ರಂಗಭೂಮಿ, ತುಳು ಸಿನೆಮಾ ಹಾಗೂ ಕಿರುತೆರೆ ಮೂಲಕ ಹೆಸರು ಮಾಡಿದ ಕರಾವಳಿ ಹುಡುಗ ಶೋಭರಾಜ್ ಪಾವೂರು ಇದೀಗ ತುಳು ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಎದುರಾಗುತ್ತಿದ್ದಾರೆ. ತುಳುವಿನಲ್ಲಿ ಹೊಸ ಮ್ಯಾನರಿಸಂ ಹುಟ್ಟುಹಾಕಿದ ಶೋಭರಾಜ್ ಈ ಬಾರಿ ಆ್ಯಕ್ಷನ್ ಕಟ್ ಹೇಳುವ ಜತೆಗೆ ನಟನೆಯ ಮೂಲಕವೂ ಸುದ್ದಿ ಮಾಡುತ್ತಿದ್ದಾರೆ.
ಇದಿಷ್ಟು ಅವರ ಕನಸಿನ ಸಿನೆಮಾ “ಪೆಪ್ಪೆರೆರೆ ಪೆರೆರೆರೆ’ಯ ವಿಷಯ. ಸದ್ಯ ಕೋಸ್ಟಲ್‌ವುಡ್‌ನಲ್ಲಿ ಎಲ್ಲೆಲ್ಲೂ ಹವಾ ಎಬ್ಬಿಸಿರುವ ಕೆಲವೇ ಕೆಲವು ಸಿನೆಮಾಗಳ ಪೈಕಿ ಶೋಭರಾಜ್ ಅವರ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಕಾಣುತ್ತಿರುವ ಈ ಸಿನೆಮಾದ ಬಗ್ಗೆ ಶೋಭರಾಜ್, ಸಾಯಿಕೃಷ್ಣ, ಚೈತ್ರಾ ಶೆಟ್ಟಿ ಅವರ ವಿಭಿನ್ನ ಪ್ರಚಾರ ಶೈಲಿಯು ಗಮನಸೆಳೆಯುತ್ತಿದೆ. ಇದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಅಂದಹಾಗೆ ಸಿನೆಮಾದ ಕೆಲಸವೆಲ್ಲ ಪೂರ್ಣವಾಗಿ ಈಗ ಬಿಡುಗಡೆಯ ತವಕದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಎರಡು ತಿಂಗಳೊಳಗೆ ಮಂಗಳವಾದ್ಯದ ಸ್ವರ ಮೊಳಗಲಿದೆ. ನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶದೊಂದಿಗೆ ಸಿನೆಮಾ ರೆಡಿಯಾಗಿದೆ.
ಶೋಭರಾಜ್ ಪಾವೂರು ನಿರ್ದೇಶನ-ನಟನೆಯ ಈ ಸಿನೆಮಾದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸತೀಶ್ ಬಂದಲೆ, ಸಾಯಿಕೃಷ್ಣ, ದೀಪಕ್ ರೈ ಪಾಣಾಜೆ, ಜೆ.ಪಿ. ತೂಮಿನಾಡು, ಚೈತ್ರಾ ಶೆಟ್ಟಿ, ಮೈತ್ರಿ ಕಶ್ಯಪ್, ಪಿಂಕಿ ರಾಣಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ವಿಶೇಷವೆಂದರೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ವಿಶೇಷ ಪಾತ್ರದಲ್ಲಿ ಈ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ.
ಶೋಭರಾಜ್ ಅವರು ತುಳು ರಂಗಭೂಮಿಯಲ್ಲಿ ಅರಳಿದ ಪ್ರತಿಭೆ. ಬಳಿಕ ಸಿನೆಮಾ ಮತ್ತು ಕಿರುತೆರೆಯಲ್ಲಿ ಅವರು ಮಾಡಿರುವ ಸಾಧನೆ ಉಲ್ಲೇಖನೀಯ. ಈ ಹಿಂದೆ “ಏಸ’ ಎಂಬ ಸಿನೆಮಾದಲ್ಲಿ ದುಡಿದು ಅದರಲ್ಲೇ ತನ್ನ ಪ್ರತಿಭೆಯನ್ನು ತೋರಿಸಿದವರು. ಕಥೆ, ಸಂಭಾಷಣೆಯಲ್ಲೂ ಕೈಯಾಡಿಸಿದ್ದಾರೆ. ಏಸಕ್ಕೂ ಇವರದ್ದೇ ಕಥೆ. ಅದೊಂದು ಯಕ್ಷಗಾನ ಕಲಾವಿದನನ್ನು ಕೇಂದ್ರೀಕರಿಸಿ ಹೆಣೆದ ಕಥೆ. ಈ ಸಿನೆಮಾ ಸ್ಟಾರ್ ಮಾನ್ಯತೆಯನ್ನೂ ಪಡೆದಿತ್ತು.
ಶೋಭರಾಜ್ ಅವರು ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರು ಬಾಯಾರ್ ಸಂಗೀತದಲ್ಲಿ ಮೂಡಿ ಬಂದಿರುವ ನಾಲ್ಕು ಹಾಡುಗಳು ಈ ಸಿನೆಮಾದಲ್ಲಿದೆ. ಹಾಡುಗಳ ಸಾಹಿತ್ಯ ಶಶಿರಾಜ್ ಕಾವೂರು ಹಾಗೂ ಉಮೇಶ್ ಮಿಜಾರು ಅವರದ್ದು. ಹಾಡುಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ದಿನೇಶ್ ಇರಾ