಕೆಯ ಪ್ರಯತ್ನ ಆರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ರೂಪಕಲಾ ಆಳ್ವ ವಿಶೇಷ ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯ ರಾಧಾಕೃಷ್ಣ, ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ್ ರೈ ಉಪಸ್ಥಿತರಿದ್ದರು. ನರೇಶ್ ಸಸಿಹಿತ್ಲು ಸ್ವಾಗತಿಸಿದರು.