ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದವರಾದ 74 ವರ್ಷದ ಅಂಬಡೆ ಬೈಲು ಚಂದ್ರಶೇಖರ ಭಂಡಾರಿ ಅವರು 1970ರಲ್ಲಿ ಎಸ್.ಆರ್. ಹೆಗ್ಡೆ , ರತ್ನ ಕುಮಾರ್ ಅವರೊಂದಿಗೆ ಮಂಗಳೂರಿನಲ್ಲಿ ತುಳುಕೂಟವನ್ನು ಸ್ಥಾಪಿಸಿ ತುಳು ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ವೇದಿಕೆಯನ್ನು ಹುಟ್ಟುಹಾಕಿದ್ದರು. ಮುಂದೆ ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ತುಳು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ತುಳು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆ ಯಲ್ಲಿ ಕೈಜೋಡಿಸುತ್ತಾ ಬಂದಿದ್ದ ಇವರು ಉಜಿರೆಯಲ್ಲಿ ಜರಗಿದ ವಿಶ್ವ ತುಳು ಸಮ್ಮೇಳನದ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಸಮ್ಮೇಳನದ ವಲಯ ಸಮಿತಿಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಕಳೆದ ಬಾರಿ ಕೂಡ ತುಳು ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಭಂಡಾರಿ ಹೆಸರು ಕೇಳಿಬಂದಿದ್ದರೂ ಕೊನೆಯ ಹಂತದಲ್ಲಿ ಅದು ಕೈತಪ್ಪಿಹೋಗಿತ್ತು.
Advertisement
ಹಿರಿಯ ಕಾಂಗ್ರೆಸಿಗರಾಗಿರುವ ಎ.ಸಿ. ಭಂಡಾರಿಯವರು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ರಾಜ್ಯ ಕಾಂಗ್ರೆಸ್ ಕಿಸಾನ್ ಸೆಲ್ ಸಹ ಅಧ್ಯಕ್ಷರಾಗಿ ಅನೇಕ ಪ್ರಮುಖ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಅವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ಆಡಳಿತ ಮೊಕ್ತೇಸರಾಗಿ 27 ವರ್ಷಗಳ ಸೇವೆ ಸಲ್ಲಿಸಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದಾರೆ.
“ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷತೆ ದೊರಕಿರುವುದು ಸಂತಸ ತಂದಿದೆ. ತುಳು ಭಾಷೆ ಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಂಘಟಕನಾಗಿ ಕಳೆದ 50 ವರ್ಷಗಳಿಂದ ಸೇವೆ ಮಾಡುತ್ತಾ ಬಂದಿದ್ದೇನೆ. ತುಳು ಭಾಷೆ ಯಲ್ಲಿ ಹೆಚ್ಚು ಸಾಹಿತ್ಯ ಕೃತಿಗಳು ಸೃಷ್ಟಿಯಾಗ ಬೇಕು. ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಿಗಬೇಕು. ಇದಲ್ಲದೆ ಪ್ರಸ್ತುತ ಶಾಲೆಗಳಲ್ಲಿ ತುಳು ತೃತೀಯ ಭಾಷೆಯಾಗಿ ಕಲಿಕೆಯಾಗುತ್ತಿದ್ದು ಇದು ಇನ್ನಷ್ಟು ವಿಸ್ತಾರ ಗೊಳ್ಳಬೇಕು. ತುಳು ಭಾಷೆ 8ನೇ ಪರಿಚ್ಛೇದ ದಲ್ಲಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ಈಗಾಗಲೇ ಬಹಳಷ್ಟು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಹೊಸದಿಲ್ಲಿಯಲ್ಲಿ ಪ್ರಧಾನಿ ಹಾಗೂ ಗೃಹಸಚಿವರ ಬಳಿ ತೆರಳಿದ ನಿಯೋಗದಲ್ಲಿ ನಾನು ಹೋಗಿದ್ದೆ. ಈ ಕಾರ್ಯಕ್ಕೆ ಎಲ್ಲರ ಸಹಕಾರ ಪಡೆದುಕೊಂಡು ಇನ್ನಷ್ಟು ಒತ್ತು ನೀಡಲಾಗುವುದು’ ಎಂದು ಎ.ಸಿ. ಭಂಡಾರಿ ಅವರು”ಉದಯವಾಣಿ’ಗೆ ತಿಳಿಸಿದ್ದಾರೆ.