Advertisement

ಪತ್ತನಾಜೆ ತುಳು ಚಿತ್ರ ಬಿಡುಗಡೆ

10:48 AM Sep 02, 2017 | |

ಉಡುಪಿ: ತುಳು ಚಿತ್ರರಂಗದ ಬಹುನಿರೀಕ್ಷೆಯ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ “ಪತ್ತನಾಜೆ’ ಸಿನೆಮಾ ಕರಾವಳಿಯಾದ್ಯಂತ ಶುಕ್ರವಾರ ಬಿಡುಗಡೆಗೊಂಡಿದ್ದು, ತೆರೆ ಕಂಡ ಎಲ್ಲ ಚಿತ್ರಮಂದಿರಗಳಲ್ಲೂ ಮೊದಲ ದಿನವೇ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. 

Advertisement

ಕಲಾಜಗತ್ತು ಕ್ರಿಯೇಶನ್ಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ “ಪತ್ತನಾಜೆ’ – ತುಳುವರ ಪರ್ಬ ಎನ್ನುವ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ ಶುಕ್ರವಾರ ಉಡುಪಿಯ ಆಶೀರ್ವಾದ್‌ ಚಿತ್ರಮಂದಿರದಲ್ಲಿ ನಡೆಯಿತು. 

ಕನ್ನಡ ಚಿತ್ರರಂಗದ ಹಿರಿಯ ನಟ ರಾಮಕೃಷ್ಣ ದೀಪ ಬೆಳಗಿಸಿ ಮಾತನಾಡಿ, ಇದೊಂದು ಉತ್ತಮ ತುಳು ಚಿತ್ರವಾಗಿದ್ದು, ಸುಂದರ ಛಾಯಾಗ್ರಹಣ, ಬೋರು ಹೊಡೆಸದ ಹಾಸ್ಯವಿರುವ ಸಿನೆಮಾವಾಗಿದೆ. 

ತುಳು ಹಾಗೂ ಕನ್ನಡ ಭಾಷೆಯ ಧ್ವಜವನ್ನು ಈ ಚಿತ್ರ ಮತ್ತಷ್ಟು ಎತ್ತರಕ್ಕೇರಿಸಲಿ. ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ. ತುಳು ಚಿತ್ರರಂಗ ನಿರಂತರ ಪ್ರಗತಿ ಸಾಧಿಸುತ್ತಿದ್ದು, ಇನ್ನಷ್ಟು ಬೆಳವಣಿಗೆ ಹೊಂದಲಿ ಎಂದು ಶುಭಹಾರೈಸಿದರು.
 
ತುಳುವಿಗೂ ಸವಲತ್ತು ಸಿಗಲಿ
ಕರಾವಳಿಯ ಆಚಾರ- ವಿಚಾರ, ಸಂಸ್ಕೃತಿಯನ್ನು ಮೈಗೂಢಿಸಿಕೊಂಡಿರುವ ಪತ್ತನಾಜೆ ಚಿತ್ರದಲ್ಲಿ ಈ ಮಣ್ಣಿನ ಸೊಗಡಿದೆ. ಉತ್ತಮ ಪ್ರದರ್ಶನ ಕಾಣಲಿ ಎಂದ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗಕ್ಕೂ ವಿಶೇಷ ಸವಲತ್ತುಗಳು ಸಿಗಲಿ. ಈ ಸಂಬಂಧ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು. 

ಮಾಜಿ ಶಾಸಕ ರಘುಪತಿ ಭಟ್‌, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉದ್ಯಮಿಗಳಾದ ಗುರ್ಮೆ ಸುರೇಶ್‌ ಶೆಟ್ಟಿ, ಮನೋಹರ್‌ ಶೆಟ್ಟಿ ಶುಭಹಾರೈಸಿದರು.
 
ಚಿತ್ರದ ಕಥೆ- ಚಿತ್ರಕಥೆ- ನಿರ್ದೇಶನ ಹೊಣೆಹೊತ್ತ ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಮಾತನಾಡಿ 30 ವರ್ಷದಿಂದ ತುಳುವಿನಲ್ಲಿ ಚಿತ್ರ ಮಾಡುವ ಆಸೆಯಿತ್ತು. ಅದು ಈಗ ನೆರವೇರಿದೆ. ತುಳು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಗುವ ನಿರೀಕ್ಷೆಯಿದೆ ಎಂದರು.

Advertisement

ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಉದಯ ಶೆಟ್ಟಿ ಮುನಿಯಾಲು, ರಘುರಾಮ ಶೆಟ್ಟಿ ಕಂಡಾಳ, ಪತ್ತನಾಜೆ ಚಿತ್ರ ಸಮಿತಿಯ ಎರ್ಮಾಳ್‌ ಶಶಿಧರ್‌ ಕೆ. ಶೆಟ್ಟಿ, ಕೊಡವೂರು ದಿವಾಕರ ಶೆಟ್ಟಿ, ಸುಧಾಕರ ಆಚಾರ್ಯ, ಟಿ. ಸತೀಶ್‌ ಶೆಟ್ಟಿ, ಮನೋಹರ್‌ ಶೆಟ್ಟಿ ತೋನ್ಸೆ, ನಿರ್ಮಾಪಕ ಫ್ರಾಂಕ್‌ ಫೆರ್ನಾಂಡಿಸ್‌, ಸೀತಮ್ಮ ಶೆಟ್ಟಿ, ಶಮಿನಾ ಆಳ್ವ, ಚಿತ್ರದ ನಟರಾದ ಸೂರ್ಯ ರಾವ್‌, ಪ್ರತೀಕ್‌ ಶೆಟ್ಟಿ, ಸುರೇಂದ್ರ ಕುಮಾರ್‌ ಹೆಗ್ಡೆ, ನಟಿಯರಾದ ರೇಶ್ಮಾ ಶೆಟ್ಟಿ, ಕಾಜಲ್‌, ಜ್ಯೂಲಿಯೆಟ್‌ ಉಪಸ್ಥಿತರಿದ್ದರು.

ಬಲ್ಗೇರಿಯಾದಲ್ಲಿ ಮಿಸ್‌ ಟೀನ್‌ ಗ್ರಾಂಡ್‌ ಸೀ ಯೂನಿವರ್ಸ್‌ ವಿಜೇತರಾದ ಕರಾವಳಿಯ ಶಾಸ್ತ್ರಾ ಶೆಟ್ಟಿ ಹಾಗೂ ರೇಶ್ಮಾ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 

ಉಡುಪಿ ಸಮಿತಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸ್ವಾಗತಿಸಿದರು. ಸತೀಶ್‌ ಶೆಟ್ಟಿ ವಂದಿಸಿದರು. ಈಶ್ವರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

8 ಚಿತ್ರಮಂದಿರಗಳಲ್ಲಿ   ಪ್ರದರ್ಶನ
“ಪತ್ತನಾಜೆ’ ತುಳವರ ವಿಶೇಷ ದಿನವಾಗಿದ್ದು, ಆ ದಿನ ಹುಟ್ಟಿದ ಚಿತ್ರದ ನಟಿಯ ಸುತ್ತ ಸುತ್ತುವ ಕಥೆಯ ಚಿತ್ರಣವಿರುವ ಚಿತ್ರವೂ ಯಕ್ಷಗಾನದ ಕುರಿತು ವಿಶೇಷ ಬೆಳಕು ಚೆಲ್ಲಿದೆ. ಮಂಗಳೂರಿನ ಜ್ಯೋತಿ, ಕಾರ್ಕಳದ ಪ್ಲಾನೆಟ್‌, ಸುಳ್ಯದ ಸಂತೋಷ್‌ ಸಹಿತ ಕರಾವಳಿಯ ಒಟ್ಟು 8 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಉಡುಪಿಯ ಆಶೀರ್ವಾದ್‌ ಚಿತ್ರಮಂದಿರದಲ್ಲಿ ಶಾಲಾ ಮಕ್ಕಳಿಗೆ ಸಾಮೂಹಿಕವಾಗಿ ವೀಕ್ಷಿಸಲು ಅವಕಾಶ ಮಾಡಿದ್ದು, ಟಿಕೆಟ್‌ ಖರೀದಿಯಲ್ಲೂ ವಿಶೇಷ ರಿಯಾಯಿತಿ ಒದಗಿಸಲಾಗುವುದು ಎಂದು ಚಿತ್ರದ ಸಮಿತಿ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next